ಸೃಷ್ಟಿಕರ್ತನಾದ ದೇವರ ಅಗತ್ಯವೇ ಇಲ್ಲದಂತೆ ಚಿಂತಿಸಿದ ಬುದ್ಧನಂಥವರಿಂದ ನಿರ್ಮಿತವಾದ 2000 ವರ್ಷಗಳಷ್ಟು ಹಳೆಯದಾದ ಭಾರತೀಯ ಹಿಂದೂ ನಾಗರಿಕತೆ,ದೇಶದ ಮರ್ಯಾದಸ್ಥ ಮೂರ್ಖರೆಂಬ ಪ್ರಭುತ್ವದ ಸಿನಿಕ ಬೆಂಬಲಿಗರಿಂದ ಹೇಗೆ ನಾಶವಾಗುತ್ತಿದೆ ಮತ್ತು ವರ್ತಮಾನದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ನಗೆಪಾಟಲಿಗೆ ಈಡಾಗುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುವ “ಗೌರವಾನ್ವಿತ ಮೂರ್ಖರು “(Respected Idiots.) ಎಂಬ ಈ ಕೃತಿಯು, ಸಾಮಾಜಿಕ ನ್ಯಾಯ ಮತ್ತು ಮುಕ್ತ ಆಧ್ಯಾತ್ಮಿಕತೆಯ ಹುಡುಕಾಟವೇ ಚಳವಳಿಯಾಗಿ ಮಾರ್ಪಟ್ಟ ವಚನ ಚಳುವಳಿಯ ಬಸವಣ್ಣನನ್ನು, ಹತ್ತೊಂಭತ್ತನೆಯ ಶತಮಾನದ ಜ್ಯೋತಿಬಾ ಫುಲೆ,ಪೆರಿಯಾರು, ಕೇರಳದ ನಾರಾಯಣಗುರು,ಕೋವೂರು,ಗಾಂಧಿ,ಅಂಬೇಡ್ಕರ್ ಮತ್ತು ನಮ್ಮ ಕರ್ನಾಟಕದ ಎಚ್.ನರ ಸಿಂಹಯ್ಯನವರ ನೆನಪುಗಳನ್ನು ಒಟ್ಟಿಗೇ ತರುತ್ತವೆ.
ಕರ್ನಾಟಕವು ವೈಚಾರಿಕ ದೃಷ್ಟಿಯಲ್ಲಿ ಅಷ್ಟೇನು ಬೆಳೆಯಲಿಲ್ಲ,ಮುಂದುವರೆಯಲಿಲ್ಲ.ಪಕ್ಕದ ತಮಿಳುನಾಡು ,ಆಂಧ್ರ,ತೆಲಂಗಾಣ ಮತ್ತು ಕೇರಳದಂತಹ ರಾಜ್ಯಗಳಲ್ಲಿ ವಿಚಾರಕ್ರಾಂತಿ ಆದಷ್ಟು ನಮ್ಮ ರಾಜ್ಯದಲ್ಲಿ ಆಗಲಿಲ್ಲ.ಈ ರಾಜ್ಯಗಳ ಮಧ್ಯೆ ಕರ್ನಾಟಕ ಬೆಚ್ಚಗೆ ಉಳಿದುಬಿಟ್ಟಿದೆ.
ಏನೂ ಬದಲಾವಣೆಯಾಗಿಲ್ಲ ಎಂದ ಎಚ್.ನರಸಿಂಹಯ್ಯನವರ ಮಾತು, ಕುಂ.ವೀ.ಅನುವಾದಿಸಿರುವ ಈ ಕೃತಿಯಿಂದಾಗಿ ಮತ್ತೆ ನೆನಪಿಗೆ ಬರುವಂತಾಯಿತು.
