ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿಯ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನ ಕಿರು ಪರಿಚಯ: ಹದಿನೈದು ವರ್ಷಗಳ ಹಿಂದೆ ನಿಸ್ವಾರ್ಥ ಹಾಗೂ ಮಾನವೀಯ ಮನಸ್ಸಿನ ಕ್ಯಾನ್ಸರ್ ತಜ್ಞರಾದ ಡಾ. ಸುರೇಶ್ ರಾವ್, ಇವರು ಒಂದು ಸಾಮಾನ್ಯ ಕನಸನ್ನು ಕಂಡರು. ಅದು ಕೇವಲ ಮತ್ತೊಂದು ಆಸ್ಪತ್ರೆಯನ್ನು ನಿರ್ಮಿಸುವ ಕನಸಲ್ಲ, ಬದಲಿಗೆ ಕ್ಯಾನ್ಸರ್‍ನ ವಿರುದ್ಧ ಹೋರಾಡುವ, ಪ್ರತಿಯೊಬ್ಬರಿಗೂ ಆಸೆ, ಆರೈಕೆ ಮತ್ತು ಸಹಾನುಭೂತಿಯನ್ನು ನೀಡುವ ಒಂದು ಕುಟುಂಬವನ್ನು ನಿರ್ಮಿಸುವ ಕನಸಾಗಿತ್ತು.
ಭಗವದ್ಗೀತೆಯ ಸಂದೇಶದಂತೆ “ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ” (6,40) – ಉತ್ತಮ ಕಾರ್ಯ ಮಾಡಿದವನು ಎಂದಿಗೂ ದುರ್ಗತಿಗೆ ಒಳಗಾಗುವುದಿಲ್ಲ. ಜನರ ಆರೋಗ್ಯ ರಕ್ಷಣೆ ಒಂದು ಪುಣ್ಯ ಕಾರ್ಯವಾಗಿದೆ ಎಂಬಂತೆ ಈ ನೋವುಗಳಿಗೆ ಔಷಧ ಕೇವಲ ಚಿಕಿತ್ಸೆ ಅಲ್ಲ, ಆದರೆ ಸಹಾನುಭೂತಿ, ಸಹಾಯ ಮತ್ತು ಭರವಸೆಯ ಅಗತ್ಯವೂ ಇದೆ ಎಂಬ ಅರಿವಿನಿಂದ ಡಾ. ಸುರೇಶ್ ರಾವ್ ರವರು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಆರಂಭ ಮಾಡಿದರು. ಈ ಕಾರ್ಯಕ್ಕೆ ಹಲವಾರು ಮಹನೀಯರು ತೆರೆಮರೆ ಕಾಯಿಯಂತೆ ಸಹಕರಿಸುತ್ತಿದ್ದಾರೆ.
ಇದು ಕೇವಲ ಒಂದು ಸಂಸ್ಥೆಯಲ್ಲ, ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರತಿಯೊಬ್ಬರ ಜೀವನದಲ್ಲಿ ಸಂಜೀವಿನಿ ತರಲು ಹುಟ್ಟಿದ ಒಂದು ಸೇವಾ ಚಳುವಳಿಯಾಗಿದೆ. ಹಾವೇರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು. ಶಿವಮೊಗ್ಗ, ಉತ್ತರ ಕನ್ನಡ ಈ ಜಿಲ್ಲೆಗಳಲ್ಲೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮೂಲಕ ತಮ್ಮ ಸೇವಾ ವ್ಯಾಪ್ತಿಯನ್ನು ಆರಂಬಿಸಿದ್ದಾರೆ.
