ಹೋರಾಟಗಳ ಅಂತಃಕರಣ-ಅನಿಲ್ ಹೊಸಮನಿ: 1945-46 ರ ಕಾಲ. ಬಿಜಾಪುರ ಜಿಲ್ಲೆಯ ಅಲಮೇಲು ಗ್ರಾಮದಲ್ಲಿ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ಅಸ್ಪೃಶ್ಯ ಬಾಲಕನೊಬ್ಬ, ನೀರಡಿಕೆಯಿಂದಾಗಿ ಸಾರ್ವಜನಿಕ ಬಾವಿಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ದೊಡ್ಡ ಗಲಾಟೆಯಾಗಿ ಹೋಯಿತು. ಕುಡಿಯುವ ನೀರಿನ ಬಾವಿಯನ್ನೇ ಅಸ್ಪೃಶ್ಯವನ್ನಾಗಿ ಮಾಡಲು ಊರ ಜನರು ನಿರ್ಧರಿಸಿದರು. ಊರ ಗೌಡರು” ಹೆಂಗೂ ಅಸ್ಪೃಶ್ಯರು ಮುಟ್ಯಾತಲ್ಲ ಇನ್ಮುಂದೆ ಅವರೂ ನೀರು ಬಳಸಲಿ ಬಿಡಿ”ಎಂದಿದ್ದು ಅಂದಿನ ಬಾಲಕ ತನ್ನ ತಂದೆ ಚಂದ್ರಶೇಖರ್ ಕಾಸಪ್ಪ ಹೊಸಮನಿಯವರಿಗೆ ಬಹಳ ಖುಷಿಯಾಗಿತ್ತು. ಅದನ್ನು ಅವರು ಕೊನೇವರಿಗೂ ಹೇಳುತ್ತಿದ್ದರೆಂದು ಪುತ್ರ ಅನಿಲ್ ಹೊಸಮನಿ ನೆನಪು ಮಾಡಿಕೊಳ್ಳುತ್ತಾರೆ.
ಚಂದ್ರಶೇಖರ ಕಾಸಪ್ಪ ಹೊಸಮನಿ ಎಂಬ ಐವತ್ತರ ದಶಕದ ಆ ಕಾಲದ ಬಿ.ಎ.ಗ್ರಾಜ್ಯುಯೇಟ್, ಅಂಬೇಡ್ಕರವಾದಿಯೊಬ್ಬ ತನಗಿದ್ದ ಸರ್ಕಾರಿ ಹುದ್ದೆ ತ್ಯಜಿಸಿ,ಸಾಮಾನ್ಯರಂತೆ ಬದುಕಿದ್ದು ಅಲ್ಲದೆ,ಅಂಬೇಡ್ಕರರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಎಂ.ಎಲ್.ಎ.ಚುನಾವಣೆಗೂ ಸ್ಪರ್ಧಿಸಿ ಸೋತವರು.1978ರಲ್ಲಿ ಕಾಂಗ್ರೆಸ್ ಪಕ್ಷದಿಂದಲೂ ಸ್ಪರ್ಧಿಸಿದ್ದರು.ಆ ಕಾಲಕ್ಕೆ ಬಿಜಾಪುರದಲ್ಲಿ ಅಸ್ಪೃಶ್ಯತಾ ಆಚರಣೆ ತೀವ್ರವಾಗಿದ್ದ ಸಂದರ್ಭದಲ್ಲಿಯೇ “ಅಂಬೇಡ್ಕರ್ ಪ್ರೆಸ್ “ಸ್ಥಾಪಿಸಿ, ಅಕ್ಷರಗಳ ಮೂಲಕ ಎಲ್ಲರನ್ನೂ ಸ್ಪರ್ಶಿಸಲು ಪ್ರಯತ್ನಿಸಿದ್ದು ಈಗ ಇತಿಹಾಸ.
