ಕನ್ನಡ ನಾಡು -ನುಡಿ 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಾಂಸ್ಕೃತಿಕವಾಗಿ, ಸಾಹಿತಿಕವಾಗಿ, ಐತಿಹಾಸಿಕವಾಗಿ ದಿವ್ಯ ಪರಂಪರೆ ಯನ್ನು ಉಳಿಸಿಕೊಂಡು ಬಂದಿದೆ.
ನಮ್ಮ ನಾಡು ಯಾವ ಕಾಲಘಟ್ಟದಲ್ಲಿಯೂ ಏಕಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ರಾಷ್ಟ್ರಕೂಟರ ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೂ ಬಹುವಿಸ್ತಾರವಾಗಿ ಹಬ್ಬಿ ಕೊಂಡಿತ್ತು. ನಂತರ 22 ಪ್ರಭುತ್ವಗಳಲ್ಲಿ ಹಂಚಿಹೋಗಿತ್ತು.
ಕವಿಗಳ,ಸಾಹಿತಿಗಳ, ನಾಡ ಪ್ರೇಮಿಗಳ ಮತ್ತು ಅನೇಕ ಕನ್ನಡಪರ ಸಂಘಟನೆಗಳ ಹೋರಾಟ ದ ಪ್ರತಿಫಲವಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು ಏಕೀಕರಣ ಸಾಧಿ ಸಿ, ಭಾಷಾವಾರು ಪ್ರಾಂತ್ಯವಾಗಿ 1956 ನವೆಂಬರ್ ಒಂದರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ನಂತರ ಕನ್ನಡಿಗರ ಮಹಾದಾಸೆಯಂತೆ 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು.
ನಾಡಿನ ಜನತೆ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡಿಗರು ಕನ್ನಡ ಭಾಷೆ, ಮತ್ತು ಕನ್ನಡಿಗರ ಸಾಂಸ್ಕೃತಿಕ ಪರಂಪರೆಯು ಅನೇಕ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕನ್ನಡಪರ ಸಂಘಟನೆಗಳು,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಡಿನ ಸಮಸ್ತ ಜನತೆ ಚಿಂತಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ.
Read also : ಶಿಕ್ಷಕರ ದಿನಾಚರಣೆ|ಅರಿವೆಂಬ ರವಿಯು ಮೂಡಲು : ಗೀತಾ ಭರಮಸಾಗರ
ಮಾತೃಭಾಷೆಗೂ, ಮನುಜನಿಗೂ ಭಾವನಾತ್ಮಕ ಸಂಬಂಧವಿದೆ.ಮಾತೃ ಭಾಷೆಯನ್ನು ಮನೆ ಯಿಂದಲೇ ಕಲಿಯುವುದರಿಂದಲೇ ಜಗತ್ತಿನ ಎಲ್ಲ ಭಾಷೆಗಳನ್ನು ಕಲಿಯಲು ಸಾಧ್ಯ ಮತ್ತು ಮಗು ವಿನಲ್ಲಿ ಕಲ್ಪನಾ ಶಕ್ತಿ, ವೈಚಾರಿಕ ಶಕ್ತಿ,ತಾರ್ಕಿಕ ಶಕ್ತಿಯನ್ನು ಬೆಳೆಸುವ ಮೂಲಕ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ.
ದೀರ್ಘ ಕಾಲಾವಧಿಯಲ್ಲಿ ಬೆಳೆದು ಬಂದ ಭಾಷೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕಾದರೆ ಪ್ರಸ್ತುತ ನಾಡು ಎಷ್ಟರಮಟ್ಟಿಗೆ ತನ್ನ ಭಾಷೆಯನ್ನು ಉಳಿಸಿ ಕೊಂಡಿದೆ ಮತ್ತು ಯಾವ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ ಎಂಬುದರ ಮೇಲೆ ನಿಂತಿದೆ. ಭಾಷೆಗೆ ಜೀವಂತಿಕೆ ಬರುವುದೇ ಬಳಕೆಯಿಂದ.