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ‘ಆಸ್ಪತ್ರೆ ಮೀರಿದ ಆರೈಕೆ.” ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದ ಹಲವೆಡೆ ಕ್ಯಾನ್ಸರ್ ಮಾಹಿತಿ ಕೇಂದ್ರಗಳನ್ನು ನಡೆಸುತ್ತಿದೆ. ಪುತ್ತೂರು, ಸುಳ್ಯ, ಕಾರ್ಕಳ, ಹೆಬ್ರಿ, ಕುಂದಾಪುರ, ಕುಮಟಾ, ಕೊಪ್ಪ, ರಾಣೆಬೆನ್ನೂರು, ಶಿಕಾರಿಪುರ ಮತ್ತು ಶಿವಮೊಗ್ಗ ಈ ಊರುಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಕ್ಯಾನ್ಸರ್ ಮಾಹಿತಿ ಕೇಂದ್ರಗಳ ಉದ್ದೇಶ
ಕ್ಯಾನ್ಸರ್ ಎಂದರೇನು? ಇದರ ಮುಖ್ಯ ಕಾರಣಗಳು ಮತ್ತು ಅಪಾಯಗಳು, ಆರಂಭಿಕ ಲಕ್ಷಣಗಳು ಗುರುತಿಸುವುದು. ತಡೆಗಟ್ಟುವ ಮಾರ್ಗಗಳು, ಚಿಕಿತ್ಸೆಯ ಅಗತ್ಯ ಅರಿವು ಮೂಡಿಸುವುದು, ಸಮಾಜದ ಪಾತ್ರ, ಜೊತೆಗೆ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿರುವ ಭಯವನ್ನು ಹೊಗಲಾಡಿಸಿ, ಜನರಲ್ಲಿ ಧೈರ್ಯವನ್ನು ತರುವುದು ಮತ್ತು ಅವರಿಗೆ ಬೆಂಬಲ ನೀಡಿ ಕ್ಯಾನ್ಸರ್ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಹಾಗಾಗಿ ರೋಗಿಯ ಸಂಬಂಧಿಕರಾಗಲಿ, ಸ್ನೇಹಿತರಾಗಲಿ ರೋಗಿಯಿಂದ ದೂರ ಇರುವುದು ಅವರ ಜೊತೆಗೆ ಮಾತಾಡದೆ ಇರುವುದು ಊಟ ಮಾಡಬಾರದು ಎಂಬ ಮೂಡನಂಬಿಕೆಯ ಕಲ್ಪನೆಯಿಂದ ಜನರನ್ನು ಹೊರತರುವುದು ಕೇಂದ್ರದ ಉದ್ದೇಶವಾಗಿದೆ.
ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಅದರ ಬಗ್ಗೆ ಶಿಕ್ಷಣದ ಆರಿವು ಮೂಡಿಸುವುದು. ರೋಗಿಗಳಿಗೆ ಆರ್ಥಿಕವಾಗಿ ತೊಂದರೆ ಇದ್ದರೆ ಆರ್ಥಿಕ ಸಹಾಯದ ಕುರಿತು ಮಾಹಿತಿ. “ಕ್ಯಾನ್ಸರ್ ರೋಗಿಗೆ ಮನೆಯವರು ಅನುಸರಿಸಬಹುದಾದ ಆರೈಕೆ ಕ್ರಮವನ್ನು ಡಾ.ಸುರೇಶ್ ರಾವ್ ರವರು ಅತ್ಯಂತ ಕಾಳಜಿಯಿಂದ ಕ್ಯಾನ್ಸರ್ ಮಾಹಿತಿ ಕೇಂದ್ರಗಳ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ.
ಕ್ಯಾನ್ಸರ್ ರೋಗಿಯ ಜೊತೆ ಕುಟುಂಬದವರ ನಡವಳಿಕೆ
ರೋಗಿಗೆ ಅರಿವು ಮತ್ತು ಧೈರ್ಯ ತುಂಬುವುದು, ರೋಗಿಯೊಂದಿಗೆ ಕುಟುಂಬ ಸದಸ್ಯರು ಕುಳಿತು ಮಾತನಾಡುವುದು, ಅವರ ಮನೋಬಲ ಹೆಚ್ಚಿಸುವಂತೆ ಧೈರ್ಯ ತುಂಬುವ ಕಥೆಗಳು, ಉದಾಹರಣೆಗಳು ಹೇಳುವುದು. ವೈದ್ಯರು ಹೇಳಿದ ಎಲ್ಲಾ ಸೂಚನೆಗಳನ್ನು ಬರಹದಲ್ಲಿ ಇಟ್ಟುಕೊಳ್ಳುವುದು. ಪೆÇೀಷಕಾಂಶ ಇರುವ ತಾಜಾ ಅಹಾರ (ಸಾರು, ತರಕಾರಿ, ಹಣ್ಣು, ಸಜ್ಜೆ/ಅಕ್ಕಿ ಗಂಜಿ) ಸೇವನೆ. ಚಿಕ್ಕ ಚಿಕ್ಕ ಪ್ರಮಾಣದಲ್ಲಿ ದಿನಕ್ಕೆ 5-6 ಬಾರಿ ಕೊಡುವುದು. ಹೆಚ್ಚಿನ ಎಣ್ಣೆ, ಕಾರ, ಹಳೆಯ ಆಹಾರ ತಪ್ಪಿಸುವುದು. ಶಾಂತವಾದ ಕೋಣೆಯಲ್ಲಿ ವಿಶ್ರಾಂತಿ ನೀಡುವುದು. 30 ನಿಮಿಷದ ಮೃದುವಾದ ಸಂಗೀತ/ಪ್ರಾರ್ಥನೆ.