ತೆಲುಗಿನ ಭೌತ ವಿಜ್ಞಾನಿ, ಪ್ರಸಿದ್ಧ ಲೇಖಕ,ಡಾ.ದೇವರಾಜು ಮಹಾರಾಜು ಅವರು’ದೇಶಂಲೋ ಗೌರವನೀಯುಲೈನ ಮೂರ್ಖಲು’ಕೃತಿಯನ್ನು ಕನ್ನಡದ ಖ್ಯಾತ ಲೇಖಕ ಕುಂ.ವೀ.’ಗೌರವಾನ್ವಿತ ಮೂರ್ಖರು-Respected Idiots ‘ಎನ್ನುವ ಹೆಸರಿನಲ್ಲಿ ಕನ್ನಡೀಕರಿಸಿ ಉಪಕರಿಸಿದ್ದಾರೆ.
ಹತ್ತೊಂಬತ್ತು ಪುಟ್ಟ ಪುಟ್ಟ ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಪ್ರತಿ ಅಕ್ಷರಗಳಲ್ಲಿ ವೈಜ್ಞಾನಿಕ,ಪ್ರಗತಿಪರ,ಜೀವಪರ ನೋಟಗಳಿವೆ.
ಡಾರ್ವಿನ್ನನ ವಿಕಾಸವಾದದ ಪ್ರಕಾರ ಮನುಷ್ಯನ ವಿಕಾಸದ ತಾಯಿ ಬೇರು ಇರುವುದೇ ಪ್ರಾಣಿಗಳ ವಿಕಾಸದಲ್ಲಿ ಎಂಬುದೇನೋ ನಿಜ.ಆದರೆ, ಭಾರತೀಯ ಸನಾತನಿಗಳು ಮನುಷ್ಯನನ್ನು ಸಮಕಾಲೀನ ಪ್ರಗತಿಪರ ಚಿಂತನೆಗಳಿಂದ ಬೇರ್ಪಡಿಸುತ್ತಿವೆ.
ಮನುಷ್ಯನ ನಂಬಿಕೆಗಳನ್ನು ಜೀವಶಾಸ್ತ್ರೀಯ ಚಿಂತನೆಗಳಿಂದ ದೂರವಿರಿಸುತ್ತವೆ.ಭಾರತದ ಸಮುದಾಯಗಳು ಈ ಹೊತ್ತು, ಯಾವ ಪರಿ ಮೌಢ್ಯವನ್ನು,ಮತಾವಲಂಬಿ ಅಹಂಗಳನ್ನು ಪ್ರದರ್ಶಿಸುತ್ತಿವೆ ಎಂದರೆ,ಆ ಮನುಷ್ಯರ ಇಂದ್ರಿಯಗಳು ಹೊಸ ಆಲೋಚನೆಗಳನ್ನೆ ತಿರಸ್ಕರಿಸುತ್ತವೆ ಅಷ್ಟೇ ಅಲ್ಲ, ವೈಚಾರಿಕತೆಯ ಪ್ರವೇಶವನ್ನೂ ನಿರ್ಬಂಧಿಸುತ್ತಿವೆ.
ಹೀಗೆ ಸಾಗುವ ಕೃತಿಯುದ್ದಕ್ಕೂ ಮರ್ಯಾದಸ್ಥರು, ಗೌರವಾನ್ವಿತರು ಎನಿಸಿಕೊಂಡಿರುವ ಈ ದೇಶದ ರಾಜಪ್ರಭ್ರೃತಿಗಳು, ಬುದ್ದಿಜೀವಿಗಳು,ಮೀಡಿಯಾಗಳು ಎಂಬ ಸಮುದಾಯಗಳು ಹೇಗೆ ಆಧಾರರಹಿತ ಸುಳ್ಳುಗಳನ್ನು ಹೇರಲು ದಿನನಿತ್ಯವೂ ಶ್ರಮಿಸುತ್ತಿವೆ ಎಂಬುದನ್ನು ವಿವರಿಸುತ್ತವೆ.
ಕೃತಿ ಓದಿದ ನಂತರ,ಈ ಸಮಾಜಕ್ಕೆ ತಗುಲಿರಬಹುದಾದ ಕೋಮುವ್ಯಾಧಿಯಿಂದಾಗಿ ಮತ್ತು ಅದು ಉಂಟುಮಾಡಿದ ಹಿಂಸೆ ಮತ್ತು ಆಳವಾದ ಗಾಯ,ಮತ್ತು ಚಿಕಿತ್ಸೆಗೂ ಸ್ಪಂದಿಸದ ‘ಪ್ಯಾರಾನಾಯ್ಡ ಸ್ಕಿಜೋಫೇನಿಕ್ ‘ರೋಗಿಯಂತೆ ಕಾಣುವ ದೇಶದ ದುರಂತ ಕಥನವನ್ನು ಪುಸ್ತಕ ವಿವರಿಸುತ್ತದೆ.
