ಹರಿಹರ (Harihara) : ಭಾರತೀಯರ ನಡುವಿನ ಸಾಮಾಜಿಕ, ಆರ್ಥಿಕ ಮೇಲು, ಕೀಳನ್ನು ದೂರಗೊಳಿಸಿ ಸಮ ಸಮಾಜ ನಿರ್ಮಿಸಲು ಯುವ ಜನರು ಪಣ ತೊಡಬೇಕಾಗಿದೆ ಎಂದು ಪ್ರಗತಿಪರ ಚಿಂತಕ, ನಟ ಅಹಿಂಸಾ ಚೇತನ್ ಹೇಳಿದರು.
ನಗರದ ಪಿಡಬ್ಲ್ಯುಡಿ ಪ್ರಬಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಮ ಸಮಾಜ ನಿರ್ಮಾಣಕ್ಕಾಗಿ ಸಮಾನತೆಯ ವಿಷಯ ಕುರಿತು ನಡೆದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಒಟ್ಟಾರೆ ಸಂಪತ್ತಿನ ಬಹುಭಾಗವು ಬೆರಳೆಣಿಕೆಯಷ್ಟು ವ್ಯಕ್ತಿಗಳ ಕೈವಶದಲ್ಲಿದೆ ಎಂದರೆ ದೇಶದ ಬಂಡವಾಳ ಶಾಹಿ ನೀತಿಯಲ್ಲಿರುವ ಲೋಪವನ್ನು ವ್ಯಕ್ತಪಡಿಸುತ್ತದೆ. ಶೇ.3 ರಷ್ಟಿರುವ ಬ್ರಾಹ್ಮಣ ಸಮುದಾಯದವರು ದೇಶದ ಸಾಮಾಜಿಕ, ಧಾರ್ಮಿಕ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ.
ದೇಶದ ಸಂಪತ್ತಿನ ಕೇಂದ್ರೀಕರಣ ತಪ್ಪಬೇಕಿದೆ, ಪ್ರತಿಯೊಬ್ಬ ಪ್ರಜೆಯೂ ಕನಿಷ್ಠ ಮೂಲ ಸೌಲಭ್ಯಗಳೊಂದಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ, ಇನ್ನೂ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಎಲ್ಲಾ ಸಮುದಾಯದವರು ಮುಖ್ಯವಾಹಿನಿಯಲ್ಲಿರಲು ಅವಕಾಶ ಕಲ್ಪಿಸಬೇಕಿದೆ, ಈ ಕ್ಷೇತ್ರಗಳನ್ನು ಕೆಲವರ ಕಪಿ ಮುಷ್ಟಿಯಲ್ಲಿ ಮುಕ್ತಗೊಳಿಸಬೇಕಿದೆ ಎಂದರು.
ಶತಮಾನಗಳಿಂದ ಹಕ್ಕುಗಳಿಂದ ವಂಚಿತರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರು, ಅಲೆಮಾರಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರಬೇಕಿದೆ. ಇದಕ್ಕಾಗಿ ಅವರಲ್ಲಿ ವೈಚಾರಿಕತೆ, ಶಿಕ್ಷಣದ ಜ್ಞಾನ ತುಂಬಬೇಕಿದೆ ಎಂದರು.
ಅಂಬೇಡ್ಕರ್, ಪೆರಿಯಾರ್‍ರಂತಹ ವಿಚಾರವಂತರ ಪಂಥವನ್ನು ಅಪ್ಪಿಕೊಳ್ಳಬೇಕು, ಈ ದೇಶದ ಬಡ, ಮಧ್ಯಮ ವರ್ಗ ಹಾಗೂ ಮಹಿಳೆಯರು ಬಲ ಪಡೆಯಬೇಕಿದೆ. ಆಗ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯ. ಯುವ ಜನರು, ಪ್ರಗತಿಪರರ ಸಹಕಾರದಿಂದ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಬೇಕಿದೆ ಎಂದರು.
Read also : ಹಣ ದುರುಪಯೋಗ, ಕರ್ತವ್ಯ ಲೋಪ ಆರೋಪ: ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಅಮಾನತು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಈ ಹಿಂದೆ ಬಸ್ ಟಿಕೆಟ್, ಅಡುಗೆ ಅನಿಲದ ದರದಲ್ಲಿ ಅಲ್ಪ ಏರಿಕೆಯಾದರೂ ದೇಶದ ಜನ ಸಾಮಾನ್ಯರು ರಸ್ತೆಗಳಿದು ಪ್ರತಿಭಟನೆ ಮಡುತ್ತಿದ್ದರು, ಈಗ ಅಡುಗೆ ಅನಿಲ ದರ, ಜಿಎಸ್‍ಟಿ, ಬಸ್ ಇತರೆ ದರಗಳು ಗಗನ ಮುಟ್ಟಿದ್ದರೂ ಬಲವಾದ ಪ್ರತಿರೋಧದ ಧ್ವನಿ ಮೊಳಗದಿರುವುದು ವಿಪರ್ಯಾಸ ಎಂದರು.
ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಬಿ.ಮಗ್ದುಮ್ ಸಾಬ್, ಹುಲಿಕಟ್ಟಿ ಚನ್ನಬಸಪ್ಪ, ನಗರಸಭಾ ಸದಸ್ಯ ಕೆ.ಬಿ.ರಾಜಶೇಖರ್, ಆಮ್ ಆದ್ಮಿ ಪಾರ್ಟಿ ಮುಖಂಡ ಹಲಸಬಾಳು ಬಸವರಾಜ್, ಮೊಹ್ಮದ್ ಗೌಸ್, ಶಶಿ ನಾಯ್ಕ್, ಇಖ್ರಾ ಅಕಾಡಮಿ ಮುಖ್ಯಸ್ಥ ಅಬ್ದುಲ್ ರಹಮಾನ್, ಕರವೇ ಮುಖಂಡ ರಮೇಶ್ ಮಾನೆ, ಪ್ರೀತಮ್ ಬಾಬು, ಕಡ್ಲೆಗೊಂದಿ ತಿಮ್ಮಣ್ಣ, ಚೌಡಪ್ಪ ಸಿ., ಸಂತೋಷ್, ರಾಜಪ್ಪ, ಆನಂದ ಬೆಳ್ಳೂಡಿ, ಯಲ್ಲಪ್ಪ ಇದ್ದರು.