ದಾವಣಗೆರೆ :
ಅರ್ಥಿಕಾಭಿವೃದ್ದಿಯಲ್ಲಿ ಮಹಿಳೆಯ ಪಾತ್ರವು ಇದ್ದು ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇನ್ಸ್‍ಫೈರ್ ಇನ್‍ಕ್ಲೂಜನ್ ಧೈಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಹಿಳೆಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಅರ್ಥಿಕ ಸ್ವಾವಲಂಬಿಗಳಾಗಲು ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನು ಹಾಗೂ ಸಹಕಾರವನ್ನು ನೀಡುವ ಆವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಣ್ಣನ್ನು ಗೌರವದಿಂದ ಕಾಣಬೇಕು
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ.ಮ.ಕರೆಣ್ಣವರ ಮಾತನಾಡಿ, ಹೆಣ್ಣನ್ನು ಗೌರವದಿಂದ ಕಾಣಬೇಕು, ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೋ ಅಲ್ಲಿನ ವಾತಾವರಣ ಬಹಳ ಸೌಖ್ಯದಿಂದ ಕೂಡಿರುತ್ತದೆ. ಮೊದಲು ನಮ್ಮ ಮನೆಯನ್ನು ನೆಮ್ಮದಿ, ಸಂತೋಷದಿಂದ ಇಟ್ಟುಕೊಳ್ಳಬೇಕು. ದೌರ್ಜನ್ಯವನ್ನು ತಡೆಯುವುದು ಹೆಣ್ಣು ಮಕ್ಕಳಿಂದ ಸಾಧ್ಯ, ಪ್ರತಿಯೊಬ್ಬರ ಗಂಡಿನ ಯಶಸ್ಸಿನ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ. ಅವರು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಬಹುದೊಡ್ಡ ಪಾತ್ರ ವಹಿಸುತ್ತಾರೆ. ಒಂದು ಮಗುವಿನ ಬೆಳವಣಿಗೆ ಹಿಂದೆ ತಾಯಿಯ ಅಪಾರ ಶ್ರಮ ಇರುತ್ತದೆ. ತಾಯಿಗೆ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಗುಣವಿರುತ್ತದೆ, ಎಲ್ಲವನ್ನೂ ನಿಭಾಯಿಸುವವಳು ತಾಯಿಯಾಗಿದ್ದಾಳೆ ಎಂದು ತಿಳಿಸಿದರು.
ಎಲ್ಲಿ ನಾರಿಯನ್ನು ಗೌರವಿಸಲಾಗುತ್ತದೋ ಅಲ್ಲಿ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಮಹಿಳೆ ಮತ್ತು ಪುರುಷ ಸೇರಿರುವ ಸಮಾಜವಿದು. ಸಮಬಾಳು-ಸಮಪಾಲು ಎಂದಾಗ ಮಾತ್ರ ಅರ್ಥ ಲಭಿಸುವುದು. ಮಹಿಳೆ ಹೇಗೆ ಅಕ್ಕ, ತಂಗಿ, ಮಗಳು, ಅಮ್ಮ, ಗೆಳತಿ ಹೀಗೆ ಎಲ್ಲ ಪಾತ್ರ ವಹಿಸುತ್ತಾಳೋ ಪುರುಷ ಕೂಡ, ಅಣ್ಣ, ತಮ್ಮ, ಮಗ, ಗಂಡ, ಗೆಳೆಯ ಹೀಗೆ ಪಾತ್ರ ನಿರ್ವಹಿಸುತ್ತಾನೆ. ಆದ್ದರಿಂದ ಇಬ್ಬರ ಪಾತ್ರ ಸಮನಾಗಿದ್ದರೆ ಉತ್ತಮ ಸಮಾಜ ಸಾಧ್ಯ ಎಂದರು.
ಇದೇ ಸಂದಂರ್ಭದಲ್ಲಿ ಬೇಟಿ ಬಜಾವೋ ಬೇಟಿ ಪಡಾವೋ ಅಭಿಯಾನದಡಿ ಮಕ್ಕಳಿಗಾಗಿ ಇರುವ ಹಲವಾರು ಕಾಯ್ದೆ ಕಾನೂನುಗಳನ್ನು ಕುರಿತಾದ ಬೋಚರ್‍ಗಳನ್ನು ಸಹ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು.ಎಸ್ ಬಳ್ಳಾರಿ, ಆರೋಗ್ಯ ಇಲಾಖೆಯ ಆರ್.ಸಿ.ಹೆಚ್ ಅಧಿಕಾರಿ ಡಾ.ರೇಣುಕಾರಧ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ, ಶಿಶು ಅಭಿವೃದ್ದಿ ಅಧಿಕಾರಿ ಕವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.