ದಾವಣಗೆರೆ (Davanagere) : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ದುಶ್ಚಟಗಳಿಗೆ ಬಲಯಾಗುತ್ತಿದ್ದಾರೆ. ಇದು ಸ್ಪರ್ಧಾತ್ಮಕ ಯುಗ. ಇಂತಹ ಯುಗದಲ್ಲಿ ದುಶ್ಚಟಗಳಿಗೆ ಬಲಿಯಾದಲ್ಲಿ ತಮ್ಮ ಪೋಷಕರ ಆಸೆ, ಆಕಾಂಕ್ಷೆಗಳನ್ನೀಡೇರಿಸಲು ಹಾಗೂ ನಮ್ಮ ಗುರಿ ತಲುಪಲು ಸಾಧ್ಯವಿಲ್ಲ. ಆದ್ದರಿಂದ ದುಶ್ಚಟಗಳಿಗೆ ಬಲಿಯಾಗದೇ, ಜೀವನದಲ್ಲಿ ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಡಿ.ಕೆ.ವೇಲಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ತಪೋವನ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದಲ್ಲಿ “ಆಕರ್ಷಕ ಉತ್ಪನ್ನಗಳು: ಕರಾಳ ಉದ್ದೇಶಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ, ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓದುವ ಹವ್ಯಾಸಗಳಿಂದ ಮಾನಸಿಕ ಭೌದ್ದಿಕ ಬುದ್ಧಿಮತ್ತೆ ಬೆಳವಣಿಗೆಯಾಗುತ್ತದೆ. ಮಾನವ ಜೀವನ ಅಮೂಲ್ಯವಾದುದು. ಪುನಃ ಈ ಜೀವನ ಸಿಗುವುದಿಲ್ಲ. ಆದ್ದರಿಂದ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮವಾದ ಜೀವನ ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ವಸ್ತುಗಳು, ವೈದ್ಯರು ಹೀಗೆ ಸೂಕ್ತವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಜೀವನದಲ್ಲಿ ಏನೂ ಬೇಕು ಏನೂ ಬೇಡ ಎಂಬ ಆಯ್ಕೆಯೂ ನಿಮ್ಮ ಮುಂದೆಯೇ ಇದೇ ಆದ್ದರಿಂದ ತಂಬಾಕು, ಗುಟ್ಕಾದಂತಹ ದುಶ್ಚಟಗಳಿಗೆ ಬಲಿಯಾಗದೇ ಉತ್ತಮವಾದ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಳ್ಳುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪೋಷಕರಿಗೆ ಮೋಸ ಮಾಡದೇ ಅವರಿಗೆ ಪ್ರೀತಿ ಪಾತ್ರರಾಗುವ ಮೂಲಕ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಸರ್ಕಾರವು ತಂಬಾಕು ಬಳಕೆ, ಸೇವನೆ ನಿಯಂತ್ರಿಸಲು ಕೋಟ್ಪಾ ಕಾಯ್ದೆಯಡಿ ಹಲವು ಕಾನೂನುಗಳನ್ನು ರೂಪಿಸಿದೆ. ಇದರ ಜತೆಗೆ ತಂಬಾಕು ನಿಯಂತ್ರಿಸುವಲ್ಲಿ ನಾಗರೀಕರಾಗಿ ನಮ್ಮ ಜವಾಬ್ದಾರಿಯೂ ಅಗತ್ಯವಾಗಿದೆ. ನಿಸರ್ಗದಲ್ಲಿ ಕಾನೂನು ಉಲ್ಲಂಘನೆ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವ್ಯವಹಾರಿಕ ದೃಷ್ಠಿಯಿಂದ ತಂಬಾಕು ಉತ್ಪನ್ನಗಳನ್ನು ಅತ್ಯಾಕರ್ಷಕವಾಗಿ ಸೇವನೆ ಮಾಡುವಂತೆ ಹಾಗೂ ಬಳಸುವಂತೆ ಪ್ರೇರೇಪಿಸಲಾಗುವುದು. ಅದಷ್ಟೇ ಅಲ್ಲದೇ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾದ ಚಲನಚಿತ್ರ ನಟರು ಜಾಹೀರಾತುಗಳ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಆದ್ದರಿಂದ ಯುವಕರು ಇದರಿಂದ ಪ್ರೇರೇಪಿತರಾಗದೇ ಇಂತಹ ಘಟನೆಗಳು ಸಾರ್ವಜನಿಕವಾಗಿ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತಿ ವರ್ಷ ತಂಬಾಕು ಉತ್ಪನ್ನಗಳ ಬಳಕೆ ಮತ್ತು ಸೇವನೆಯಿಂದ 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಎಂದ ಅವರು. ಇತ್ತೀಚೆಗೆ ಕೇವಲ ಪುರುಷರಷ್ಟೇ ಅಲ್ಲಾ ಮಹಿಳೆಯರು ಕೂಡ ಇಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ದುಶ್ಚಟಗಳಿಂದ ಕ್ಯಾನ್ಸರ್‍ನಂತಹ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕವಾಗಿ ಮತ್ತಷ್ಟು ಜಾಗೃತಿ ಮೂಡಿಸುವುದರ ಜತೆಗೆ ಉತ್ತಮ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
Read also : ಕನ್ನಡ ಸಾಲಿ ಮಾಸ್ತರ ಗೆಳೆಯ ವೀರಣ್ಣನ ನೆಪದಲ್ಲಿ….
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಶಿಕುಮಾರ್ ವಿ. ಮೆಹರ್ವಾಡೆ ಮಾತನಾಡಿ, ವೈದ್ಯವಿದ್ಯಾರ್ಥಿಗಳಾಗಿ ಭವಿಷ್ಯದಲ್ಲಿ ಸಾರ್ವಜನಿಕರಿಗೆ, ಅನಕ್ಷರಸ್ತ ನಾಗರೀಕರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಪ್ರಕೃತಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಜ್ಞಾನವಿಲ್ಲದಿದ್ದರೂ, ತನಗೆ ಬೇಕಾದ ಆಹಾರವನ್ನಷ್ಟೇ ಸೇವಿಸುತ್ತದೆ. ಆದರೆ ಮನುಷ್ಯನಗೆ ಎಲ್ಲಾ ರೀತಿಯ ತಿಳುಳುಕೆ ಇದ್ದರೂ ಸಹ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ. ಇಂತಹ ದುಶ್ಚಟಗಳಿಂದ ದೂರವಿರುವ ಮೂಲಕ ನಮ್ಮ ಸುತ್ತಲಿನ ಸಮಾಜವನ್ನು ತಂಬಾಕು ಬಳಕೆ ಸೇವನೆಗಳಿಂದ ಮುಕ್ತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ತಂಬಾಕು ನಿಯಂತ್ರಣ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ತಂಬಾಕು ನಿಯಂತ್ರಣ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ತಂಬಾಕು ನಿಯಂತ್ರಣಕೋಶ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣಕೋಶದ ಕಾರ್ಯದರ್ಶಿ ಡಾ. ಎಸ್.ಷಣ್ಮುಖಪ್ಪ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ಸುಮನಾ ಭಟ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.