ಕನ್ನಡಿಗರೆಂದರೆ ಕನ್ನಡ ಭಾಷೆಯನ್ನು ಆಡುವವನೆಂದು, ಕನ್ನಡವನ್ನಾಡುವವನೇ ಕನ್ನಡವನ್ನು ಆಡಿಸಬಲ್ಲ, ನಾವು ಕನ್ನಡಿಗರೆಂಬುದನ್ನು ಅನೇಕರು ಮರೆತಂತಿದೆ. ಈ ಕನ್ನಡ ತನಕ್ಕೆ ತನ್ನರಿವು ಇನ್ನೂ ಕೊನರಿಲ್ಲ,ಅದು ಕೊನರಬೇಕಾದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಾಗಬೇಕು.
ಕನ್ನಡ ಭಾಷೆಯ ಸೊಬಗು,ಅದರ ಭಾಷಿಕ ಚರಿತ್ರೆ, ಕನ್ನಡ ಭಾಷಿಕರ ಮನಸ್ಥಿತಿಯನ್ನು ಬಹಳ ತಾರ್ಕಿಕವಾಗಿ ಅರಿತು, ಕಂಡುಕೊಂಡ ಒಳಹುಗಳಲ್ಲಿ ಕನ್ನಡ ಭಾಷೆ ಮತ್ತು ಇತರ ಜಾಗತಿಕ ಭಾಷೆಗಳ ಹಿನ್ನೆಲೆಯನ್ನು ಗಮನಿಸುತ್ತಲೇ,ವರ್ತಮಾನವನ್ನು ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬ ಭಾಷಿಕರ ಪ್ರಾತಿನಿಧ್ಯವಿದೆ. ಭಾಷೆ ಸಂವಹನಶೀಲ ಅಭಿವ್ಯಕ್ತಿ ಮಾಧ್ಯಮವಾಗಿದೆ.
“ಮಾತೆಂಬ ಜ್ಯೋತಿಯು ಬೆಳಗದೆ ಇದ್ದಿದ್ದರೆ ಜಗತ್ತಲ್ಲವೂ ಕಗ್ಗತ್ತಲ ಮೊತ್ತವಾಗಿರುತ್ತಿತ್ತು “ಎಂಬ ದಂಡಿಯ ಮಾತು ಔಚಿತ್ಯಪೂರ್ಣವಾಗಿದೆ.ಮಾತು ಅತಿ ಶ್ರೇಷ್ಠ ಅಭಿವ್ಯಕ್ತಿ ಮಾಧ್ಯಮ. ಈ ನಿಟ್ಟಿನಲ್ಲಿ ಕಾರ್ಯನಿಷ್ಟ ವಾಗಿರುವ ಕನ್ನಡ ನಾಡಿನ ಕನ್ನಡ ಜನತೆಯ ನುಡಿಯೇ ಕನ್ನಡ.”
ಇಂತಹ ಕನ್ನಡ ಭಾಷೆ ಇಂದು ಆಧುನೀಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಅದರ ಉಳಿವಿನ ಸವಾಲುಗಳು ಎದುರಾಗುತ್ತಿರುವುದು ಕನ್ನಡಿಗರೆಲ್ಲರ ವಿಷಾದನೀಯ ಸಂಗ ತಿ. ಈ ನಿಟ್ಟಿನಲ್ಲಿ ಗ್ರಾಂಥಿಕ ಭಾಷೆ ಹಾಗೂ ಆಡು ಭಾಷೆಯಾಗಿ ಕನ್ನಡ ನಿರಂತರವಾಗಿ ಮುಂದುವರೆದು ಜೀವಂತ ಭಾಷೆಯಾದಲ್ಲಿ ” ಅರಳುಗಟ್ಟಿದ ಚಿನ್ನಕ್ಕೆ ಮೆರಗು ಕೊಡುವಂತಾಗುತ್ತದೆ ಅಲ್ಲವೇ?
