ಜಗಳೂರು (Davanagere): ವಿದ್ಯಾರ್ಥಿಗಳ ಜೀವನ ಗುಣಮಟ್ಟ ಶಿಕ್ಷಣ ಪಡೆಯುವಲ್ಲಿದೆ. ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಅಕ್ಷರ ಸಂತ, ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು
ಪಟ್ಟಣದ ಜೆ.ಎಂ.ಇಮಾಂ ಮೆಮೋರಿಯಲ್ ಶಾಲೆಯಲ್ಲಿ ಜೆ.ಎಂ.ಇಮಾಂ ಸ್ಮಾರಕ ಟ್ರಸ್ಟ್ ನೀಡುವ 6ನೇ ವರ್ಷದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಮತ್ತು 50 ಸಾವಿರ ನಗದು ಸ್ವೀಕರಿಸಿ ಮಾತನಾಡಿದರು
ಮೈಸೂರು ಸಂಸ್ಥಾನದ ಮಂತ್ರಿ ಮಂಡಲದಲ್ಲಿ ವಿದ್ಯಾಮಂತ್ರಿ ಸೇರಿದಂತೆ ಒಂಭತ್ತು ಖಾತೆಗಳನ್ನು ನಿರ್ವಹಿಸಿದ ಜಗಳೂರಿನ ಜೆ.ಎಂ. ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ವಿದ್ಯಾರ್ಥಿಗಳು ಅವರ ಚಿಂತನೆ ಮೈಗೂಡಿಸಿಕೊಂಡು ಐಎಎಸ್, ಕೆಎಎಸ್‌ನಂತ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಅಲ್ಲದೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ವಿದ್ಯೆ ಎಂಬುದು ಬಹಳ ಮುಖ್ಯ. ನಾನು ಅದರಿಂದ ವಂಚಿತನಾಗಿದ್ದ ಕಾರಣ ನನ್ನಂತೆ ಸಮಾಜದ ಮಕ್ಕಳು ಆಗಬಾರದು ಎಂದು ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಲಾಭದಿಂದ 2004ರಲ್ಲಿ ಶಾಲೆ ಆರಂಭಿಸಿದೆ. ಇಂದು ಶಾಲೆಯಲ್ಲಿ ಸಾಕಷ್ಟು ಮಕ್ಕಳು ಓದುತ್ತಿದ್ದಾರೆ’ ಎಂದು ಹರ್ಷವ್ಯಕ್ತಪಡಿಸಿದರು.
ಸಾಂಸ್ಕೃತಿಕ ಚಿಂತಕ, ಜನಪರ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಗೆ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸಂವಿಧಾನ ಪಾವಿತ್ರ್ಯವನ್ನು ಕಾಪಾಡಬೇಕಾದ ರಾಜಕೀಯ ವ್ಯವಸ್ಥೆ ಇಂದು ಸಮಾಜವನ್ನು ಕಲುಷಿತಗೊಳಿಸುತ್ತಿದೆ. ಇಮಾಂ ಸಾಹೇಬರು ನಾಡು ಕಂಡ ಮೇರು ರಾಜಕಾರಣಿ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಅವರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಇಂದಿಗೂ ಜನರ ಹೃದಯದಲ್ಲಿ ಉಳಿದಿದ್ದಾರೆ. ಇಮಾಂ ಸಾಹೇಬರು ಬರೆದ ‘ಮೈಸೂರು ಆಗ ಮತ್ತು ಈಗ’ ಕೃತಿ ಅವರ ರಾಜಕೀಯ ಸೇವಾ ತತ್ಪರತೆಯನ್ನು ಅನಾವರಣಗೊಳಿಸುತ್ತದೆ. ಇಮ್ಮಣ್ಣನವರ ರಾಜಕೀಯ ವೃತ್ತಿ ಜೀವನ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು. ಭಗವಂತನ ಪೂಜೆ ಎಂದರೆ ಸಮಾಜ ಸೇವೆ. ಆಗ ಇಮಾಂ ಸಾಹೇಬರು ಮಾಡಿದ್ದು ಭಗವಂತನ ಸೇವೆಯಾದರೆ, ಇಂದು ಹರೇಕಳ ಹಾಜಬ್ಬ ಮಾಡುತ್ತಿರುವುದು ಭಗವಂತನ ಸೇವೆಯಾಗಿದೆ.
