ಹರಿಹರ (Harihara) : ಉದ್ಯೋಗ ಆಧಾರಿತ ಕೋರ್ಸ್ ಆಯ್ಕೆ ಮಾಡಲು ವಿದ್ಯಾರ್ಥಿಗಳು ಆಧ್ಯತೆ ನೀಡಬೇಕೆಂದು ನಗರದ ಡಿಆರ್‍ಎಂ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಅಧ್ಯಾಪಕ ಮೊಹಮ್ಮದ್ ನಸ್ರುಲ್ಲಾ ಡಿ. ಹೇಳಿದರು.
ನಗರದ ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ನಂತರ ಮುಂದೇನು? ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹೆಚ್ಚಿನ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಜಿಟಿಟಿಸಿ, ನರ್ಸಿಂಗ್, ಚಿತ್ರಕಲೆ ಇತರೆ ಕೋರ್ಸ್‍ಗಳು ಉದ್ಯೋಗ ದೊರಕಿಸುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತವೆ.
ವಿಜ್ಞಾನ, ಗಣಿತ ಕಷ್ಟ ಎನಿಸುವ ವಿದ್ಯಾರ್ಥಿಗಳು ಆ ವಿಷಯಗಳಿಲ್ಲದೆ ಇರುವ ಕೋರ್ಸ್ ಕಲಿಯಲು ಅವಕಾಶವಿದೆ, ಕೋರ್ಸ್ ಆಯ್ಕೆಯಲ್ಲಿ ನೆರೆಹೊರೆಯವರು, ಸ್ನೇಹಿತರನ್ನು ಕುರುಡರಂತೆ ಅನುಸರಿಸಬಾರದು, ನಮ್ಮ ಆಸಕ್ತಿ ಹಾಗೂ ಬೇಡಿಕೆಯನ್ನಾಧರಿಸಿದ ಕೋರ್ಸ್‍ಗಳನ್ನು ಪತ್ತೆ ಹಚ್ಚಿ ಪ್ರವೇಶ ಪಡೆಯಬೇಕೆಂದರು.
ಮನೆಯಲ್ಲಿದ್ದುಕೊಂಡೆ ಉತ್ತಮ ಕೋರ್ಸ್ ಪಡೆಯಬೇಕೆಂದರೆ ಕಷ್ಟಕರ, ಸ್ವಂತ ಊರಿನಿಂದ ದೂರವಿರುವಂತಹ ಸಂದರ್ಭ ಬಂದರೂ ಹಿಂದೇಟು ಹಾಕಬಾರದು, ಎಲ್ಲೆಡೆ ಸರ್ಕಾರಿ ಹಾಸ್ಟೆಲ್‍ಗಳ ಲಭ್ಯತೆ ಇದ್ದು ಸೌಲಭ್ಯ ಉಪಯೋಗಿಸಿಕೊಳ್ಳಬೇಕೆಂದರು.
Read also : Davangere | ನಗರದ ಮೂಲಸೌಕರ್ಯಕ್ಕೆ ಅನುದಾನ ಕಲ್ಪಿಸಲು ಸಿಎಂಗೆ ಮನವಿ : ಮೇಯರ್
ಮುಂದಿನ ಶಿಕ್ಷಣಕ್ಕೆ ಹೋಗಲು ಈಗಲೆ ವೇದಿಕೆ ಸಿದ್ಧತೆ ಮಾಡಿಟ್ಟುಕೊಳ್ಳಬೇಕು, ಅರ್ಜಿ ಆಹ್ವಾನ, ಆನ್‍ಲೈನ್ ಪ್ರವೇಶಕ್ಕೆ ಬೇಕಾಗುವ ದಾಖಲೆಗಳನ್ನು ಸಂಗ್ರಹಿಸಬೇಕು. ಮಕ್ಕಳ ಮುಂದಿನ ಶಿಕ್ಷಣದ ಬಗ್ಗೆ ಪೋಷಕರೂ ಕೂಡ ಕೈಜೋಡಿಸಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. ಶಾಲೆ ಮುಖ್ಯ ಶಿಕ್ಷಕ ಸಿದ್ದಪ್ಪ ಹಾಗೂ ಶಿಕ್ಷಕರಿದ್ದರು.