ದಾವಣಗೆರೆ, ಜ.12 (Davanagere): ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರು ಧಾವಂತದ ಬದುಕನ್ನು ಅನುಸರಿಸುತ್ತಿದ್ದು, ಇಂದಿನ ಒತ್ತಡಮಯ ಬದುಕಿಗೆ ಪ್ರತಿಯೊಬ್ಬರು ನಿತ್ಯವೂ ಯೋಗಾಭ್ಯಾಸವನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿಯಾಗಬಲ್ಲದು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.
ಭಾನುವಾರ ಬೆಳಿಗ್ಗೆ ನಗರದ ಪಿ.ಜೆ. ಬಡಾವಣೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಉದ್ಯಾನವನದ ಮಹಾಮಂಟಪದಲ್ಲಿ ಮಕರ ಸಂಕ್ರಾಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಉಚಿತ ಯೋಗ ಶಿಬಿರವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು.
ಮನುಷ್ಯ ಸದಾ ಚಟುವಟಿಕೆಯಿಂದ ಇರಬೇಕು. ಆಗ ನಕಾರಾತ್ಮಕ ಚಿಂತನೆ ಮತ್ತು ಭಾವನೆಗಳಿಂದ ದೂರವಿರಬಹುದು. ಸದಾ ನಮ್ಮ ಚಿಂತನೆ ಉತ್ತಮವಾದ ವಿಷಯದ ಕಡೆಗೆ ಹರಿದಾಗ ನಾವು ಆರೋಗ್ಯ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ತಿಳಿಸುತ್ತಾ, ನಿತ್ಯವು ಸೂರ್ಯ ಉದಯಿಸುವುದಕ್ಕಿಂತ ಮೊದಲು ಏಳುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮವನ್ನು ವಿಶ್ವಶಾಂತಿಗಾಗಿ ಮತ್ತು ಆರೋಗ್ಯ ಸಮೃದ್ಧಿಗಾಗಿ ಮಾಡಲಾಯಿತು. ವಿಶೇಷ ಅತಿಥಿಗಳಾಗಿ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎನ್.ಪಿ. ಪ್ರಸನ್ನ ಆಚಾರ್ ಅವರು ಆಗಮಿಸಿ ಶಿಬಿರಕ್ಕೆ ಶುಭ ಕೋರಿ, ಉಚಿತವಾಗಿ ನಡೆಯುವ ಈ ಯೋಗ ಶಿಬಿರದ ಲಾಭವನ್ನು ಹೆಚ್ಚೆಚ್ಚು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಶಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಚಿನ್ ವರ್ಣೇಕರ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಕಾಶ್ ಹೆಚ್.ಎನ್., ಯೋಗ ಶಿಕ್ಷಕ ವಿ. ಲಲಿತ್‍ಕುಮಾರ್ ಜೈನ್ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಚಂದ್ರ ಎಸ್. ಮತ್ತು ಮಾ|| ಧನುಷ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಎಸ್.ಸಿ. ಇನ್ ಯೋಗ ವಿಭಾಗದ ಯೋಗ ವಿದ್ಯಾರ್ಥಿಗಳಾದ ರಾಹುಲ್ ವಿ.ಕೆ., ಸಂವೇದಿತಾ ಎಸ್., ಕಾವ್ಯ, ಚೇತನ್ ಇನ್ನಿತರರು ಭಾಗವಹಿಸಿದ್ದು, ಸೂರ್ಯನಮಸ್ಕಾರ ಯೋಗ ಪದ್ಧತಿಯನ್ನು ಪ್ರದರ್ಶಿಸಿದರು.
ಈ ಉಚಿತ ಯೋಗ ಶಿಬಿರವನ್ನು ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆಯ ಯೋಗ ತಜ್ಞ ಡಾ|| ರಾಘವೇಂದ್ರ ಗುರೂಜಿಯವರ ನೇರ ಶಿಷ್ಯರಾದ ಯೋಗ ಶಿಕ್ಷಕ ಮಹಂತೇಶ್ ನಡೆಸಿಕೊಡಲಿದ್ದಾರೆ.
ಶಿಬಿರವು ಪ್ರತಿದಿನ ಬೆಳಿಗ್ಗೆ 6-00 ರಿಂದ 7-00 ಗಂಟೆಯ ವರೆಗೆ ನಡೆಯಲಿದ್ದು, ಶಿಬಿರಕ್ಕೆ ಯಾವುದೇ ಶುಲ್ಕವಿಲ್ಲ. ಆಸಕ್ತರು ಮುಕ್ತವಾಗಿ ಭಾಗವಹಿಸಬಹುದು.
Read also : Davangere | ಜಮೀನುಗಳಲ್ಲಿ ಮೋಟಾರು ಕಳ್ಳತನ ಪ್ರಕರಣ : ಆರೋಪಿಗಳ ಬಂಧನ