ಹಾಸಿಗೆ ಬಟ್ಟೆ, ಕೊಠಡಿ ಸ್ವಚ್ಛವಾಗಿರಿಸುವುದು. ಬಾಯಿ ತೊಳೆಯಲು ಮೃದುವಾದ ದ್ರವ/ಉಪ್ಪು ನೀರು ಕೊಡುವುದು. ಚಿಕ್ಕ ವ್ಯಾಯಾಮ ಸಾಧ್ಯವಾದರೆ ಸ್ವಲ್ಪ ನಡೆಯಲು ಸಹಾಯ ಮಾಡುವುದು (ಮನೆ ಆವರಣದಲ್ಲಿ). ಸಾಧ್ಯವಿಲ್ಲದಿದ್ದರೆ ಹಾಸಿಗೆಯಲ್ಲಿಯೇ ಕೈ, ಕಾಲು ಚಲನೆ ಅಭ್ಯಾಸ. ಹತ್ತಿರದ ಸ್ನೇಹಿತರು, ಬಂಧುಗಳು ಬಂದು ಧೈರ್ಯ ತುಂಬುವುದು (ಅತಿಯಾದ ಜನಸಂದಣಿ ಬೇಡ), ಅವರ ಜೊತೆ ನೆನಪುಗಳು ಹಂಚಿಕೊಳ್ಳಲು ಅವಕಾಶ ಕೊಡುವುದು.
ಮನೋವಿಶ್ರಾಂತಿ ಧ್ಯಾನ, ಮಂತ್ರ, ಭಗವದ್ಗೀತೆ/ಸುಭಾಷಿತ ಪಠಣ, ಚಿತ್ರಕಲೆ, ಮೃದು ಬರವಣಿಗೆ, ಹಗುರವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ, ಕುಟುಂಬದ ಪಾಲ್ಗೊಳ್ಳುವಿಕೆ ಕುಟುಂಬ ಸದಸ್ಯರೆಲ್ಲರು ಸೇರಿ ಊಟ ಮಾಡುವ ಪ್ರಯತ್ನ. ಈ ರೀತಿಯಿಂದ ರೋಗಿಗಳಲ್ಲಿ ಚೈತನ್ಯ ತುಂಬುವ ಕೆಲಸವನ್ನು ಕುಟುಂಬದ ಸದಸ್ಯರು ಮಾಡಬೇಕು ಎನ್ನುವ ಸಂದೇಶವನ್ನು ಡಾ. ಸುರೇಶ್ ರಾವ್ ತಿಳಿಸುತ್ತಾರೆ. ಇಂತಹ ಇನ್ನೂ ಉಪಯುಕ್ತ ಮಾಹಿತಿಯನ್ನು ಕ್ಯಾನ್ಸರ್ ಮಾಹಿತಿ ಕೇಂದ್ರದಲ್ಲಿ ಸಾರ್ವಜನಿಕರು ಉಚಿತವಾಗಿ ಪಡೆಯಲು ಸಂಜೀವಿನಿ ಟ್ರಸ್ಟ್ ವ್ಯವಸ್ಥೆ ಮಾಡಿದೆ.
