ದಾವಣಗೆರೆ: ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುವ ಕಾರ್ಯ ಶಿಕ್ಷಕರಿಂದ ಆಗಬೇಕು. ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಆದರ್ಶ, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕೆಎಸ್‌ಎಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಚ್.ಆಶಾ ಕಿವಿಮಾತು ಹೇಳಿದರು.
ನಗರದ ಬಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ವನಿತ ಸಮಾಜದ ಜ್ಞಾನಜ್ಯೋತಿ ಶಿಕ್ಷಕಿಯರ ವೇದಿಕೆ ವತಿಯಿಂದ ‘ಮಾಲ್ಯ ಶಿಕ್ಷಣ’ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತ ಬಿ.ಆರ್.ಶಾಂತಕುಮಾರಿ ಸ್ಮರಣಾರ್ಥ ನಡೆಸುತ್ತಿರುವ ‘ಮೌಲ್ಯ ಶಿಕ್ಷಣ’ ತರಬೇತಿ ಕಾರ್ಯಾಗಾರವು ಒಂದು ಉತ್ತಮ ಕೆಲಸವಾಗಿದೆ. ಪ್ರಶಿಕ್ಷಣಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ್ ಮಾತನಾಡಿ, ಸತ್ಯ ಮೇವ ಜಯತೇ ಎಂಬುದು ನಮ್ಮ ದೇಶದ ಧೈಯ (ಘೋಷ) ವಾಕ್ಯ. ಮೌಲ್ಯಗಳು ನಮ್ಮ ದೇಶದ ನಮ್ಮ ನಾಡಿನ ಜೀವನಾಡಿಗಳು. ಮೌಲ್ಯಗಳಿಲ್ಲದ ಬದುಕು ಪ್ರಾಣಿಗಳಿಗಿಂತಲೂ ಕಡೆಯಾಗುತ್ತದೆ. ಇಂದಿನ ಮಕ್ಕಳಿಗೆ ಮೌಲ್ಯ ಶಿಕ್ಷಣ ಅಗತ್ಯ ಬಹಳ ಇದೆ. ಮಕ್ಕಳ ವಿಕಾಸವಾದಾಗ ಮಾತ್ರ ಅದು ದೇಶದ ವಿಕಾಸ ಸಮಾಜಕ್ಕೆ ಮೌಲ್ಯವರ್ಧನೆಯಾಗುವಂತಹ ಕೆಲಸ ಈ ಕಾರ್ಯಕ್ರಮದಿಂದ ಆಗಲಿ ಎಂದರು.
ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ಈಶ್ವರಮ್ಮ ಶಾಲೆ ಸುಮಾರು ೪೩ ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈಶ್ವರಮ್ಮ ಶಾಲೆಯ ಸಂಸ್ಥಾಪಕರಾದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತರಾದ ಬಿ.ಆರ್.ಶಾಂತಕುಮಾರಿಯವರ ಸ್ಮರಣಾರ್ಥವಾಗಿ ಈ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿವರ್ಷವೂ ನೂರಾರು ಶಿಕ್ಷಕರಿಗೆ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ಕರ್ನಾಟಕದಲ್ಲಿ ನಾಗಮ್ಮ ಕೇಶವಮೂರ್ತಿಯವರು ಮೌಲ್ಯಶಿಕ್ಷಣ ತರಬೇತಿ ಶಿಬಿರಗಳನ್ನು ನಡೆಸಿದವರು. ಮೌಲ್ಯಗಳೇ ಉಸಿರಾಗಿ ಆದರ್ಶ ಜೀವನ ನಡೆಸಿದ ಶಾಂತಕುಮಾರಿಯವರ ಸ್ಮರಣಾರ್ಥ ಈ ಕಾರ್ಯಾಗಾರ ನಡೆಸುತ್ತಿದ್ದೇವೆ. ಈಶ್ವರಮ್ಮ ಶಾಲೆಯ ಉದ್ದೇಶವೇ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುವುದಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಹಿರಿಯ ಶಿಕ್ಷಕಿಯಾದ ಕೆ.ಎಂ.ಗಿರಿಜಾ ‘ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಕ’, ವಿಶ್ರಾಂತ ಪ್ರಾಚಾರ್ಯರಾದ ಎ.ಪಿ.ಸುಜಾತ ‘ ಶಿಕ್ಷಕ ವೃತ್ತಿ ಮತ್ತು ಪಾವಿತ್ರತೆ’, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಎ.ಎಲ್.ನಾಗವೇಣಿ ‘ಪಾಠಗಳಲ್ಲಿ ಚಟುವಟಿಕೆಗಳ ಅಗತ್ಯತೆ’, ಕನ್ನಡ ಭಾಷಾ ಶಿಕ್ಷಕಿ ಎಚ್.ಎಸ್.ಅನುರಾಧ ‘ಪಾಠಗಳಲ್ಲಿ ಮೌಲ್ಯಗಳ ಸಮನ್ವಯ’ ಎಂಬ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ವನಿತಾ ಶಿಕ್ಷಕಿಯ ವೇದಿಕೆ ಅಧ್ಯಕ್ಷರಾದ ಜಿ.ಎಸ್.ಶಶಿರೇಖಾ, ಜಯಮ್ಮ ನೀಲಗುಂದ, ಜ್ಞಾನಜ್ಯೋತಿ ಶಿಕ್ಷಕಿ ವೇದಿಕೆಯ ಕಾರ್ಯದರ್ಶಿ ಮಲ್ಲಮ್ಮ, ಖಜಾಂಚಿ ವಾಗ್ಗೇವಿ ಹಾಗೂ ಕೆಎಸ್‌ಎಸ್ ಬಿಎಡ್ ಕಾಲೇಜಿನ ೭೦ ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಂಜನಿ ನಿರೂಪಿಸಿದರು. ಜಿ.ಎಸ್.ಶಶಿರೇಖಾ ವಂದಿಸಿದರು.
ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬೆಳಸಬೇಕು
ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಇಂತಹ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದರೆ ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬೆಳಸಬೇಕು.
– ಕೆ.ಆರ್.ಸುಜಾತ ಕೃಷ್ಣ, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ.