ದಾವಣಗೆರೆ: ಸರ್ಕಾರದ ಐದು ಗ್ಯಾರಂಟಿ ಪಡೆಯುವ ಫಲಾನುಭವಿ ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಸೇರಿಸಿದರೆ ಮಾತ್ರ ಐದು ಗ್ಯಾರಂಟಿ ಕೊಡುತ್ತಿವಿ ಎಂದು ಮಾಡಿದರೆ ಒಳ್ಳೆಯದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಆಗ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಬಹುದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಈ ಕೆಲಸ ಮಾಡಿದರೆ ಎಲ್ಲಿ ಎರಡು ಸಾವಿರ ರೂ., ವಿದ್ಯುತ್ ಬಿಲ್ ಕೈ ತಪ್ಪಿ ಹೋಗುತ್ತದೆ ಎಂಬ ಭಯದಲ್ಲಾದರೂ ಫಲಾನುಭವಿ ತಾಯಂದಿರು ತಮ್ಮ ಮಕ್ಕಳನ್ನು ಈ ರೀತಿಯಾಗಿ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅಲ್ಲದೇ ಯಾರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ, ಅಂತಹವರಿಗೆ ಗ್ಯಾರಂಟಿ ಯೋಜನೆ ಮೊದಲ ಆದ್ಯತೆಯಾಗಲಿದೆ ಎಂದು ಮಾಡಿದರೆ, ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಬಹುದೇನೋ ಎಂದು ಇಂಗಿತ ವ್ಯಕ್ತಪಡಿಸಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಈ ದೇಶದ ರಾಷ್ಟ್ರಪತಿಯಾದರು. ಅವರು ರಾಷ್ಟ್ರಪತಿಯಾಗಬೇಕಾದರೆ ಅವರಲ್ಲಿರುವ ಮಾನವೀಯ ಗುಣಗಳನ್ನು ನೋಡಿ ರಾಷ್ಟ್ರಪತಿ ಮಾಡಿದರು ವಿನಃ, ಅವರ ಅಂತಸ್ತು ನೋಡಿ ಮಾಡಲಿಲ್ಲ. ಆ ರೀತಿಯ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಂಡರೆ ಒಳ್ಳೆಯದು ಎಂದರು.
ಇವತ್ತು ಶಿಕ್ಷಕರಿಗೆ ‘ಗುರು’ ಎನ್ನುವ ಬದುಕಿಗೆ ಬಹಳ ಮಹತ್ವದ ದಿನ. ತಂದೆ-ತಾಯಿ ಮೊದಲ ಗುರುವಾದರೆ, ಶಿಕ್ಷಕರು ಎರಡನೇ ಗುರು, ಮಠಾಧೀಶರು ಮೂರನೇ ಗುರು. ಈ ಮೂವರು ಗುರುವಿನ ಸ್ಥಾನ ಪಡೆಯಲು ಅರ್ಹರು. ಶಾಸಕರು, ಸಂಸದರು, ಮತ್ಯಾರು ಗುರುವಿನ ಸ್ಥಾನ ಪಡೆಯಲು ಅರ್ಹರಲ್ಲ. ಎರಡಕ್ಷರದ ಗುರು ಸ್ಥಾನ ಪಡೆಯಲು ನೀವು ಮಾತ್ರ ಅರ್ಹರು. ನೀವು ಪುಣ್ಯವಂತರು. ಅಂತಹ ಮಹತ್ವದ ಸ್ಥಾನ ಪಡೆದುಕೊಂಡಿದ್ದೀರಿ. ಹೀಗಾಗಿ ಪುಣ್ಯದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳು ಅಕ್ಷರ ಜ್ಞಾನ ಇಲ್ಲದ ಮಕ್ಕಳು. ಅಕ್ಷರ ಜ್ಞಾನ ಹೊಂದಿದ ಮಕ್ಕಳು ಖಾಸಗಿ ಶಾಲೆಗೆ ಸೇರುತ್ತಾರೆ. ನಿಮ್ಮ ಕೈಯಲ್ಲಿ ಕಗ್ಗಲ್ಲು ಕೊಟ್ಟಿದ್ದೀವಿ. ಈ ಕಗ್ಗಲ್ಲು ಕಟದು ಮೂರ್ತಿ ಮಾಡುವ ಶಕ್ತಿ ನಿಮ್ಮಲ್ಲಿದೆ. ನೀವು ಅದನ್ನು ಮಾಡಿದ್ದೀರಿ ಕೂಡ. ಇನ್ನು ಹೆಚ್ಚಿನ ಕಗ್ಗಲ್ಲನ್ನು ಕಟದು ಶಿಲ್ಪಿಯನ್ನಾಗಿ ರೂಪಿಸಿ ಆ ಮಕ್ಕಳಿಗೆ ಜ್ಞಾನವನ್ನು ಉಣಬಡಿಸುವ ಪ್ರಾಮಾಣಿಕ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
Read also : ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ ಹಣ್ಣ ಹಂಪಲು ವಿತರಣೆ
ನಾನು ಇವತ್ತು ಇಲ್ಲಿ ಶಾಸಕನಾಗಿ ಬಂದು ನಿಂತಿದ್ದೇನೆ ಎಂದರೆ ಅದು ನನಗೆ ಜ್ಞಾನವನ್ನು ಧಾರೆ ಎರೆದ ಶಿಕ್ಷಕರಿಂದ ಸಾಧ್ಯ. ಅಂತಹ ಶಿಕ್ಷಕರನ್ನು ಸ್ಮರಿಸುವ ದಿನ. ಇಂದು ಶಿಕ್ಷಕ ವೃಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಾರೋ ಒಬ್ಬರು ಮಾಡುವ ತಪ್ಪಿನಿಂದ ಎಲ್ಲಾ ಶಿಕ್ಷಕರಿಗೆ ಕಳಂಕ ತರುತ್ತಾರಡ. ಅಂತಹ ಕೆಲಸವನ್ನು ಯಾವ ಶಿಕ್ಷಕರು ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿಂ.ಎ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶಪ್ಪ,ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುಣ್ಯದ ಕೆಲಸ ಮಾಡುತ್ತಾನೋ, ಅಂತಹ ವ್ಯಕ್ತಿಗೆ ಗೌರವಇವತ್ತು ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆಯಬೇಕಾದರೆ, ಆ ವ್ಯಕ್ತಿಗೆ ಬೇಕಿರುವ ಗುಣವೆಂದರೆ ಐದಾರು ನಿವೇಶನಗಳಲ್ಲ, ಅಂತಸ್ತು, ಮಹಲು ಅಲ್ಲ, ಎಷ್ಟು ಬಂಗಾರ, ಎಷ್ಟು ಆಸ್ತಿ ಮಾಡುವುದರಿಂದ ಗೌರವ ಸಿಗುವುದಿಲ್ಲ. ಏನಾದರೂ ಗೌರವ ಸಿಗಬೇಕಾದರೆ ಯಾವ ವ್ಯಕ್ತಿ ಪುಣ್ಯದ ಕೆಲಸ ಮಾಡುತ್ತಾನೋ, ಅಂತಹ ವ್ಯಕ್ತಿಗೆ ಗೌರವ, ಮನ್ನಣೆ ಸಿಗಲು ಸಾಧ್ಯ. ಅಂತಹ ಪುಣ್ಯ ಕೆಲಸ ಮಾಡಬೇಕಾಗಿದೆ.-ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ.