ದಾವಣಗೆರೆ (Davanagere): ಜಿಲ್ಲೆಯಾದ್ಯಂತ ಪ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಕೆ ವಿಚಾರದಲ್ಲಿ ಅವ್ಯವಹಾರ ನಡೆಯುತ್ತಿದ್ದು, ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡುವುದಲ್ಲದೆ, ಕಾನೂನು ಹೋರಾಟ ಮಾಡಲಾಗುವುದು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾದ್ಯಂತ ಕಳೆದ ಐದಾರೂ ದಿನಗಳಿಂದ ಸರ್ಕಾರಿ ಜಾಗಗಳಲ್ಲಿರುವ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್‍ಗಳ ತೆರವು ಮಾಡುತ್ತಿರುವುದು ಶ್ಲಾಘನೀಯ. ಆದರೆ, ಫ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡಲು ಬಳಸುವ ಮಾನದಂಡಗಳ ಕುರಿತು ಬಿಡಬ್ಯುಡಿ, ನಗರಸಭೆ, ಮಹಾನಗರಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಯಾರೊಬ್ಬರೂ ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. ಸರಿಯಾದ ಅಂಕಿ ಅಂಶವೇ ಇಲ್ಲದೆ ಜಿಲ್ಲೆಯಾದ್ಯಂತ ಸುಮಾರು 200 ಫ್ಲೆಕ್ಸ್, ಹೋರ್ಡಿಂಗ್ಸ್ ಗೆ ಅನುಮತಿ ನೀಡಿರುವುದಾಗಿ ಉಡಾಫೆಯಾಗಿ ತಿಳಿಸುತ್ತಿದ್ದಾರೆ ಎಂದರು.
ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಕೆಗೆ 1 ಅಡಿಗೆ ತಿಂಗಳಿಗೆ ಕೇವಲ 35 ಪೈಸೆ ದರ ನಿಗದಿಸಿದೆ. ಆದರೆ, ಅವರಿಂದ ಪಡೆಯುವುದು ಮಾತ್ರ ತಿಂಗಳಿಗೆ ಮೂರ್ನಾಲ್ಕು ಸಾವಿರ ರೂಪಾಯಿ. ಹಾಗಾಗಿ, ಇಲಾಖೆಗಳಲ್ಲಿ ಶೇ. 90ರಷ್ಟು ಅನಧಿಕೃತ ಫ್ಲೆಕ್ಸ್ ಅಳವಡಿಕೆ ನಡೆಯುತ್ತಿದೆ. ಇದರಿಂದ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ ಎಂದು ಆರೋಪಿಸಿದರು.
ಇವೆಲ್ಲವನ್ನೂ ಸರಿಮಾಡಬೇಕಿದ್ದ ಜಿಲ್ಲಾಡಳಿತ ಮಾನಮರ್ಯಾದೆ ಇಲ್ಲದೆ ಸಂಪೂರ್ಣ ನಿಷ್ಕ್ರೀಯವಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ನಾನು ಯಾವುದೇ ಮಾಹಿತಿ ಕೇಳಿದರೆ ಸೌಜನ್ಯಕ್ಕೂ ಉತ್ತರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ಟೆಂಡರ್‍ಗಳಲ್ಲೂ ಅಕ್ರಮ ನಡೆದಿದೆ. ಗುಣಮಟ್ಟದ ರಸ್ತೆಗಳನ್ನು ಅಗೆದು ಮತ್ತೆ ಹೊಸ ರಸ್ತೆ ನಿರ್ಮಿಸಿ ಹಣ ಮಾಡುವ ಹುನ್ನಾರ ನಡೆಯುತ್ತಿದೆ. ಅಧಿಕಾರಿಗಳು ಜಿಲ್ಲೆಯ ಪ್ರಮುಖ ನಾಯಕರೊಬ್ಬರ ಭಯದಿಂದ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕುಟುಕಿದರು.
ಆದ್ದರಿಂದ ಇದರ ವಿರುದ್ಧ ಸಮಗ್ರ ತನಿಖೆಯಾಗಬೇಕು. ಈ ಕುರಿತು ಅಧಿಕೃತ ಪತ್ರಗಳ ಸಂಗ್ರಹಿಸು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿ, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರೇಶ್ ಹನಗವಾಡಿ, ಮಂಜಾನಾಯ್ಕ, ವಿನಾಯಕ ಆರಾಧ್ಯ ಇತರರಿದ್ದರು.
Read also : ಪಠ್ಯದಲ್ಲಿ ಜಾನಪದ ಕಲೆಗಳ ಕಲಿಕೆ ಕಡ್ಡಾಯಗೊಳಿಸಿ : ಗೊಲ್ಲಹಳ್ಳಿ ಶಿವಪ್ರಸಾದ್