ಚಳವಳಿಗಾರ ಯಾವತ್ತೂ ಇಂಜಿನಿಯರ್, ಕೃಷಿ ತಜ್ಞ, ಡಾಕ್ಟರ್, ಬುದ್ದಿಜೀವಿ, ರಾಜಕಾರಣಿಗಿಂತಲೂ ಹೆಚ್ಚು ಮಾಹಿತಿ ಕಲೆ ಹಾಕಬಲ್ಲ. ಅವರಿಗಿರುವ ಸ್ಪಷ್ಟತೆ ಉಳಿದವರಿಗಿರೋದಿಲ್ಲ. ಚಳವಳಿಗಾರ ಯಾವತ್ತೂ ಕೂಡ ಬೌದ್ಧಿಕವಾಗಿ ಬೆಳೆಯುತ್ತಲೇ ಇರುತ್ತಾನೆ. ತನ್ನ ಜವಾಬ್ದಾರಿಗಳನ್ನು ಪರಿಚಿತರ ಹೆಗಲಿಗೆ ವರ್ಗಾಯಿಸಿ ಸುಮ್ಮನೆ ಕೂಡುವುದಿಲ್ಲ.ಇದಕ್ಕೆ ಸಾಕ್ಷಿ ಎಂಬಂತೆ, ಎಪ್ಪತ್ತು-ಎಂಬತ್ತರ ಚಳವಳಿಗಳ ಉಬ್ಬರಗಳ ಇಳಿತಗಳನ್ನೂ ಕಂಡ ಅನಿಲ್ ಹೊಸಮನಿ,ಇಡೀ ಚಳವಳಿಯ ಪ್ರಕ್ರಿಯೆಯನ್ನು ಹೊಸ ದೃಷ್ಟಿಕೋನದಿಂದ ನೋಡಲಿಕ್ಕೆ ಒಂದು ತಲೆಮಾರನ್ನು ಪ್ರೇರೇಪಿಸಿದವರು.
ವಿಧಾನಸೌಧ ಕೇಳಿದರೆ ಕೊಡುತ್ತೀರಾ?
ತನ್ನ ಇಡೀ ಬದುಕನ್ನೇ ಚಳವಳಿಗಾಗಿ ಮುಡುಪಾಗಿಟ್ಟ ಹೊಸಮನಿಯವರಿಗೆ ಈ ಹೊತ್ತಿನ ಎಲ್ಲಾ ಚಳವಳಿಗಳೂ ಅಂತಿಮವಾಗಿ ಒಂದು ಶೈಕ್ಷಣಿಕ ವಿರೋಧ ಚಳವಳಿಯಾಗಿ ರೂಪುಗೊಳ್ಳಬೇಕು ಎಂದು ಬಯಸಿದವರು.ಆ ಮೂಲಕ ಚಳವಳಿಗಳನ್ನು ಜೀವಂತವಾಗಿರಿಸಿದವರು.ಚಳವಳಿ ಎನ್ನುವುದು ಯಾವ ಸಂಬಂಧ,ಸಂದರ್ಭಗಳೂ ಇಲ್ಲದ ಜ್ಞಾನವಾಗಿ ವ್ಯಾಪಿಸಿಕೊಳ್ಳಬೇಕು ಎಂದು ಸದಾ ಹಂಬಲಿಸಿದವರು. ಮನೆಗಳನ್ನೂ ರಸ್ತೆಗಳನ್ನೂ ನಿರ್ಮಿಸಿಕೊಂಡಿರುವ ನಾವುಗಳು ಹೊಸಮನಿಯಂತವರ ಹೋರಾಟ, ಚಳವಳಿಗಳ ಫಲಿತಗಳು.ಅನಿಲ್ ಚಂದ್ರಶೇಖರ ಹೊಸಮನಿಯವರು ಹೊಸಾಮನಿ ಕಟ್ಟಲಿಲ್ಲ.ಪಾಕೆಟ್ ಮನಿ ಗೊತ್ತೇ ಇಲ್ಲ.ತನ್ನಿಡೀ ಬದುಕನ್ನೇ ಚಳವಳಿಗರ್ಪಿಸಿಕೊಂಡವರು.
