ದಾವಣಗೆರೆ :
ಲೋಕಸಭಾ ಚುನಾವಣೆ ನಡೆಯುತ್ತಿದ್ದು ಇದನ್ನು ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕವಾದ ಕೆಲಸ ಮಾಡಬೇಕು. ಎಲ್ಲಾ ಚುನಾವಣಾ ತಂಡಗಳು ನಿಯಮ ಮತ್ತು ಸಂದರ್ಭೋಚಿತ ವಿವೇಚನೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಫ್ರೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ಟೀಮ್ ಮುಖ್ಯಸ್ಥರಿಗೆ ಏರ್ಪಡಿಸಲಾದ ಚುನಾವಣಾ ಕರ್ತವ್ಯಗಳು ಮತ್ತು ಕರ್ತವ್ಯದಲ್ಲಿದ್ದಾಗ ಅನುಸರಿಸಬೇಕಾದ ಕ್ರಮ, ನಿಯಮಗಳು, ಮಾದರಿ ನೀತಿ ಸಂಹಿತೆ ಅನುಷ್ಠಾನದ ಕುರಿತಂತೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಪಕ್ಷಪಾತ, ನಿರ್ಲಕ್ಷ್ಯತೆ ವಹಿಸುವಂತಿಲ್ಲ
ಫ್ರೈಯಿಂಗ್ ಸ್ಕ್ವಾಡ್‍ಗೆ ಕಾರ್ಯನಿರ್ವಾಹಕ ದಂಡಾಧಿಕಾರಿಯ ಅಧಿಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. ಚುನಾವಣಾ ಉದ್ದೇಶಕ್ಕೆ ಹಂಚಿಕೆ ಮಾಡಲು ಬಳಸಲು ಸಂಗ್ರಹಿಸಲಾದ ಹಣ, ಮದ್ಯ, ಉಚಿತ ಕೊಡುಗೆಗಳಾದ ಸೀರೆ, ಶಾಲು, ಆಭರಣ, ಕೂಪನ್‍ಗಳು, ಕಿಚನ್ ವಸ್ತುಗಳು ಕಂಡು ಬಂದಲ್ಲಿ ವಶಕ್ಕೆ ಪಡೆದು ತನಿಖೆ ಮಾಡಿ ಅಕ್ರಮ ಎಂದಾದಲ್ಲಿ ಪ್ರಕರಣ ದಾಖಲಿಸುವ ಅಧಿಕಾರ ಇದೆ. ಕರ್ತವ್ಯದಲ್ಲಿ ಯಾವುದೇ ಪಕ್ಷಪಾತ, ನಿರ್ಲಕ್ಷ್ಯತೆ ವಹಿಸುವಂತಿಲ್ಲ ಎಂದರು.
ಡಮ್ಮಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ
ಜಿಪಂ ಸಿಇಒ ,ಎಂ.ಸಿ.ಸಿ.ನೋಡಲ್ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಮತದಾರರ ಮೇಲೆ ಆಮಿಷವೊಡ್ಡಲು ಚೆಕ್‍ಪೋಸ್ಟ್ ಬದಲಾಗಿ ಸ್ವ ಸಹಾಯ ಗುಂಪುಗಳಿಗೆ ನೇರವಾಗಿ ಹಣ ನೀಡುವ ಮೂಲಕ ಹಂಚಿಕೆ ಮಾಡುವ ಸಂಭವವಿದೆ. ಲೇವಾದೇವಿ ವ್ಯವಹಾರಗಾರರ ಮೂಲಕವೂ ವ್ಯವಹಾರ ನಡೆಯಬಹುದು. ಮತದಾರರಿಗೆ ಯಾವುದೋ ಖಾತೆಯಿಂದ ನೆಫ್ಟ್, ಆರ್.ಟಿ.ಜಿ.ಎಸ್ ಮಾಡಬಹುದು. ವಾಹನದ ಟೈರ್‌ಗಳಲ್ಲಿ, ಬಾನೆಟ್ ಒಳಗೆ, ನೀರು, ಹಾಲಿನ ಟ್ಯಾಂಕರ್ ನಲ್ಲಿ ಹಣ ಸಾಗಣೆ, ಸರಕು ವಾಹನಗಳಲ್ಲಿ ಹಣ ಸಾಗಣೆ ಸಂಭವವಿದೆ.
ಚುನಾವಣೆಯಲ್ಲಿ ಕೆಲವರು ನಾಮಮಾತ್ರಕ್ಕೆ ನಾಮಪತ್ರ ಸಲ್ಲಿಸಿ ವಾಹನ ಅನುಮತಿ ಪಡೆದು ಬೇರೆಯವರಿಗೆ ನೀಡುವರು. ಮತ್ತು ಇದೇ ರೀತಿ ಬೇರೆ ಅಭ್ಯರ್ಥಿಗೆ ಸಹಾಯವಾಗಲೆಂದು ಡಮ್ಮಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುತ್ತಾರೆ, ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದರು.
ಜಾತಿ, ಧರ್ಮದ ಆಧಾರದಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾವಹಿಸಬೇಕು. ಎಫ್‍ಎಸ್‍ಟಿ, ಎಸ್‍ಎಸ್‍ಟಿ ತಂಡಗಳಿಗೆ ಬೇಕಾದ ಎಲ್ಲಾ ಬಂದೋಬಸ್ತ್ ಮತ್ತು ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದರು.
ಚುನಾವಣಾ ವೆಚ್ಚ ಮೇಲ್ಚಿಚಾರಣಾ ಸಮಿತಿ ನೋಡಲ್ ಅಧಿಕಾರಿ ಗಿರೀಶ್ ಅವರು ಪ್ರಜಾಪ್ರತಿನಿಧಿ ಕಾಯಿದೆ ನಿಯಮಗಳು ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಕಳುಹಿಸಬೇಕಾದ ವರದಿಗಳ ಬಗ್ಗೆ ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್ ಜಿ.ಎಸ್.ಟಿ. ನಿಯಮಗಳು ಮತ್ತು ಸರಕು ಸಾಗಾಣಿಕೆ ವೇಳೆ ಏನೆಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕೆನ್ನುವ ಬಗ್ಗೆ ಮಾಹಿತಿ ನೀಡಿದರು.
ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜ ಮದ್ಯ ಸಾಗಣೆ, ಅಂಗಡಿಗಳ ಕಾರ್ಯನಿರ್ವಹಣೆ ಸಮಯ ಮತ್ತು ನಿಯಮಗಳ ಬಗ್ಗೆ ತಿಳಿಸಿದರು.