ದೇವರು, ಧರ್ಮ ಎಂಬುದೇ ಭಾರತೀಯರ ಪಾಲಿನ ಸಾಂತ್ವನ ಕೇಂದ್ರ ಎಂಬಂತೆ ಬಿಂಬಿಸಿ,ದೇಶವನ್ನು ವೈಚಾರಿಕ ಶೂನ್ಯಕ್ಕೆ ಇಳಿಸಿರುವ ರಾಜಕಾರಣಕ್ಕೆ ಈಗ ಅವಸಾನದ ಕಾಲ.ಹುಸಿ ರಾಷ್ಟ್ರೀಯತೆ, ಮತೋನ್ಮಾದ, ಭಾವೋದ್ವೇಗಗಳೇ ಸರಕುಗಳಂತೆ ಪರಿಣಮಿಸಿದ ಈ ಕಾಲಘಟ್ಟದಲ್ಲಿ ,ಬುದ್ಧನೆಂಬುವನು ಈ ನೆಲದ ತುಂಬಾ ನಡೆದಾಡಿದವನನ್ನು,ವಿಷ್ಣುವಿನ ಹನ್ನೊಂದನೆಯ ಅವತಾರ ಪುರುಷನೆಂದು ಹೈಜಾಕ್ ಮಾಡಲಾಯಿತು.
ಬುದ್ಧ, ಮೌಢ್ಯಾಚರಣೆಗಳನ್ನು ತಿರಸ್ಕರಿಸಿದರೂ ಭಾರತೀಯ ಸಮುದಾಯ ಆತನನ್ನು ತಿರಸ್ಕರಿಸಲಿಲ್ಲ. ಈ ಹೊತ್ತಿನ ಜಾಗತಿಕ ಮೀಡಿಯಾ ಭಾರತೀಯ ಮಾಧ್ಯಮಗಳನ್ನು ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರೆ, ಭಾರತೀಯ ಮತೀಯವಾದಕ್ಕೆ ಬಲಿಯಾದ ದುರಂತ ಚಿತ್ರ ಕಣ್ಣೆದುರು ಮೂಡಿಬರುತ್ತಿದೆ.
ನಾಗಸಾಧುಗಳಲ್ಲಿ ದೈವಿಕ ನ್ಯಾನೋ ಟೆಕ್ನಾಲಜಿ ಇರುವುದೆಂದು ಪ್ರಚಾರ ಮಾಡಿ,ಅವರ ಕೈಗಳಲ್ಲಿ ಸೆಲ್ ಫೋನುಗಳನ್ನೂ ಕೊಟ್ಟು ನೋಡಿ ದೇಶ ಎಷ್ಟೊಂದು ಹೊಳೆಯುತ್ತಿದೆ ಎಂಬಂತೆ ಬಿಂಬಿಸಲಾಯಿತು.ಗೌರವಾನ್ವಿತ ಮೂರ್ಖರು ನಾಗ ಸಾಧುಗಳು,ಅಘೋರಿಗಳು,ಸಾಧುಸಂತರು,ಇವರೆಲ್ಲರೂ ಸಾಫ್ಟವೇರ್ ತಂತ್ರಜ್ಞರೆಂದು ಹುಯಿಲೆಬ್ಬಿಸಿ,ದೇಶದ ಯುವಪೀಳಿಗೆಯ ವೈಚಾರಿಕ ಚಿಂತನೆಗೆ ಅಗ್ನಿಸ್ಪರ್ಶವನ್ನೇ ಮಾಡಿಬಿಟ್ಟಿತು.
Read also : ಮೊಹಮ್ಮದ್ ಹನೀಫ್ ಸಿದ್ದಿಕಿಗೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ
ದೇಶದ ಒಂದಿಡೀ ಪೀಳಿಗೆ ಮಠಗಳ,ಆಶ್ರಮಗಳ ಭಜನಾ ಪರಿಕರಗಳಂತೆ ಬಳಕೆಯಾಗುತ್ತಿರುವುದು ಸಹ ದುರಂತವೇ ಸರಿ.
