ದಾವಣಗೆರೆ : ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಕಳೆದ ಮೂರು ದಶಕಗಳ ಕಾಲ ಹೋರಾಟ ನಡೆಸಿಕೊಂಡು ಬರಲಾಗಿದೆ. ಈಗ ಕಾಲ ಪಕ್ವವಾಗಿದೆ. ಕೂಡಲೇ ರಾಜ್ಯ ಸರಕಾರ ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೆ ಒಳಮೀಸಲು ಜಾರಿ ಮಾಡಬೇಕು ಎಂದು ದಲಿತ ಪರ ವಿವಿಧ ಸಂಘಟನೆಗಳ ಮಹಾ ಒಕ್ಕೂಟದ ಕುಂದವಾಡ ಮಂಜುನಾಥ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಯೋಚನೆಯಲ್ಲಿ ಜಾರಿ ಮಾಡಬೇಕು. ತಳ ಸಮುದಾಯಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಅವರು, ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಮುಂದಾಗದಂತೆ ತಡೆಯುವ ಎಲ್ಲಾ ಅವಕಾಶಗಳು ನಿಮ್ಮ ಕೈಯಲ್ಲಿದೆ. ಒಳ ಮೀಸಲಾತಿ ಕೇವಲ ಒಂದು ಜಾತಿಗೆ ಸೀಮಿತವಾಗದೇ 101 ಜಾತಿಗಳು ಹಂಚಿ ತಿನ್ನುವ ಹೋರಾಟವೆಂಬುದು ರುಜುವಾತಾಗಿದೆ. ಒಳಮೀಸಲಾತಿಯನ್ನು ನಮ್ಮ ಸಂವಿಧಾನಾತ್ಮಕ ಸಂಘರ್ಷ ಹಾಗೂ ಹೋರಾಟದ ಭಾಗವಾಗಿ ಆಯ್ಕೆ ಮಾಡಿಕೊಂಡ ಕಾರಣದಿಂದ ದೈಹಿಕ ಮತ್ತು ಮಾನಸಿಕ ವಯೋಮಾನವನ್ನಷ್ಟೆ ಅಲ್ಲ ನಮ್ಮ ಸಮಾಜದ ಎರಡು ತಲೆಮಾರುಗಳ ಯುವಜನತೆಯ ವಿದ್ಯೆ, ಉದ್ಯೋಗ ಹಾಗೂ ಔದ್ಯೋಗಿಕ ಅವಕಾಶಗಳು ಸೇರಿದಂತೆ ರಾಜಕೀಯ ಸ್ಥಾನಮಾನಗಳನ್ನು ಕಳೆದುಕೊಂಡಿದ್ದೇವೆ. ಈ ತರಹದ ನಷ್ಟಗಳಿಗೆ ಆಡಳಿತರೂಢ ಎಲ್ಲಾ ಪಕ್ಷಗಳ ನಿರ್ಲಕ್ಷ್ಯವೇ ಕಾರಣ ಎಂದರು.
ಸವೋಚ್ಛ ನ್ಯಾಯಾಲಯದ ತೀರ್ಪು ಪ್ರಕಟವಾಗಿ ಒಂದು ವರ್ಷ ಕಳೆದಿದೆ. ನ್ಯಾಯಾಲಯದ ನಿರ್ದೇಶನದಂತೆ ತಾವೇ ನೇಮಿಸಿದ ನಿವೃತ್ತ ನ್ಯಾ. ನಾಗಮೋಹನ್‌ದಾಸ್ ರವರ ಏಕ ಸದಸ್ಯ ಆಯೋಗವು ಸಂಗ್ರಹಿಸಿರುವ ವೈಜ್ಞಾನಿಕ, ವಸ್ತುನಿಷ್ಠ ದತ್ತಾಂಶಗಳ ಅಧ್ಯಯನದ ಗಡುವು ಜುಲೈ-31 ಕ್ಕೆ ಅಂತ್ಯವಾಗಿದೆ. ಆಗಸ್ಟ್ 11, 2025 ರಿಂದ ತಮ್ಮ ಸರ್ಕಾರದ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಸದರಿ ಅಧಿವೇಶನದಲ್ಲಿಯೇ ಒಳಮೀಸಲಾತಿ ವಿಚಾರವು ಸರ್ವಪಕ್ಷಗಳ ಸರ್ವಾನುಮತದೊಂದಿಗೆ ಅನುಮೋದನೆಯಾಗಿ ರಾಜ್ಯಪಾಲರ ಅಂಕಿತವಾಗಬೇಕು. ಇದರ ಬದಲಿಗೆ ಹಿತಶತ್ರುಗಳ ಒತ್ತಡಕ್ಕೆ ಮಣಿಯುವುದು ಅಥವಾ ಪ್ರಸಂಗಗಳು ನಡೆದರೆ ಅದನ್ನು ತಜ್ಞರ ಸಲಹೆಯ ನೆಪದಲ್ಲಿ ಮತ್ತೊಂದು ಉಪ ಸಂಪುಟ ಸಮಿತಿ ರಚನೆಯ ನೆಪವೊಡ್ಡಿ ತಿಂಗಳುಗಳ ಕಾಲ ಮುಂದುವರೆಯುವ ಸಹಿಸಲಾಗುವುದಿಲ್ಲ. ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗುತ್ತೇವೆ ಎಂಬ ಎಚ್ಚರಿಕೆ ನೀಡಿದರು.
Read also : ದಾವಣಗೆರೆ : ಷೇರುದಾರರ ಮಕ್ಕಳಿಗೆ ಪ್ರತಿಭಾಪುರಸ್ಕಾರಕ್ಕೆ ಆಹ್ವಾನ
ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿ ಒಳಮೀಸಲಾತಿ ಜಾರಿ ತೀರ್ಮಾನ ಘೋಷಿಸಬೇಕು. ಇಲ್ಲವೆಂದರೆ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಸಚಿವ ಸಂಪುಟದ ಯಾವುದೇ ಸಚಿವರು ಕಾರ್ಯಕ್ರಮಗಳ ನಿಮಿತ್ತ ದಾವಣಗೆರೆಗೆ ಆಗಮಿಸಿದಾಗ ಕಪ್ಪು ಬಾವುಟವನ್ನು ಪ್ರದರ್ಶಿಸಿ ಫೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗರಾಜು ಗಾಂಧಿನಗರ, ಸದಾನಂದ ಚಿಕ್ಕನಹಳ್ಳಿ.ನಿಂಗಪ್ಪ ಹೆಚ್..ತಿಪ್ಪೇರುದ್ರಪ್ಪ, ಅನಿಲ್ ಕುಮಾರ್. ಹನುಮಂತಪ್ಪ. ಬಿ.ಎನ್.ನಾಗೇಶ್ ಚಿತ್ತಾನಹಳ್ಳಿ, ನಾಗರಾಜ್, ನಾಗೇಶ್. ಗಣೆಶ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.