-ಹಸಿದವನಿಗೆ ಅನ್ನ ನೀಡಿದವರು. -ಚಳಿಯಿಂದ ನಡುಗುವವರಿಗೆ ಕಂಬಳಿ ಹೊದಿಸಿದ್ದಾರೆ. ತನ್ನ ಬಳಿ ಏನೂ ಇಲ್ಲ ಎಂದಾಗಲೂ ಸಾಯುವವರ ಮುಂದೆ ಕುಂತು ಮಾತಾಡುತ್ತಾ, ಅವನ ನೋವನ್ನು ಮರೆಸುವ ಪ್ರಯತ್ನ ಮಾಡಿದವರು. ಹೊಸಮನಿಯವರ ಹೋರಾಟಗಳ ಆಳದಲ್ಲಿ ಸಾಂಸ್ಕೃತಿಕ ಹುಡುಕಾಟಗಳಿವೆ.ಜನರ ಬದುಕು ಕಟ್ಟುವ ಕ್ರಿಯೆಗಳಿವೆ.ಚಳವಳಿಗಳ ಉದ್ದೇಶಗಳನ್ನು ಬಹಳ ನೇರವಾಗಿ ಮುಟ್ಟಿಸುವ ಸಾರ್ವಜನಿಕ ಚರ್ಚೆ ಮತ್ತು ತೀರ್ಮಾನಗಳ ಮುಕ್ತತೆಗೆ ತೆರೆದುಕೊಳ್ಳುವ ಮನಸ್ಸು ದಲಿತ ಹೋರಾಟಗಾರ ಹೊಸಮನಿಯವರಿಗಿದೆ. ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿಯೇ ಇಂದಿನ ವಾರ್ತಾಭಾರತಿ ಪತ್ರಿಕೆಯ ಮುಖಪುಟದಲ್ಲಿ……ಇಂದೂಧರ ಹೊನ್ನಾಪುರರ ದೇವನಹಳ್ಳಿ ರೈತರ ಅಹೋರಾತ್ರಿ ಧರಣಿಯ ಹಿನ್ನೆಲೆಯಲ್ಲಿ ವಿಧಾನಸೌಧ ಕೇಳಿದರೆ ಕೊಡುತ್ತೀರಾ? ಎಂಬ ಹೇಳಿಕೆ ಪ್ರಕಟವಾಗಿದೆ.
ಕಾರ್ಪೊರೇಟ್ ಕಂಪೆನಿಗಳು ಒಳ್ಳೆಯ ಭೂಮಿಯನ್ನು ಕೇಳುತ್ತಾರೆ. ಅವರು ಕೇಳಿದ ಭೂಮಿಯನ್ನೇ ಕೊಡಬೇಕೆಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳುತ್ತಾರೆ.ಹಾಗಾದರೆ,ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದರೆ ಕೊಡುತ್ತೀರಾ? ಏಕೆ ಮೂರ್ಖ ಹೇಳಿಕೆಗಳನ್ನು ಕೊಡುತ್ತಿದ್ದೀರಿ? ಇವತ್ತು ನೀವು ದುಷ್ಟಕೂಟದ ಭಾಗವಾಗಿ,ಕಾರ್ಪೊರೇಟ್ ಕಳ್ಳರು ಜೊತೆ ನಿಂತಿದ್ದೀರಿ. ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿನ್ನುತ್ತೀರಾ? ಚಳವಳಿಗಾರರ ತಾಕತ್ತು ಎಂದರೆ ಇದು.