ಕನ್ನಡ ದ್ರೋಹವೆಂಬದು ಕನ್ನಡಿಗರಿಂದಲೇ ಆಗುವಂತದ್ದು. ಪ್ರಸ್ತುತ ಪರಿಸ್ಥಿತಿಯು ನಿರಂತರ ವಾಗಿ ಹಿಂದಿ ಮತ್ತು ಇಂಗ್ಲೀಷಿನ ವಿರುದ್ಧ ಸೆಣಸಾಡುತ್ತ ನಮ್ಮ ಭಾಷೆಯ ಅಸ್ಮಿತೆ ಯನ್ನು ಉಳಿಸಿಕೊಳ್ಳಬೇಕಾಗಿರುವ ಸಂದಿಗ್ಧತೆ ಇಂದು ನಿರ್ಮಾಣವಾಗಿದೆ.ಕೇವಲ ತುಟಿ ತೃಪ್ತಿಯ ಕನ್ನಡ ನಿಷ್ಪ್ರಯೋಜಕ.ಅದೊಂದು ಮನೋಧರ್ಮವಾಗಬೇಕು.
“ಕನ್ನಡ ಗೊತ್ತಿಲ್ಲ “ಆದರೂ ಕರ್ನಾಟಕದಲ್ಲಿ ಬದುಕಬಹುದು.’ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ’ ಯಾರು ಬೇಕಾದರೂ ಇಲ್ಲಿ ಬಂದು ಸುಖವಾಗಿ ಬದುಕ ಬಹುದು. ರಾಜಧಾನಿಯಲ್ಲಿ ವಲಸೆ ಪ್ರಮಾಣ ಹೆಚ್ಚಾಗಿರುವುದರಿಂದ ಕನ್ನಡ ತನ್ನಷ್ಟಕ್ಕೆ ತಾನೇ ಮಾಯವಾಗುತ್ತಿದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ ನಂತರವೂ ಕನ್ನಡದ ಉಳಿವಿಗಾಗಿ, ರಕ್ಷಣೆಗಾಗಿ, ಪೋಷಣೆಗಾಗಿ, ಕನ್ನಡಪರ ಸಂಘಟನೆಗಳು,ಸಂಘ ಸಂಸ್ಥೆಗಳು ಅಭಿವೃದ್ಧಿ ಪ್ರಾಧಿ ಕಾರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ನಿರಂತರ ಜಾಗೃತಿ ಮತ್ತು ಅರಿವಿನ ಅಸ್ಥಿತ್ವಕ್ಕಾಗಿ ಕನ್ನಡವನ್ನು ಉಳಿಸುವ ಮೂಲಕ ಸಾರ್ವಭೌಮತ್ವವನ್ನು ಕಾಪಾಡುತ್ತಿವೆ.
ಭಾಷೆ, ಸಂಸ್ಕೃತಿ,ಸಾಹಿತ್ಯ, ಕಲೆ ಇವುಗಳ ನಿರ್ವಹಣೆ ಅಭಿಮಾನಯುತವಾಗಿರಬೇಕೇ ಹೊರತು, ವ್ಯವಹಾರ ಪ್ರಧಾನವಾಗಬಾರದು.
ಕನ್ನಡವೇ ಜಾತಿ,ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷ ವಾಕ್ಯದೊಂದಿಗೆ ಒಂದು ಗಂಭೀರ ಚಿಂತನೆಯ ದೂರದೃಷ್ಟಿಯ ನಾಡನ್ನು ಕಟ್ಟುವ ಪ್ರಾಮಾಣಿಕ ಕಾಯಕವನ್ನು ಚಿಂತಕರು, ಸಾಹಿತಿಗಳು, ವಿದ್ವಾಂಸರು, ಆಡಳಿತಾರೂಢರು,ಸಮಸ್ತ ಕನ್ನಡಿಗರು ಮಾಡಿದ್ದೇ ಆದರೆ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಕುವೆಂಪುರವರ ಸದಾಶಯದ ಸಮೃದ್ಧತೆಗೆ ಸಾಕ್ಷಿಯಾಗುವುದು.
ಗೀತಾ ಭರಮಸಾಗರ – ಲೇಖಕರು

 
			     
			 
                                