ಕ್ಯಾನ್ಸರ್ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್‍ನ ಪ್ರಮುಖ ಧೈಯ ಕ್ಯಾನ್ಸರ್ ರೋಗಿಗಳಿಗಾಗಿ ಕರುಣೆಯುತ ಆರೈಕೆ ಮತ್ತು ಅಗತ್ಯ ಸಹಾಯ ಒದಗಿಸುವುದಕ್ಕೆ ಸಂಪೂರ್ಣವಾಗಿ ಬದ್ಧರಾಗಿರುವುದು, ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಒದಗಿಸುವುದು, ಶಿಕ್ಷಣಾತ್ಮಕ ಕಾರ್ಯಾಗಾರಗಳನ್ನು ನಡೆಸುವುದು. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಕೆಲವು ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಕ್ಯಾನ್ಸರ್ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್‍ನ ವತಿಯಿಂದ ನಡೆಸಲಾಗಿದೆ.

ಸ್ವಯಂ ಸೇವಕರಿಗೆ ತರಬೇತಿ
ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಶೀರ್ಥಹಳ್ಳಿ ಇವರ ಸಹಯೋಗದಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಭಿಯಾನದ ಪ್ರಯುಕ್ತ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವವರಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು 2025 ರಂದು ತೀರ್ಥಹಳ್ಳಿ ಯಲ್ಲಿ ಇರುವ ಎಮ್.ಐ.ಒ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಿದ್ವಾಯಿ ಮೆಮೊರಿಯಲ್ ಇನ್ಸಿಟ್ಯೂಟ್ ಆಫ್ ಆಂಕಾಲಜಿ, ಬೆಂಗಳೂರು ಇದರ ಮೆಡಿಕಲ್ ಅಂಕಾಲಿಜಿಸ್ಟ್, ಅಸೋಸಿಯೇಟ್ ಪ್ರೊಫೆಸರ್ ಡಾ.ಎಲ್.ಕೆ. ರಾಜೀವ್, ಡಾ. ಅನಸೂಯಾ ಡಿ.ಎಸ್., ಎಂ.ಡಿ., ಜನರಲ್ ಮೆಡಿಸಿನ್: ಅಸೋಸಿಯೇಟ್ ಪ್ರೊಫೆಸರ್. ಸೇಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಡಾ. ಡಿ. ಸುರೇಶ್ ರಾವ್ ಸ್ವಯಂ ಸೇವಕರಿಗೆ ತರಬೇತಿ ಹಮ್ಮಿಕೊಂಡಿದ್ದರು. ಇಂತಹ ಸ್ವಯಂ ಸೇವಕರು ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಕ್ಯಾನ್ಸರ್ ಜನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಒಂದು ಲಕ್ಷಜನರಿಗೆ ಕ್ಯಾನ್ಸರ್ ಕುರಿತು ಮಾಹಿತಿ ಸಂಗ್ರಹ ಅಭಿಯಾನ
ಕ್ಯಾನ್ಸರ್ ಕುರಿತಾದ 12 ಪ್ರಶ್ನೆಗಳುಳ್ಳ ಕರಪತ್ರದ ಮೂಲಕ ಒಂದು ಲಕ್ಷಜನರ ಸಮೀಕ್ಷೆಯನ್ನು ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಬೃಹತ್ ಅಭಿಯಾನ ದಿನಾಂಕ 18-10-2025 ರಿಂದ 26-01-2026 ರ ವರೆಗೆ ನಡೆಯಲಿದೆ. ಈ ಸಮೀಕ್ಷಾ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳು ಕೈ ಜೋಡಿಸಿರುತ್ತಾರೆ.
ಕ್ಯಾನ್ಸರ್ ಸೇವಾ ಮಾಹಿತಿ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ: ತೀರ್ಥಹಳ್ಳಿ 8762096205, ಶಿವಮೊಗ್ಗ: 8951683508, 9448790127, ರಾಣೇಬೆನ್ನೂರು 8904853106, ಶಿಕಾರಿಪುರ 8904655104, ಕೊಪ್ಪ 8792836096, ಕುಮಟ 8951639325.
ವಿಶೇಷ ಲೇಖನ: ಅ.ನಾ.ವಿಜಯೇಂದ್ರ ರಾವ್
ಅಭಿಯಾನದ ಮುಖ್ಯ ಸಂಯೋಜನಾಧಿಕಾರಿ:
ಶಿವಮೊಗ್ಗ.
