ದಾವಣಗೆರೆ/ ನವದೆಹಲಿ: ಮೆಕ್ಕೆಜೋಳದ ಬೆಲೆಯಲ್ಲಿನ ತೀವ್ರ ಕುಸಿತವನ್ನು ಪರಿಹರಿಸಲು ತುರ್ತು ಹಸ್ತಕ್ಷೇಪದ ಅವಶ್ಯಕತೆ ಕುರಿತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಗುರುವಾರ ನಡೆದ ಸಂಸತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದರು.
ದೇಶದ ಬೆನ್ನೆಲುಬು ಮತ್ತು ಅನ್ನದಾತರಾದ ರೈತರ ತುರ್ತು ಅವಶ್ಯಕತೆ ಬಗ್ಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಸದನದ ಗಮನಸೆಳೆದರು.
ಮೆಕ್ಕೆಜೋಳ ಬೆಳೆದ ರೈತರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅನುಕೂಲಕರ ಮಳೆ ಯಿಂದಾಗಿ, ಕರ್ನಾಟಕವು ಈ ಋತುವಿನಲ್ಲಿ ಸುಮಾರು 32 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಗೆ ಯೋಗ್ಯವಾದ ಮೆಕ್ಕೆಜೋಳವನ್ನು ಉತ್ಪಾದಿಸಿದೆ ಎಂದರು.
ಕೇಂದ್ರ ಸರ್ಕಾರವು ಕ್ವಿಂಟಲ್‌ಗೆ 2,400 ಎಂ. ಎಸ್.ಪಿಯನ್ನು ಸೂಚಿಸಿದ್ದರೂ, ಕರ್ನಾಟಕ ಮತ್ತು ಇತರ ರಾಜ್ಯಗಳ ರೈತರು ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಗಿಂತ ಕಡಿಮೆ ಮಾರಾಟ ಮಾಡುವ ಪರಿಸ್ಥಿತಿ ಒದಗಿದೆ.
NAFED (ನ್ಯಾಷನಲ್ ಅಗ್ರಿಕಲ್ಬರಲ್ ಕೋಅಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು ಇತರ ಏಜೆನ್ಸಿಗಳ ಮೂಲಕ ಸಂಗ್ರಹಣೆಯು ಅಸಮರ್ಪಕ ವಾಗಿ ನಡೆಯುತ್ತಿದೆ ಹಾಗೂ ಖರೀದಿ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದೇ ಹಾಗೂ ನಿರ್ಬಂಧಿತ ಷರತ್ತುಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದರಿಂದಾಗಿ ರೈತರನ್ನು ಖಾಸಗಿ ವ್ಯಾಪಾರಿಗಳ ಕೈಗೆ ತಳ್ಳುತ್ತದೆ ಮತ್ತು ಭಾರೀ ನಷ್ಟವನ್ನು ಉಂಟುಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
Read also : ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ
ಇದು ವಾಡಿಕೆಯ ಮಾರುಕಟ್ಟೆಯ ಏರಿಳಿತವಲ್ಲ ಆದರೆ MSP ಜಾರಿ ಮತ್ತು ಸಂಗ್ರಹಣೆ ಯೋಜನೆಯಲ್ಲಿ ವ್ಯವಸ್ಥಿತ ವೈಫಲ್ಯವಾಗಿದೆ. ಇದು ನೇರವಾಗಿ ಗ್ರಾಮೀಣ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. MSP ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಖರೀದಿ ಕೇಂದ್ರಗಳನ್ನು ವಿಸ್ತರಿಸಲು, ಆಮದುಗಳನ್ನು ನಿರ್ಬಂಧಿಸಲು, PDS ಮತ್ತು ಡಿಸ್ಟಿಲರಿಗಳಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣ ತಯಾರಿಸುವ ಮೂಲಕ ಹೆಚ್ಚುವರಿ ಮೆಕ್ಕೆಜೋಳವನ್ನು ಬಳಸಿಕೊಳ್ಳಲು ಮತ್ತು ಬೆಲೆಗಳನ್ನು ಸ್ಥಿರಗೊಳಿಸಲು ಕಾಲಮಿತಿಯ ಯೋಜನೆಯನ್ನು ಘೋಷಿಸಲು ತಕ್ಷಣದ ಕ್ರಮಗಳ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಶೂನ್ಯವೇಳೆಯ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಕನ್ನಡದಲ್ಲೇ ಮಾತನಾಡುವ ಮೂಲಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸದನದ ಗಮನ ಸೆಳೆದಿದ್ದು ವಿಶೇಷವಾಗಿತ್ತು.