ಆಗೆಲ್ಲ ಎಂಥಾ ದಿನಗಳಿದ್ದುವು ಎಂದರೆ, ಒಂದೇ ಒಂದು ಕರೆ ಕೊಟ್ಟರೆ ಸಾಕಿತ್ತು, ಹತ್ತು ಸಾವಿರ ಮಂದಿ ಸೇರುತ್ತಿತ್ತು. ಆ ಶಕ್ತಿ ಈಗ ಕುಗ್ಗಿದಂತೆ ಕಾಣಿಸುತ್ತಿದೆ.ಆಗಿನ ರಾಜಕಾರಣಿಗಳಿಗೆ ರಾಜಕಾರಣ ಸಮಾಜ ಸೇವೆಯ ಭಾಗವಾಗಿತ್ತು ಎಂದರೂ ಸಹ ದಲಿತ,ದಮನಿತ ಸಮುದಾಯಗಳಿಗೆ ಯಾವುದೂ ಪುಕ್ಕಟೆ ಬರ್ತಿರ್ಲಿಲ್ಲ.ಎಲ್ಲವನ್ನೂ ಹೋರಾಡಿಯೇ ಪಡೆದುಕೊಳ್ಳಬೇಕಿತ್ತು. ಇದರಲ್ಲಿ ಇವತ್ತಿಗೂ ಏನೂ ಬದಲಾಗಿಲ್ಲ. ಎಂಭತ್ತು, ತೊಂಬತ್ತರ ದಶಕದಲ್ಲಿ ಏನು ಪರಿಸ್ಥಿತಿಯಿತ್ತೋ ಈಗಲೂ ಹಾಗೆಯೇ ಇದೆ. ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ, ಪರಿಶಿಷ್ಟ ಜಾತಿಗಳಿಗೆ ಬೇರೆ ಯಾರೂ ಶತ್ರುಗಳು ಬೇಡವೇ ಬೇಡ ಎಂಬ ಸ್ಥಿತಿ. ಎಸ್.ಸಿ.ಗಳಲ್ಲಿ ಬಹುತೇಕರು ಹೊಲೆಯರು, ಮಾದಿಗರೇ ಇದ್ದರು.
ನಂತರದ ಹಾವನೂರು ವರದಿಯ ಪರಿಣಾಮವಾಗಿ ಭಜಂತ್ರಿ,ಬಂಜಾರ,ಲಂಬಾಣಿಗರು,ಬೋವಿ,ಮುಂತಾದವರನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಲಾಯಿತು.ವಿಷಯ ಅದೆಲ್ಲ,ಅಂಚಿನ ಸಮುದಾಯಗಳಾದ ಕುಂಚಿಕೊರವರ, ದಕ್ಕಲಿಗರು, ಸಮಗಾರ, ಮಚಗಾರ, ಡೋಹರು, ಇವೇ ಮುಂತಾದ ಸಮುದಾಯಗಳು ಇಂದು ಹುಸಿ ಹಿಂದುತ್ವದ ತೆಕ್ಕೆಗೆ ಬಿದ್ದಿರುವುದು,ಕೋಮುವಾದದ ಬಲೆಯೊಳಗೆ ಸಿಲುಕಿರುವುದು ಅಪಾಯಕಾರಿಯಾಗಿದೆ ಎನ್ನುವ ಅನಿಲ್ ಹೊಸಮನಿಯವರು,ಒಳ ಮೀಸಲಾತಿಯ ಕುರಿತು ಹೇಳೋದಾದ್ರೆ,ಪಾಪ ಬಂಜಾರ ಹೆಣ್ಣುಮಕ್ಕಳು ತೀರಾ ಇತ್ತೀಚೆಗಿನವರೆಗೂ ಹಡೆದ ಕೂಸುಗಳನ್ನೂ ಮಾರಿ ಬದುಕುವ ದುಸ್ಥಿತಿಗೆ ಬಂದಿದ್ದರು ಎಂಬುದು ಶೋಚನೀಯ ಸಂಗತಿ.
