ದಾವಣಗೆರೆ, ಮೇ 10, : ದಾವಣಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಿದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಶುಕ್ರವಾರ ಬಸವ ಜಯಂತಿಯಂದು ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತಿ ಅಂಗವಾಗಿ ನಡೆದ 108ನೇ ವರ್ಷದ ಬಸವ ಪ್ರಭಾತ್ ಪೇರಿಯಲ್ಲಿ ಬಸವಣ್ಣನವರ ಪುತ್ಥಳಿ, ವಚನ ಗ್ರಂಥಗಳ ಮೆರವಣಿಗೆ, ಜನಜಾಗೃತಿ ಪಾದಯಾತ್ರೆ, ನವಜಾತ ಶಿಶುಗಳಿಗೆ ನಾಮಕರಣ, ಶ್ರೀ ಮೃತ್ಯುಂಜಯ ಅಪ್ಪಗಳ, ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾನಿಧ್ಯವಹಿಸಿದ ಮಾತನಾಡಿದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ , ಬಸವ ಜಯಂತಿಯ 112ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಜಯಂತಿ ಪ್ರಾರಂಭವಾದ ಈ ವಿರಕ್ತಮಠದಲ್ಲಿ ಇಂದು ಆಚರಣೆ ಮಾಡಿದೆವು, ಅಂದು ಆರಂಭವಾದ ಈ ಬಸವ ಜಯಂತಿಯನ್ನು ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಗಂಗಾ ನದಿಯ ಉಗಮ ಸ್ಥಳ ಗಂಗೋತ್ರಿಯಾದರೆ ಬಸವ ಜಯಂತಿಯ ಉಗಮ ಸ್ಥಳ ದಾವಣಗೆರೆಯ ವಿರಕ್ತಮಠವಾಗಿದೆ. ಇಲ್ಲಿ ಇಂದು ವಿಶೇಷವಾಗಿ ನವಜಾತ ಶಿಶುಗಳನ್ನು ತೊಟ್ಟಿಲಿಗೆ ಹಾಕಿ ಚನ್ನಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ನೀಲಾಂಬಿಕೆ, ಗಂಗಾಂಬಿಕೆ ಸೇರಿದಂತೆ ಹಲವಾರು ಶರಣರ ಹೆಸರುಗಳನ್ನು ನಾಮಕರಣ ಮಾಡಲಾಯಿತು ಎಂದರು.
ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ಆಚರಣೆ ಮಾಡಬೇಕು, ಬಸವ ತತ್ವಗಳನ್ನು ಯಾರು ಬದುಕಿನಲ್ಲಿ ಆಚರಣೆ ಮಾಡುತ್ತಾರೋ ಅಂತಹವ ಮನೆಯಲ್ಲಿ ಜಗಳಗಳು ಇರುವುದಿಲ್ಲ, ಶಾಂತಿ ನೆಮ್ಮದಿ ಇರುತ್ತದೆ. ಎಲ್ಲರನ್ನೂ ಪ್ರೀತಿ ಮಾಡುವಂತಹ ವಿಶ್ವಕುಟುಂಬ ಭಾವನೆಯನ್ನು ಬಸವಣ್ಣನವರು ಬಿತ್ತಿದ್ದಾರೆ. ಬಸವಣ್ಣನವರು ತಿಳಿಸಿದಂತೆ ಮಾನವರಲ್ಲಿ ದೇವರನ್ನು ಕಾಣಲು ಹೇಳಿದ್ದಾರೆ. ಮಾನವರಲ್ಲಿ ದೇವರನ್ನು ಕಂಡಾಗ ಅಲ್ಲಿ ಜಗಳಗಳು ಇರಲು ಸಾಧ್ಯವಿಲ್ಲ. ಎಲ್ಲ ವರ್ಗದವರಿಗೂ ಸಮಾನತೆಯ ಬದುಕನ್ನು ನೀಡಿದವರು ಬಸವಣ್ಣನವರು ಎಂದರು.
ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ಎಸ್.ಓಂಕಾರಪ್ಪ, ಚನ್ನಬಸವ ಶೀಲವಂತ್, ಕುದುರಿ ಉಮೇಶ, ಕುಂಟೋಜಿ ಚನ್ನಪ್ಪ, ಜಾಲಿಮರದ ಕೊಟ್ರೇಶ, ಮಹಾದೇವಮ್ಮ, ಬೆಳ್ಳೂಡಿ ಮಂಜುನಾಥ, ಚಿಂದೋಡಿ ಶಂಭುಲಿAಗಪ್ಪ, ಮಹಾಲಿಂಗೇಶ, ಕೆ.ಜಿ.ಯಲ್ಲಪ್ಪ, ವಿನಾಯಕ, ವಿರಕ್ತಮಠ ಶಾಲೆಯ ರೋಷನ್, ಡಾ.ನಜೀರ್ ಅಹಮದ್, ಕೀರ್ತಿ, ಶರಣಬಸವ, ಕುಮಾರ ಸ್ವಾಮಿ, ಬೆಳ್ಳೂಡಿ ಮಂಜುನಾಥ, ಸಾಲಿಗ್ರಾಮ ಗಣೇಶ ಶೆಣೈ, ಎಂ.ಸಿ.ರೇಖಾ, ಅಕ್ಕಮಹಾದೇವಿ, ಬಸವ ಕಲಾಲೋಕದ ಶಶಿಧರ, ಅರುಣ ಇತರರು ಇದ್ದರು.
ಈ ಸಂದರ್ಭದಲ್ಲಿ ಗಣೇಶ, ಷಣ್ಮುಖಪ್ಪ ಸ್ವಾಮೀಜಿಗಳಿಂದ ಬಸವ ದೀಕ್ಷೆ ಪಡೆದರು. ಜನಜಾಗೃತಿ ಪಾದಯಾತ್ರೆಯು ವಿರಕ್ತಮಠದಿಂದ ಹೊರಟು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜ ಪೇಟೆ, ಕಾಳಿಕಾದೇವಿ ರಸ್ತೆ ಮೂಲಕ ದೊಡ್ಡಪೇಟೆಯ ವಿರಕ್ತಮಠಕ್ಕೆ ತಲುಪಿತು.