ದಾವಣಗೆರೆ: ನಮ್ಮ ದೇಶದ ಶಿಕ್ಷಣದಲ್ಲಿ ಸ್ಮರಣೆ (ಮೆಮೋರಿ) ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆಯೇ ವಿನಹ, ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡುತ್ತಿಲ್ಲ ಎಂದು ಶ್ರೀ ವಾಸವಿ ಪೀಠಂ, ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಶುಕ್ರವಾರ, ನಗರದ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಡೈಮಂಡ್ ಜ್ಯೂಬಿಲಿ ವಿದ್ಯಾಪೀಠದ ನೂತನ ಕಂಪ್ಯೂಟರ್ ಲ್ಯಾಬ್ ಹಾಗೂ ಕೊಠಡಿಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ವಿದೇಶದಲ್ಲಿ ಸ್ಮರಣೆಗೆ ಪ್ರಾಧಾನ್ಯತೆ ಇಲ್ಲ. ಅಲ್ಲಿಯ ಶಿಕ್ಷಣ ಮಕ್ಕಳನ್ನು ವಿಮರ್ಶಾತ್ಮಕ ಚಿಂತನೆಗೆ ಹಚ್ಚುವಂತಹದ್ದಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಯಶಸ್ಸು ಸಾಧಿಸಲು ಅಂಕಗಳಿಗಿಂತ ವಿಮರ್ಶಾತ್ಮಕ ಚಿಂತನಾ ಶಕ್ತಿಯ ಅಗತ್ಯವಿದೆ. ಅದನ್ನು ನಮ್ಮ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಅಳವಡಿಸಿಕೊಳ್ಳಬೇಕಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಪದವಿ ಆಧಾರದ ಮೇಲೆ ಉದ್ಯೋಗ ದೊರಕುತ್ತಿಲ್ಲ. ಆತನಲ್ಲಿರುವ ಕೌಶಲ್ಯ (ಸ್ಕಿಲ್) ಮೇಲೆ ಉದ್ಯೋಗಗಳು ಲಭಿಸುತ್ತಿವೆ. ಜೊತೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಂದು ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಅಭದ್ರತೆ ಕಾಡುತ್ತಿದೆ. ಹಾಗಾಗಿ ನಮ್ಮ ಶಿಕ್ಷಣದಲ್ಲಿ ಕೌಶಲ್ಯ ಕಲಿಕೆಗೆ ಒತ್ತು ನೀಡಬೇಕು ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾರು, ಚಿಂತನಾ ಶಕ್ತಿಯ, ಶೀಘ್ರ ನಿರ್ಧಾರ, ಬದಲಾದ ಜಗತ್ತಿಗೆ ಹೊಂದಿಕೊಳ್ಳುವ ಗುಣ ಹೊಂದಿರುತ್ತಾರೆಯೋ, ಅವರೇ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಅದು ಐಟಿ ಆಗಿರಬಹುದು ಅಥವಾ ಫಾಸ್ಟ್ ಫುಡ್ ಸೆಂಟರ್ ಆಗಿರಬಹುದು ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ವಿದ್ಯಾರ್ಥಿ ಹಾಗೂ ಶಿಕ್ಷಕವರ್ಗದವರೊಂದಿಗೆ ಶ್ರೀಗಳು ಸಂವಾದ ನಡೆಸಿಕೊಟ್ಟರು. ವಿದ್ಯಾಪೀಠದ ವತಿಯಿಂದ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.
ಎಸ್.ಕೆ.ಪಿ. ವಿದ್ಯಾಪೀಠದ ಅಧ್ಯಕ್ಷರಾದ ಆರ್. ಎಸ್. ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್. ಎಲ್. ಪ್ರಭಾಕರ್, ಕಾರ್ಯದರ್ಶಿ ಕೆ.ಎನ್. ಅನಂತರಾಮ ಶೆಟ್ಟಿ,ಜಂಟಿ ಕಾರ್ಯದರ್ಶಿ ಆರ್. ಜಿ. ಶ್ರೀನಿವಾಸ ಮೂರ್ತಿ, ಯೋಜನಾ ಕಾರ್ಯದರ್ಶಿ, ಕಾಸಲ್ ವಿ. ನಾಗರಾಜ, ಖಜಾಂಚಿ ಕಾಸಲ್ ಎಸ್. ಸತೀಶ್,
ಟ್ರಸ್ಟಿಗಳಾದ ಕೆ.ಕೆ. ಪ್ರಕಾಶ್, ಆರ್. ಜಿ. ನಾಗೇಂದ್ರ ಪ್ರಕಾಶ್, ಸುಂಕು ಶ್ರೀನಿವಾಸ ಮೂರ್ತಿ, ಬಿ. ವಿಶ್ವನಾಥ್, ಎ. ಜಿ. ಸೂರ್ಯಪ್ರಕಾಶ್, ಬಿ.ಎನ್. ಮಂಜುನಾಥ್, ಆಡಳಿತಾಧಿಕಾರಿ ಕುಮಾರ್, ಮ್ಯಾನೇಜರ್ ಹಾಲಪ್ಪ ಶೆಟ್ಟಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು ಹೇಗೆ ನಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಎಂಬ ಉಪನ್ಯಾಸಕರೊಬ್ಬರ ಪ್ರಶ್ನೆಗೆ, ‘ನೀವು ಗುರುವಿನಂತೆ ಕಟ್ಟುನಿಟ್ಟಾಗಿರಿ, ತಾಯಿಯಂತೆ ಮೃದುವಾಗಿರಿ’ ಎಂದು ಕಿವಿಮಾತು ಹೇಳಿದರು.
ಜಗತ್ತಿನ ಅತ್ಯಂತ ಶ್ರೇಷ್ಠ ವೃತ್ತಿ ಎಂದರೇ ಅದು ಶಿಕ್ಷಕ ವೃತ್ತಿ. ನೀವು ವ್ಯಕ್ತಿ-ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸವನ್ನು ಮಾಡುತ್ತಿದ್ದೀರಿ. ಸಮಾಜದ ಉತ್ತಮ ಕೆಲಸವಾಗಿದೆಯಲ್ಲದೆ, ಎಲ್ಲದಕ್ಕಿಂತ ಕಷ್ಟದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಆದರೆ ಶಿಕ್ಷಕರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದು ಶ್ರೀಗಳು ಹೇಳಿದರು.