ವಿಚಾರ ಮಾಡ್ರಿ,ಬಾಬಾಸಾಹೇಬರು ಏನರ ಈ ಹೊತ್ತಿನ ರೀತಿಯಲ್ಲಿ ಯೋಚನೆ ಮಾಡಿದ್ದರೆ ಬರಿ ಮಹಾರರಿಗಷ್ಠೇ ಸಹಾಯವಾಗೋದು.ಆದರೆ ಬಾಬಾಸಾಹೇಬರಂತವರಿಗೆ ಇಡೀ ದೇಶದ ಡಿಪ್ರೆಸ್ಡ್ ಕ್ಲಾಸ್ ಬಗ್ಗೆ ಕಳಕಳಿ, ಅಂತಃಕರಣವಿತ್ತು.ಇದನ್ನು ಈ ಹೊತ್ತಿನ ಹೊಸ ತಲೆಮಾರಿನ ದಲಿತ ಯುವಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಹೊಸಮನಿಯವರಿಗೆ ಸೈದ್ಧಾಂತಿಕ ಸ್ಪಷ್ಟತೆಯಿದೆ.
ಬುದ್ದಿಜೀವಿಗಳ ಲೆಕ್ಕಾಚಾರದ ಮೌನ ಮತ್ತು ಅಳೆದೂ ತೂಗಿ ಆಡುವ ಒಂದೋ ಎರಡೋ ಮಾತುಗಳು;ಅಥವಾ ಇಂದಿನ ಬಣ ಹೋರಾಟಗಳು ಕೆಲವರಿಗೆ ನಿತ್ಯ ಭೋಜನವಾಗಿ ಹೋಗಿರುವ ಈ ಹೊತ್ತಿನಲ್ಲಿ -ತೀರಾ ವಿರುದ್ಧವಾಗಿ ನಿಂತ ಕಾವಲುಗಾರನಂತೆ ತೋರುವ ಅನಿಲ ಹೊಸಮನಿಯವರಿಗೆ ಈ ಹೋರಾಟ,ಚಳವಳಿ ಹೊಸದೇನಲ್ಲ.ಚಳವಳಿ ಎನ್ನೋದನ್ನು ಒಂದು ಪ್ರಾರ್ಥನೆ ಯನ್ನಾಗಿ ಮಾಡಿಕೊಳ್ಳೋದು ಇದೆಯಲ್ಲ ಅದು ಕಷ್ಟದ್ದು.ಹೋರಾಟ,ಚಳವಳಿಗಳು ಅನಿಲ ಹೊಸಮನಿಯವರಿಗೆ ನಿತ್ಯ ಪ್ರಾರ್ಥನೆ.ಅವರು ಬಹಳ ನೆನಪು ಮಾಡಿಕೊಂಡಿದ್ದು ಏನೆಂದರೆ ಆ ಕಾಲಕ್ಕೆ ಬಹಳ ಐತಿಹಾಸಿಕವಾದ “ದೇವದಾಸಿಯರ ಮದುವೆ ಕಾರ್ಯಕ್ರಮ”.ಅದರ ಆಯೋಜಕರಲ್ಲಿ ಒಬ್ಬನಾಗಿದ್ದುದು ಅವರಿಗೆ ತೃಪ್ತಿಯಿದೆ.
ದೇವದಾಸಿಯರಿಗೆ ಎಷ್ಟೇ ಜನರೊಂದಿಗೆ ಸಂಪರ್ಕಗಳಿರಲಿ,ಅವಳಿಗೂ ಕೂಡ ಒಬ್ಬನೇ ಒಬ್ಬ ಪ್ರೇಮಿಯಿರ್ತಾನೆ ಅಥವಾ ಸಂಗಾತಿ ಇದ್ದೇ ಇರುತ್ತಾನೆ.ಅದು ದಲಿತನೇ ಆಗಿರಲಿ,ಸವರ್ಣೀಯನೇ ಇರಲಿ,ಅಂತವರ ಜೊತೆ ಓಪನ್ ಮದುವೆ ಮಾಡಿಸಲಾಯ್ತು.ಅಂದಿನ ಅಸಿಸ್ಟೆಂಟ್ ಕಮಿಷನರ್ ಕೆ.ಶಿವರಾಮರ ಇಚ್ಛಾಶಕ್ತಿಯಿಂದ ಮತ್ತು ದಲಿತ ಸಂಘರ್ಷ ಸಮಿತಿಯಿಂದ ಇದೆಲ್ಲ ಸಾಧ್ಯವಾಯಿತು ಎಂಬುದನ್ನು ಸ್ಮರಿಸಿಕೊಳ್ಳುತ್ತಾರೆ.
