ದಾವಣಗೆರೆ:
ನೀರು ಕೇವಲ ಸಂಪನ್ಮೂಲವಲ್ಲ. ಅದು ಇಡೀ ಜೀವ ಸಂಕುಲದ ಜೀವಾಮೃತ. ನೀರಿನ ಬಳಕೆ ಕುರಿತಂತೆ ಎಚ್ಚರಿಕೆ ವಹಿಸಬೇಕು. ನೀರನ್ನು ಜವಾಬ್ದಾರಿಯಿಂದ ಬಳಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ವಕೀಲರ ಸಂಘ, ಎಸ್.ಬಿ.ಐ, ಆಶ್ರಯದಲ್ಲಿ ವಕೀಲರ ಸಾಂಸ್ಕೃತಿಕ ಸಭಾ ಭವನದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಜಲ ದಿನಾಚರಣೆ ಮತ್ತು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಅಂತರ್ಜಲ ರಕ್ಷಣಗೆ ಮುಂದಾಗಿ
ಭೂಮಿಯಲ್ಲಿನ ಅಂತರ್ಜಲ ಕುಸಿಯುತ್ತಿದ್ದು, ಪ್ರತಿಯೊಬ್ಬರು ಅಂತರ್ಜಲ ರಕ್ಷಣಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ನಾವು ನೀರಿನ ಮೂಲಗಳನ್ನು ಉಳಿಸಿಬೇಕಾಗಿದೆ. ಮಳೆ ನೀರು ಮರುಪೂರ್ಣದಿಂದ ಅಂತರ್ಜಲ ಹೆಚ್ಚಾಗುವಂತೆ ಮಾಡಬೇಕಾಗಿದೆ. ಜಾಗತಿಕ ಹವಾಮಾನ ಬದಲಾವಣೆಯಿಂದ ಕುಡಿಯುವ ನೀರಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ನೀರಿನ ಬಳಕೆ ಕುರಿತಂತೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಅಗತ್ಯವಾಗಿದೆ. ನೀರನ್ನು ಆದಷ್ಟು ಉಳಿಸಬೇಕು. ವ್ಯರ್ಥವಾಗಿ ಪೋಲಾಗದಂತೆ ಜಾಗರೂಕತೆಯಿಂದ ಬಳಕೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಈ ಜಾಗೃತಿ ಮೂಡಬೇಕು ಎಂದು ಕರೆ ನೀಡಿದರು.
ನೀರಿಗಾಗಿಯೇ ಯುದ್ದ ನಡೆಯುವ ಕಾಲ ದೂರವಿಲ್ಲ
ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ವಕೀಲರು ಸಾಮಾಜಿಕ ಶಿಲ್ಪಿಗಳು. ಸಮಾಜದ ಎಲ್ಲಾ ಸ್ತರಗಳಲ್ಲಿ ಅವರ ಪಾತ್ರ ಮಹತ್ವ. ಜನಾಂಗೀಯ ಹತ್ಯೆ, ಇಂಧನಗಳ ಮೂಲಗಳಿಗಾಗಿ ಯುದ್ದ ನಡೆದಿದ್ದು, ಮುಂಬರುವ ದಿನಗಳಲ್ಲಿ ನೀರಿಗಾಗಿಯೇ ಯುದ್ದ ನಡೆಯುವ ಕಾಲ ದೂರವಿಲ್ಲ. ಕಾರಣ ನಮ್ಮ ನೀರಿನ ಮೂಲಗಳನ್ನು ಉಳಿಸೋಣ ಎಂದು ಕರೆ ನೀಡಿದರು.
1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ ಮಾತನಾಡಿ, ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳಲ್ಲಿ ನೀರನ್ನು ಪೋಲಾಗದಂತೆ . ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು.
ನೀರು ಮತ್ತು ಮಣ್ಣಿನ ನಾಶವಾದರೆ ಮಾನವನ ನಾಶ
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಡಾ.ಹೆಚ್.ಲಕ್ಷ್ಮಿಕಾಂತ ಮಾತನಾಡಿ, ನೀರು ಮತ್ತು ಮಣ್ಣಿನ ನಾಶವಾದರೆ ಮಾನವನ ನಾಶ ಖಂಡಿತ ಎಂದು ಕಳವಳ ವ್ಯಕ್ತ ಪಡಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಎಸ್.ಟಿ.ಎಫ್.ಸಿ. 1ರ ನ್ಯಾಯಾಧೀಶ ಎನ್.ಶ್ರೀಪಾದ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದಶರಥ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ ಕುಮಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಶಿವಪ್ಪ ಗಂಗಪ್ಪ ಸಲಗರೆ, ಹಿರಿಯ ಸಿವಿಲ್ ನ್ಯಾಯಾಧೀಶರು, ಡಿಎಲ್‍ಎಸ್‍ಎ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಎಸ್.ಬಿ.ಐ ಪ್ರಾದೇಶಿಕ ವ್ಯವಸ್ಥಾಪಕ ಅನಿಲ್ ಬಿಹಾರಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜು ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಇತರರು ಇದ್ದರು.