ಹರಿಹರ (Harihar) : ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ಎಂದು ಹೇಳಿಕೆ ನೀಡುವ ಮೂಲಕ ಈಗಿರುವ ಶ್ರೇಷ್ಠ ಸಂವಿಧಾನಕ್ಕೆ ಅಗೌರವ ಸೂಚಿಸಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀರವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕ್ರಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈಚೆಗೆ ಬೆಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಘಟಕ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಭಾಗವಹಿಸಿ ಶ್ರೀಗಳು ನೀಡಿರುವ ಹೇಳಿಕೆ, ದೇಶದ ಸಮಸ್ತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಸ್ವಾತಂತ್ರ ಪ್ರಿಯರ ಹಕ್ಕನ್ನು ಕಸಿಯುವ ಹುನ್ನಾರದ ಭಾಗವಾಗಿ ಗೋಚರಿಸುತ್ತಿದೆ ಎಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಬಿಜೆಪಿಯ ಮಾಜಿ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನ್ನು ಹೇಳಿದ್ದರು, ಈಗ ಆ ಮಾತನ್ನು ಆರ್‌ಎಸ್‌ಎಸ್‌ನ ವಕ್ತಾರರಂತಿರುವ ಪೇಜಾವರ ಶ್ರೀಗಳು ಹೇಳುತ್ತಿದ್ದಾರೆ. ಸಂವಿಧಾನವನ್ನು ಬದಲಿಸುವ ಮಾತು ಹೇಳುವ ಬದಲು ಈ ದೇಶದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ತೊಗಿಸಲು ಶ್ರೀಗಳು ಪ್ರಯತ್ನಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈಗಿರುವ ಸಂವಿಧಾನ ಇರದಿದ್ದರೆ ಚಹಾ ಮಾರುತ್ತಿದ್ದ ಹಿಂದುಳಿದ ವರ್ಗದ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಲು, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟçಪತಿಯಾಗುತ್ತಿರಲಿಲ್ಲ. ಜಾತ್ಯತೀತ, ಸ್ವತಂತ್ರ, ಪ್ರಜಾಪ್ರಭುತ್ವಕ್ಕೆ ಒತ್ತು ನೀಡುವ ಸಂವಿಧಾನದ ವಿರುದ್ಧ ಹೇಳಿಕೆ ನೀಡುವುದನ್ನು ಶ್ರೀಗಳು ನಿಲ್ಲಿಸಬೇಕು.
ಈ ಭೂಮಿ ಹುಟ್ಟಿದಾಗಿನಿಂದ ಕೆಲವು ಧರ್ಮಗಳು ಬೆಳೆದಿವೆ, ಕೆಲವು ಶಕ್ತಿಹೀನಗೊಂಡಿವೆ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಈಗ ಜಗತ್ತಿನ ಹತ್ತಾರು ರಾಷ್ಟ್ರಗಳಲ್ಲಿ ಶಕ್ತಿಶಾಲಿಯಾಗಿ ಪಸರಿಸಿದೆ. ಹಿಂದೂ ಧರ್ಮದಲ್ಲಿ ಹುಟ್ಟಿದ ಗೌತಮ ಬುದ್ಧ ಹಿಂದೂ ಧರ್ಮದಲ್ಲಿದ್ದ ನ್ಯೂನತೆಗಳನ್ನು ಗಮನಿಸಿ ಬೌದ್ಧ ಧರ್ಮ ಆರಂಭಿಸಿದರು.
ಅದೇ ರೀತಿ ಹಿಂದೂ ಧರ್ಮದಲ್ಲಿ ಹುಟ್ಟಿದ ಡಾ.ಬಿ.ಆರ್.ಅಂಬೇಡ್ಕರ್‌ರವರು ನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಿಂದೂ ಧರ್ಮದಲ್ಲಿ ನಾನು ಹುಟ್ಟಿರಬಹುದು ಆದರೆ ಹಿಂದೂವಾಗಿ ಸಾಯಲು ಇಷ್ಟವಿಲ್ಲ ಎಂದು ಅಂಬೇಡ್ಕರ್‌ರವರು ಹೇಳಿದ ಮಾತಿನ ನೋವನ್ನು ಶ್ರೀಗಳು ಅರಿಯಬೇಕು.ಹಿಂದೂ ಧರ್ಮದಲ್ಲಿರುವವರು ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಡೆಬೇಕೆಂದು ಪೇಜಾವರ ಶ್ರೀಗಳಂತೆ ಹಲವು ಮಠಾಧೀಶರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಹಿಂದೂ ಧರ್ಮದ ಪುರೋಹಿತಶಾಹಿಗಳು, ಸವರ್ಣೀಯರಿಂದ ಹಿಂದೂ ಧರ್ಮದ ಭಾಗವೆ ಆಗಿರುವ ದಲಿತರು, ಶೋಷಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಈ ಶ್ರೀಗಳು ಗಮನಹರಿಸಬೇಕು.
ಇವತ್ತಿಗೂ ಗ್ರಾಮೀಣ ಭಾಗದಲ್ಲಿರುವ ದಲಿತರು ಕ್ಷೌರ ಮಾಡಿಸಲು ಸ್ವಂತ ಊರನ್ನು ಬಿಟ್ಟು ಊರಿಂದ ಊರಿಗೆ ಅಲೆಯುತ್ತಾರೆ. ದೇವಸ್ಥಾನಗಳಲ್ಲಿ ಎಲ್ಲರಂತೆ ಪೂಜಿಸಲು ಅವಕಾಶವಿಲ್ಲ, ಹಲವು ಹೋಟಲ್‌ಗಳಲ್ಲಿ ಹೊರಕ್ಕೆ ನಿಂತು ಚಹಾ, ತಿಂಡಿ ಸ್ವೀಕರಿಸುವ ದಲಿತರ ದುಸ್ಥಿತಿಯ ಸುಧಾರಣೆಗೆ ಶ್ರೀಗಳು ಗಮನ ಹರಿಸಬೇಕು. ಹಿಂದೂ ಧರ್ಮವನ್ನೂ ಯಾರೂ ಹೊರಗಿನ ವ್ಯಕ್ತಿಗಳು ವಿಧ್ವಂಸಗೊಳಿಸುತ್ತಿಲ್ಲ, ಬದಲಾಗಿ ಹಿಂದೂ ಧರ್ಮದಲ್ಲಿರವವರಿಂದಲೆ ಈ ಧರ್ಮ ವಿಧ್ವಂಸಗೊಳುತ್ತಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾವಿರಾರು ವರ್ಷಗಳಿಂದ ಶೋಷಣೆಯ, ದೌರ್ಜನ್ಯದ ಬೆಂಕಿಯಲ್ಲಿ ನರಳಿದ ದಲಿತರು, ಹಿಂದುಳಿದವರು, ಮಹಿಳೆಯರು ಕಳೆದ 75 ವರ್ಷಗಳಿಂದ ಈಗಿನ ಸಂವಿಧಾನದ ಕೃಪೆಯಿಂದಾಗಿ ನಿಟ್ಟುಸಿರು ಬಿಡುತ್ತಿರುವುದನ್ನು ಶ್ರೀಗಳು ಸಹಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
Read also : Davanagere | ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