ಇದೇ ವರ್ಷ ಮೇ ತಿಂಗಳು,ಸಿಂಧನೂರಿನಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಸಭಿಕರ ಸಾಲಿನಲ್ಲಿ ಕುಳಿತಿದ್ದ ಅನಿಲ್ ಹೊಸಮನಿಯುವರ ಉತ್ಸಾಹವನ್ನು ಗಮನಿಸಬೇಕಿತ್ತು.ಅವರ ಹಿಂದಿನ ಸಾಲಿನಲ್ಲಿಯೇ ನಾನೂ ಕುಳಿತಿದ್ದೆ.ದೂರದ ಡಾರ್ಜಿಲಿಂಗಿನಿಂದ ಬಂದಿದ್ದ ಕವಿ ಮನೋಜ್ ಬೋಗಾಟಿಯ ‘ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ?ಮತ್ತೇನು ಗೊತ್ತಿದೆ….? ‘ಎಂದ ಮಾತುಗಳಿಗೆ ಚಪ್ಪಾಳೆ ತಟ್ಟಿ ಮಕ್ಕಳಂತೆ ಸಂಭ್ರಮಿಸುತ್ತಿದ್ದರು.ಹೈದರಾಬಾದಿನ ವೇಣುಗೋಪಾಲರ ಸಮಾನತೆಯ ಕನಸು -ಎರಡೂವರೆ ಸಾವಿರ ವರ್ಷಗಳಿಂದ ಇಲ್ಲಿಯತನಕ …ಮಾತಿಗೆ ವಾವ್…ಎಂದಿದ್ದು,ಅನುಭವ ಕಥನದ ಮಾತುಗಳಿಗೆ ಹೃದಯ ಸ್ಪಂದಿಸುತ್ತಿದ್ದ ರೀತಿ,ಹೊಸಮನಿಯುವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿತ್ತು.ಈ ಉತ್ಸಾಹ ಹೊಸ ಪೀಳಿಗೆಯ ನಮಗೆಲ್ಲ ಚೈತನ್ಯ ತರಬಲ್ಲುದು.
ಒಂದು ಕಾಲದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಎಷ್ಟು ಹಚಗೊಂಡಿದ್ದರೆಂದರೆ,ಇಡೀ ಬದುಕನ್ನು ಚಳವಳಿಗೆ ಮುಡುಪಿಟ್ಟಿದ್ದು ಒಂದು ಕಡೆಯಾದರೆ,ಹುಟ್ಟಿದ ಮಗನಿಗೂ ‘ಸಂಘರ್ಷ’ ಎಂದು ಹೆಸರಿಟ್ಟರು.ಕಳೆದ ವರ್ಷದ ಮೇ ಸಾಹಿತ್ಯ ಮೇಳದಲ್ಲಿ ತಮಿಳುನಾಡಿನ ಕವಯಿತ್ರಿ ಸುಕೀರ್ತಾರಾಣಿಯ ಕಾವ್ಯಕ್ಕೆ ಮನಸೋತು ಹೊಸಮನಿಯವರು ಅಂದೇ ಹುಟ್ಟಿದ ತಮ್ಮ ಮೊಮ್ಮಗುವಿಗೆ ಕೂಡ ಸುಕೀರ್ತಾ ಎಂದೇ ಹೆಸರಿಟ್ಟರು.