ಒಂದು ಕಾಲದಲ್ಲಿ ಭಾರತದ ರಾಜಕಾರಣಕ್ಕೆ ಬೌದ್ಧಿಕ ಶಕ್ತಿಯನ್ನೇ ತುಂಬಿದ್ದ,ರಾಜಕಾರಣದ ದಿಕ್ಕನ್ನೇ ಬದಲಿಸುವ ಶಕ್ತಿಯನ್ನು ಹೊಂದಿದ್ದ ಪಶ್ಚಿಮಬಂಗಾಳದ ನೆಲದಲ್ಲೀಗ,ಅಲ್ಲಿನ ರಾಜಕಾರಣಿಯೊಬ್ಬ ‘ಭಾರತದ ಹಸುಗಳ ಡುಬ್ಬದಲ್ಲಿ ಬಂಗಾರದ ಉತ್ಪಾದನೆ ಮಾಡುವ ರಕ್ತನಾಳಗಳಿರುವುದಾಗಿ,ಸೂರ್ಯನ ರಶ್ಮಿ ಬಿದ್ದಾಗ ಅದರಲ್ಲಿ ಚಿನ್ನ ಉತ್ಪತ್ತಿಯಾಗುವುದು’ ಎಂದೂ,ಆ ಕಾರಣದಿಂದಾಗಿಯೇ ಹಸುವಿನ ಹಾಲಿಗೆ ಹಳದಿ ಬಣ್ಣ ಬಂದಿರುವುದೆಂದೂ ತನ್ನ ಹೇಳಿಕೆಯನ್ನು ನೀಡಿದ.
ಆತ ನೀಡಿದ ಈ ಹೇಳಿಕೆ ಭಾರತದ ವಿಜ್ಞಾನಿಗಳನ್ನಷ್ಟೇ ಅಲ್ಲ,ಇಡೀ ವಿಶ್ವದ ವಿಜ್ಞಾನಿಗಳ ಸಮುದಾಯವೇ ಆಹಾ…! ಭಾರತೀಯ ಬೌದ್ಧಿಕ ದಾರಿದ್ರ್ಯವೇ! ಎಂಬ ಉದ್ಘಾರ ತೆಗೆಯುವಂತಾಯ್ತು.ಹಸು ಇಡೀ ಜಗತ್ತಿನಾದ್ಯಂತ ಹಾಲು ಕೊಟ್ಟರೆ,ಭಾರತದಲ್ಲಿ ಮಾತ್ರ ಈ ನಿರುಪದ್ರವಿ ಹಸು ಎಂಬ ಪ್ರಾಣಿ -ಈ ದೇಶದಲ್ಲಿ ಮಾತ್ರ ಓಟು ತರುತ್ತಿದೆ ಎಂಬುದು ಪರಿಸ್ಥಿತಿಯ ವ್ಯಂಗ್ಯ.
ಈ ಪುಸ್ತಕದ ಪ್ರಸ್ತುತತೆ ಎಷ್ಟಿದೆಯೆಂದರೆ ಮುಂಬರುವ ಪಶ್ಚಿಮ ಬಂಗಾಲದ ಚುನಾವಣೆಗಳ ಹೊತ್ತಲ್ಲಿ ಈಗ ವಂದೇ ಮಾತರಂ ಗೀತೆಯ ಜಗಳ ಶುರುವಾಗಿದೆ. ಒಂದು ಹಾಡಿನ ಕೆಲವು ಚರಣಗಳ ಚರ್ಚೆಗೆ ಇಡೀ ಭಾರತದ ಪಾರ್ಲಿ ಮೆಂಟು ಬೇಡ ಭಾರತೀಯರ ಶ್ರಮದ ಹಣ ಮತ್ತು ಸಮಯ ಮೀಸಲಿಡುತ್ತದೆ ಮತ್ತು ಪೋಲುಮಾಡುತ್ತದೆ.
