ದಾವಣಗೆರೆ : ಪಕ್ಷವಿರೋಧಿ ಚಟುವಟಿಕೆ ನಡೆಸಿದ ಹಾಗೂ ಶಿಸ್ತು ಪಾಲನೆ ಮಾಡದಿರುವ ದಾವಣಗೆರೆ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್‌ವಾಲ್ ಅವರಿಗೆ ನಿಯೋಗವೊಂದು ಮನವಿ ಮಾಡಿದೆ.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್ ನೇತೃತ್ವದ ನಿಯೋಗ ಬೆಂಗಳೂರಿನ ಯಲಹಂಕದ ರೆಸಾರ್ಟ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ದಾವಣಗೆರೆ ಜಿಲ್ಲೆಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಮತ್ತು ರಾಜಕೀಯ ವಿದ್ಯಾಮಾನಗಳ ಕುರಿತು ಗಂಭೀರ ಚರ್ಚೆ ನಡೆಸಿದೆ.
‘ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಒಳ ಒಪ್ಪಂದ ಮಾಡಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿವವರಿಗೆ ಮಣೆ ಹಾಕಲಾಗುತ್ತಿದೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗುತ್ತಿದೆ. ಈ ಎಲ್ಲಾ ಘಟಬೆಗಳಿಂದ ಜಿಲ್ಲೆಯ ಕಾರ್ಯಕರ್ತರು ಪಕ್ಷ ಚಟುವಟಿಕೆಯ ಹುಮ್ಮಸ್ಸು ಕಳೆದುಕೊಂಡಿದ್ದಾರೆ ಎಂದು ನಿಯೋಗ ದೂರಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
Read also : ದಾವಣಗೆರೆ : ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಬಿದ್ದ ಚಿರತೆ ಮರಿ!
‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ರಾಜಶೇಖರ್ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಹುದ್ದೆಯಿಂದ ಕೂಡಲೇ ಬದಲಾಯಿಸಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಘೋಷಣೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದೆ.
