ದಾವಣಗೆರೆ : ಯುವ ಜನರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಭಾರತ ಕಟ್ಟುವಲ್ಲಿ ತಮ್ಮ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ.ಎಂ.ವಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಮ್ಮ ಭಾರತ ದೇಶ, ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದೆ. ಮತದಾನ ಪ್ರತಿಯೊಬ್ಬರ ಹಕ್ಕು, ಇದನ್ನು ಚಲಾಯಿಸುವುದು ನಮ್ಮ ಕರ್ತವ್ಯ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ನಮ್ಮ ಸಂವಿಧಾನ ನೀಡಿರುವಂತಹ ಹಕ್ಕನ್ನು ನಾವು ಪ್ರಬಲವಾಗಿ ಬಳಸಿಕೊಂಡರೆ ನಮಗೆ ಉಜ್ವಲ ಭವಿಷ್ಯವನ್ನು ನಮ್ಮ ದೇಶಕ್ಕೆ ನೀಡಬಹುದು.
ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದರು. ಕ್ಷೇತ್ರದಲ್ಲಿ 1946 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ 17,06,169 ಕ್ಕೂ ಹೆಚ್ಚು ಮತದಾರರಿದ್ದಾರೆ. ಅದರಲ್ಲಿ 50,000 ಕ್ಕಿಂತ ಹೆಚ್ಚು ಯುವ ಮತದಾರರಿದ್ದಾರೆ. ಈ ಬಾರಿಯ ಮತದಾರ ಚೀಟಿಯಲ್ಲಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಇದರಿಂದ ನಿಮ್ಮ ಮತಗಟ್ಟೆ ಇರುವ ಸ್ಥಳ, ಮತಗಟ್ಟೆ ಸಂಖ್ಯೆಯನ್ನು ತಿಳಿಸುತ್ತದೆ. ನಂತರ ಪ್ರತಿಜ್ಞಾವಿಧಿ ಭೋದಿಸಿದರು. ಯುವ ಮತದಾರರಿಂದ ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ.ಬಿ.ಇಟ್ನಾಳ್ ಮಾತನಾಡಿ, ಶೇ.85 ರಷ್ಟು ಮತದಾನ ಮಾಡಿಸುವುದು ನಮ್ಮ ಗುರಿಯಾಗಿದೆ. ಚುನಾವಣೆಯಲ್ಲಿ ಹೆಚ್ಚು ಮತದಾನವಾಗುವುದರಿಂದ ಅತ್ಯುತ್ತಮರ ಆಯ್ಕೆ ಸಾಧ್ಯ, ಈ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕು, ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳಬೇಕು. 18 ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಕರ್ತವ್ಯ ನಿಭಾಯಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದಲ್ಲಿ ಮುಂದಾಗಿ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂದರು.
ಯಾವುದೇ ಆಸೆ-ಆಮಿಷಗಳಿಗೆ ಮತವನ್ನು ಮಾರಾಟ ಮಾಡಿದರೆ, ನಮ್ಮತನವನ್ನು ಮಾರಾಟ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬೇಬಿ ಸುನೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಿಕಿ ಜಯಲಕ್ಷ್ಮೀಬಾಯಿ ವಿದ್ಯಾರ್ಥಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಭಾರತ ಭೂಪಟ ಆಕಾರದಲ್ಲಿ ನಿಲ್ಲುವ ಮೂಲಕ ಮೇ 7 ರಂದು ಮತದಾನ ಮಾಡಿ ಎಂಬ ಸಂದೇಶ ಗಮನ ಸೆಳೆಯಿತು.