ಕೋಟ್ಯಾಂತ ರೂ ಸಂಪಾದನೆ ಮಾಡುವ ಜನರ ಮಧ್ಯೆ ಸೇವಾ ತತ್ಪರವಾಗಿ ನಿಷ್ಠೆಯಿಂದ ಯಾವ ಪ್ರತಿಫಲ ಅಪೇಕ್ಷೆಯಿಲ್ಲದೇ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಅಕ್ಷರ ಹಂಚುವ ಕಿತ್ತಳೆ ಹಣ್ಣಿನ ಸ್ವಭಾವದ ಹರೇಕಳ ಹಾಜಬ್ಬ ಅವರಿಗೆ ಇಮಾಂ ಸ್ಮಾರಕ ನೆನಪಿನ ಪ್ರಶಸ್ತಿ ನಿಜಕ್ಕೂ ಅರ್ಥಪೂರ್ಣವಾದುದು ಎಂದು ಬಣ್ಣಿಸಿದರು.
ಡಾ. ದಾದಾಪೀರ್ ನವಿಲೇಹಾಳ್ ಪ್ರಾಸ್ತಾವಿಕ ಮಾತನಾಡಿ, ಈ ನೆಲದ ಸಿದ್ದಾಂತಗಳು ನಾಶವಾಗಿ ರಾಜಕೀಯ ಕ್ಷೇತ್ರವೂ ಉದ್ಯಮವಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಎಂದರೆ ಏನು ಅದರ ಮಹತ್ವ ಏನು ಎಂದು ಅಂದು ಇಮಾಂ ಸಾಹೇಬರು ತೋರಿಸಿಕೊಟ್ಟರು. ಇಂದು ಹಾಜಬ್ಬ ತೋರಿಸಿಕೊಟ್ಟಿದ್ದಾರೆ. ಇಂದು ರಾಜಕಾರಣವನ್ನು ಧರ್ಮ ಮತ್ತು ಜಾತಿಗಳು ಆಳ್ವಿಕೆ ಮಾಡುತ್ತಿವೆ. ಆದರೆ ಇದನ್ನೆಲ್ಲಾ ಹೊರತಾಗಿ ಸಾಮಾಜಿಕ ಮೌಲ್ಯಗಳನ್ನು ಬೆಳಸಿದವರು ಇಮಾಂ ಸಾಹೇಬರು. ಈ ನೆಲದಲ್ಲಿ ಎಲ್ಲಿಯಾದರೂ ತುಳಿತಕ್ಕೆ ಒಳಗಾದ ಸಮುದಾಯ, ಜನಪರ ಹೋರಾಟಗಳಾದರೆ ಅಲ್ಲಿ ಲೇಖಕರಾಗಿ, ಹೋರಾಟಗಾರರ ಧ್ವನಿಯಾಗಿ ಜೆಪಿ ಇದ್ದೇ ಇರುತ್ತಾರೆ ಎಂದು ಹೇಳಿದರು.
ಜೆ.ಎಂ. ಇಮಾಂ ಟ್ರಸ್ಟ್ ಗೌರವಾಧ್ಯಕ್ಷ ಹಾಜಿ ಜೆ.ಕೆ.ಹುಸೇನ್‍ಮಿಯ್ಯಾ ಸಾಬ್, ಟ್ರಸ್ಟ್‍ನ ಅಧ್ಯಕ್ಷ ಎಸ್.ಎಚ್.ಮಸ್ತಾನ್ ಸಾಬ್, ಬಿಇಒ ಈ.ಹಾಲಮೂರ್ತಿ, ಜಲೀಲ್ ಸಾಬ್, ಹಾಜಿ ಜೆ.ಬಿ.ಖಲೀಲ್ ಸಾಬ್, ಜನಪದ ಸಾಹಿತಿ ಡಾ.ನಿಬಗೂರು ರಾಜಪ್ಪ, ಎನ್.ಟಿ.ಎರ್ರಿಸ್ವಾಮಿ, ಡಾ.ಯಾದವರೆಡ್ಡಿ, ಡಿ.ಸಿ.ಮಲ್ಲಿಕಾರ್ಜುನ್, ಬಸವೇಶ್ ಸಿ.ಎಂ.ಹೊಳೆ, ಆಡಳಿತಾಧಿಕಾರಿ ಎ.ಕೆ.ಮಹಮದ್ ಹುಸೇನ್, ಮುಖ್ಯ ಶಿಕ್ಷಕ ಜೆ.ಆರ್.ಶಂಕರ್, ಕಸಾಪ ಅಧ್ಯಕ್ಷೆ ಸುಜಾತಮ್ಮ, ಬಿ.ಟಿ.ನಾಗರಾಜ್ ಸೇರಿದಂತೆ ಅನೇಕರು ಇದ್ದರು.
Read also : ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಎಂದಿಗೂ ಶಕ್ತಿ ಬರುವುದಿಲ್ಲ : ಸಿಎಂ ಸಿದ್ದರಾಮಯ್ಯ