ದಾವಣಗೆರೆ : ಜೈಲಿಗೆ ಕಳಿಸುತ್ತಾರೆಂದು ಹೆದರಿ ವ್ಯಕ್ತಿಯೋರ್ವ ಕೈ ಕುಯ್ದುಕೊಂಡು ರಂಪಾಟ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಅಣ್ಣಪ್ಪ ನಾಯ್ಕ್ ಬ್ಲೇಡ್ ನಿಂದ ಕೈ ಕೊಯ್ದುಕೊಂಡ ವ್ಯಕ್ತಿ.
ಕೌಟುಂಬಿಕ ಕಲಹದಲ್ಲಿ ಅಣ್ಣಪ್ಪನಾಯ್ಕ್ ತಮ್ಮ ಪತ್ನಿಯ ಸಹೋದರ ಹಾಗೂ ಅವರ ತಂದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಹಲ್ಲೆ ಮಾಡಿದ್ದಕ್ಕಾಗಿ ಪತ್ನಿ ಆಶಾಬಾಯಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ 307 ಕೇಸ್ ದಾಖಲು ಮಾಡಿದ್ದಳು. ಹೀಗಾಗಿ, ಪತಿಯನ್ನು ಜೈಲಿಗೆ ಕಳುಹಿಸಲಾಗಿತ್ತು.
ಬಳಿಕ ಕರುಣೆ ತೋರಿ ಪತ್ನಿ ಆಶಾಬಾಯಿ ಜಾಮೀನು ಕೊಡಿಸಿ ಜೈಲಿನಿಂದ ಪತಿಯನ್ನು ಬಿಡಿಸಿದ್ದರು. ಆದರೆ, ಜಾಮೀನು ಸಿಕ್ಕಿದ ನಂತರ ಮನೆಗೆ ಹೋದ ಪತಿ ಅಣ್ಣಪ್ಪ ನಾಯ್ಕ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಮತ್ತೊಮ್ಮೆ ದೂರು ನೀಡಿ ಜಾಮೀನು ವಾಪಸ್ ಪಡೆಯಲು ಪತ್ನಿ ಆಶಾಬಾಯಿ ನ್ಯಾಯಾಲಯಕ್ಕೆ ಬಂದಿದ್ದರು. ಜಾಮೀನು ವಾಪಸ್ ಪಡೆದರೆ ಮತ್ತೆ ಜೈಲಿಗೆ ಹಾಕುತ್ತಾರೆ ಎಂದು ಹೆದರಿದ ಅಣ್ಣಪ್ಪನಾಯ್ಕ್ ಪತ್ನಿ ಬರುತ್ತಿದ್ದಂತೆ ಆಕೆಯ ಮುಂದೆಯೇ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಅಣ್ಣಪ್ಪ ನಾಯ್ಕ್ ಪ್ರತಿಕ್ರಿಯಿಸಿದ್ದು, ಅನ್ಯ ಧರ್ಮಕ್ಕೆ ಮತಾಂತರ ಆಗು ಎಂದು ನನಗೆ ಟಾರ್ಚರ್ ಕೊಡ್ತಿದ್ದಾರೆ. ಮನೆಯಲ್ಲಿ ನಮ್ಮ ಧರ್ಮದ ದೇವರ ಫೋಟೊ ತೆಗೆದು ಅನ್ಯ ದೇವರ ಫೋಟೊಗಳನ್ನು ಹಾಕಿದ್ದಾರೆ. ಪ್ರಶ್ನಿಸಿದ್ದಕ್ಕಾಗಿ ವಿಚ್ಛೇದನ ಕೊಡುವುದಾಗಿ ಹೇಳಿ ಕೋರ್ಟ್ ಬಳಿ ಕರೆದುಕೊಂಡು ಬಂದಿದ್ದರು. ಅದಕ್ಕೆ ಕೈ ಕೊಯ್ದುಕೊಂಡಿದ್ದೇನೆ ಎಂದಿದ್ದಾರೆ.
ಇದರ ಸಂಬಂಧ ಅಣ್ಣಪ್ಪ ನಾಯ್ಕ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.