ಮಿತ್ರ ಸುನೀಲ್,ಮೇ ಸಾಹಿತ್ಯ ಮೇಳದ ಗ್ರೂಪಿನಲ್ಲಿ ನೆನಪು ಮಾಡಿಕೊಂಡಿದ್ದನ್ನು ಇಲ್ಲಿ ಹೇಳಲೇಬೇಕು. “ನಾನು ಪಿ.ಯು.ಸಿ. ಓದುತ್ತಿರುವಾಗ ಒಮ್ಮೆ ಬಿಜಾಪುರಕ್ಕೆ ಹೋಗಿದ್ದೆ.ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ಟ್ಯಾಂಡಿನೊಳಕ್ಕೆ ಹೋದೆ.ಅಲ್ಲಿ ಚಿಕ್ಕದೊಂದು ಬಾಕ್ಸ್ ಇತ್ತು.ಅದು ಪತ್ರಿಕೆಯ ಬಾಕ್ಸ್.ಆ ಬಾಕ್ಸ್ ಮೇಲೆ ಹೀಗೆ ಬರೆಯಲಾಗಿತ್ತು.
ನಿಮ್ಮ ನಿಮ್ಮ ಸಮಸ್ಯೆಗಳನ್ನು ಇಲ್ಲಿ ಬರೆದು ಹಾಕಿರಿ
-ಅನಿಲ್ ಹೊಸಮನಿ, ಪತ್ರಕರ್ತ,
ಎಂದಿತ್ತು!
ಬಿಜಾಪುರಕ್ಕೆ ಬಂದಾಗಲೆಲ್ಲಾ ಆ ಬಾಕ್ಸ್ ನೋಡೋ ಕುತೂಹಲ. ಹೀಗೆ ಹಲವರ ಭಾವಕೋಶದಲ್ಲಿ ನೆಲೆಯೂರಿರುವ ಅನಿಲರ ಎದೆಯಾಳದಲ್ಲಿ ದಲಿತರಲ್ಲಿ ಹಿಂದೆ ಇರುತ್ತಿದ್ದ ಅಂತಃಕರಣದ ಪಸೆ ಆರುತ್ತಿರುವ ನೋವಿದೆ.ಒಂದು ಕಾಲದಲ್ಲಿ ಹೆಚ್ಚು ಭಾವುಕತೆ ಮತ್ತು ತಳಸಮುದಾಯಗಳು ಹೊಂದಿದ್ದ ಭಾವನಾತ್ಮಕ ನಂಟು ಈಗ ತೆಳುವಾಗಿ,ಅಧೋಗತಿಯ ದಾರಿ ಹಿಡಿದಿರುವುದನ್ನು ನೋವಿನಿಂದಲೆ ನೋಡುವ ಅನಿಲ್,ಮತ್ತೆ ಕೂಡುವ ,ಕೂಡಿಸುವ ಮಾತುಗಳನ್ನಾಡುತ್ತಾರೆ. ವಿಜಯಪುರದಲ್ಲಿ ನಡೆದ ಮೇ ಸಾಹಿತ್ಯ ಮೇಳದ ಪೂರ್ವ ತಯಾರಿ ಸಭೆಗಳಲ್ಲಿ ಬಸೂ….ಅನಿಲ್ ಹೊಸಮನಿಯವರನ್ನು ಪರಿಚಯಿಸುತ್ತಾ… ಈ ವಯಸ್ಸಿನಲ್ಲಿ ತಮ್ಮ ಪುಟ್ಟ ಸ್ಕೂಟರಿನ ಮೇಲೆ ತಮ್ಮ ಪತ್ನಿಯೊಂದಿಗೆ ದೂರದ ನಾಗ್ಪುರ ಮತ್ತು ಬಾಬಾಸಾಹೇಬರು ಓಡಾಡಿದ ಸ್ಥಳಗಳನ್ನು ದರ್ಶಿಸಿ ಬಂದದ್ದನ್ನು ಹೇಳಿದರು.
