ದಾವಣಗೆರೆ; ಏ.24 : ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮೂಲಕ ಗುಣಾತ್ಮಕ ಪ್ರತಿನಿಧಿ ಆಯ್ಕೆಯಾಗಬೇಕೆಂದು ಸ್ವೀಪ್ ಸಮಿತಿ ನಿರಂತರ ಪ್ರಯತ್ನ ಮಾಡುತ್ತಿದ್ದು ಬಾನಂಗಳಲ್ಲಿ ಮತದಾನ ಜಾಗೃತಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಬಲೂನ್ ಹಾರಿಬಿಡುವ ಮೂಲಕ ಚಾಲನೆ ನೀಡಿದರು.
ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಾಲಿಕೆ ಕಟ್ಟಡದ ಮೇಲೆ ಮತದಾರರ ಜಾಗೃತಿಗಾಗಿ 12 ಅಡಿ ಸುತ್ತಳತೆಯುಳ್ಳ ಹೀಲಿಯಂ ತುಂಬಿದ ಬಲೂನ್ ಹಾರಿಬಿಡಲಾಯಿತು.
ಕಡ್ಡಾಯವಾಗಿ ಮತದಾನ ಮಾಡಿ, 2024 ರ ಮೇ 07 ರಂದು ಮಂಗಳವಾರ ಎಂಬ ಘೋಷದಡಿ ಬಲೂನ್ ಹಾರಿ ಬಿಡಲಾಯಿತು. ಈ ಬಲೂನ್ 100 ಅಡಿ ಎತ್ತರದಲ್ಲಿ ಹಾರಾಡುವ ಮೂಲಕ ದಾವಣಗೆರೆ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ಪ್ರದರ್ಶನವಾಗುವಂತೆ ಅನಾವರಣ ಮಾಡುವ ಮೂಲಕ ಚುನಾವಣಾ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಆರೋಗ್ಯ ಇಲಾಖೆ ಕಾರ್ಯಕ್ರಮ ಅಧಿಕಾರಿಗಳಾದ ಡಾ; ಗಂಗಾಧರ್, ಡಾ; ರೇಣುಕಾರಾಧ್ಯ, ಡಾ; ಮಂಜುನಾಥ ಪಾಟೀಲ್, ಸುರೇಶ್ ಬಾರ್ಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.