ಈ ಅನಿಲ ಹೊಸಮನಿ -ಈ ವ್ಯಕ್ತಿಯು ನನಗೆ ಪರಿಚಯವಾಗಿದ್ದೇ ಕಳೆದ ಮೂರ್ನಾಲ್ಕು ವರ್ಷಗಳ ಹಿಂದಷ್ಟೆ.ಆದರೂ ಇವರು ನನ್ನ ಪುರಾತನ ಗೆಳೆಯರೆಂಬಂತೆ ಕಾಣಿಸುತ್ತಾರೆ.ಒಂದು ರೂಪಕದ ಮೂಲಕ ನನ್ನ ಮಾತನ್ನು ಮುಗಿಸುತ್ತೇನೆ. ನಾವು ವಾಸವಿದ್ದ ಕೂಡ್ಲಿಗಿಯಲ್ಲಿ ಹಳೆಯ ಮನೆಯೊಂದು ಬಿದ್ದಿತ್ತು.ಅಲ್ಲಿ ಬಹುದಿನಗಳ ನಂತರ ನನಗೆ ಹಳೆಯ ಲೇಖಕ್ ನೋಟುಬುಕ್ಕು ಇದ್ದ ಪಾಟೀಚೀಲವೂ ಸಿಕ್ತು.ಆ ಚೀಲದಲ್ಲಿದ್ದ ನನ್ನ ಬಾಲ್ಯದ ನೋಟ್ ಬುಕ್ಕು- ನೆನಪುಗಳ ಗಣಿಯಾಗಿ….ಒಂದು ಇಡೀ ವ್ಯವಸ್ಥೆಯ,ನಾಗರಿಕತೆಯ,ಜಗತ್ತಿನ ತನ್ನ ಪರಿಚಿತ ಲೋಕವೊಂದನ್ನು ಅನಾವರಣಗೊಳಿಸುತ್ತಾ ಹೋದಂತೆ….ಅದರ ಭಾಗವಾಗಿ ನಾನೂ ಇರುವಂತೆ ಭಾಸವಾಯಿತು.
ಹಾಗೆ ಮಾಡುವ, ಭಾವಿಸುವಂತೆ ಮಾಡುವ ಶಕ್ತಿ ಇರುವುದು ಅನಿಲ್ ಹೊಸಮನಿಯವರ ಸಾಂಗತ್ಯದ ಶಕ್ತಿ. ಪತ್ರಕರ್ತರಾಗಿ, ಬರಹಗಾರರಾಗಿ, ಅನುವಾದಕರಾಗಿ, ಸಾಮಾಜಿಕ ಹೋರಾಟಗಾರರಾಗಿ ಕಳೆದ ಐದು ದಶಕಗಳಿಂದ ಅಖಂಡ ಬಿಜಾಪುರ ಜಿಲ್ಲೆಯಲ್ಲಿ ದಲಿತ ಚಳವಳಿ ಕಟ್ಟಿ ಬೆಳೆಸಿದ ಅಪ್ಪಟ ಅಂಬೇಡ್ಕರ್ ವಾದಿ ಮತ್ತು ಬಸವವಾದಿಯೂ ಆಗಿರುವ ಅನಿಲ ಹೊಸಮನಿ ಅವರನ್ನು ಗೌರವಿಸುವ ನೆಪದಲ್ಲಿ ಎಲ್ಲ ಪ್ರಗತಿಪರ ಬಣಗಳ ಹೃದಯವಂತರೂ ಇದೇ ಜುಲೈ ಹದಿಮೂರರಂದು ಬಿಜಾಪುರದ ಅಂಬೇಡ್ಕರ್ ಭವನದಲ್ಲಿ ಸೇರಲಿದ್ದಾರೆ.
ಅವರಿಗೆ ಶುಭವಾಗಲಿ.
ಜೈ ಭೀಮ್.
ಬಿ.ಶ್ರೀನಿವಾಸ