ಹೀಗಾಗಿ ಭಾರತದಲ್ಲೀಗ ಹಸುವಿನ ಹಾಲು,ಗಂಜಲ ಮತ್ತು ಗೀತೆ ಕೂಡ ಓಟ್ ಬ್ಯಾಂಕ್ ರಾಜಕಾರಣದ ಸುಳಿಗೆ ಸಿಲುಕಿರುವುದನ್ನು ಗಮನಿಸಬಹುದು.
ರಾಷ್ಟ್ರೀಯತೆ-ಇದು ಕಳೆದ ಎರಡ್ಮೂರು ಶತಮಾನಗಳ ಹಿಂದೆಯಷ್ಟೇ ಯುರೋಪು ಹಠ ಹಿಡಿದು ಸೃಷ್ಟಿಸಿದ ವಿಚಾರವಿದು. ರಾಷ್ಟ್ರೀಯತೆಯ ಸಿದ್ಧಾಂತವು ಮಾರ್ಕ್ಸ್ವಾದಿಗಳ ದೃಷ್ಟಿಯಲ್ಲಿ ಆರ್ಥಿಕ,ಸಾಮಾಜಿಕ ಸಂಕಲ್ಪದ್ದಾಗಿದ್ದರೆ, ಪ್ರಸ್ತುತ ಭಾರತದ ರಾಜಕಾರಣದಲ್ಲೀಗ ಅದಕ್ಕೆ ಧರ್ಮ ಮತ್ತು ಭಾಷೆಯ ಬಣ್ಣವನ್ನು ಹಚ್ಚಲಾಗ್ತಿದೆ.
ನಮ್ಮ ನಡುವಿನ ರಾಜಕಾರಣಿಗಳು ರಾಜಕಾರಣಿಗಳು ರೂಪದಲ್ಲಿರುವ ಕಂದಾಚಾರಿಗಳೇ ವಿನಃ ಪ್ರಜಾಪ್ರಭುತ್ವವಾದಿ ಗಳಲ್ಲೇ ಅಲ್ಲ. ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಎಲ್ಲ ರಂಗಗಳನ್ನೂ ವಿರೂಪಗೊಳಿಸಲಾಗಿದೆ.
ಮೌಲ್ಯಗಳನ್ನು ಮಣ್ಣುಪಾಲು ಮಾಡಲಾಗಿದೆ.ವೈಚಾರಿಕತೆಯನ್ನು ಧ್ವಂಸ ಮಾಡಲಾಗಿದೆ.ಶೈಕ್ಷಣಿಕ ರಂಗವನ್ನು ಅಧ್ವಾನ ಮಾಡಲಾಗಿದೆ.ಇಂಥ ಹಲವು ಕಾರಣಗಳಿಂದ ದೇಶವನ್ನು ಕಾಪಾಡುವ ತುರ್ತು ಅಗತ್ಯವಿದೆ.
ಹಿಂದಿ ಚಲನಚಿತ್ರ ನಿರ್ದೇಶಕಿ ಫರಾಖಾನ್ ಒಂದು ಸಂದರ್ಭದಲ್ಲಿ ‘‘ನನಗೆ ಮೋದಿ ಅಂದರೆ ಇಷ್ಟ,ಆದರೆ ಅವರ ರಾಜಕೀಯ ನಡವಳಿಕೆ ಇಷ್ಟವಿಲ್ಲ.ನನಗೆ ಬಿಜೆಪಿ ಅಂದರೆ ಇಷ್ಟ, ಆದರೆ, ರಾಷ್ಟ್ರಮಟ್ಟದ ರಾಜಕೀಯ ಆಲೋಚನಾ ವಿಧಾನ ನನಗೆ ಇಷ್ಟವಾಗುವುದಿಲ್ಲ.
ನನಗೆ ಹಿಂದೂ ಧರ್ಮ ಅಂದರೆ ಇಷ್ಟ.ಆದರೆ ಅದರಲ್ಲಿನ ಮತ ಅಸಹಿಷ್ಣುತೆ ನನಗೆ ಇಷ್ಟವಾಗುವುದಿಲ್ಲ. ನನಗೆ ಇಸ್ಲಾಂ ಧರ್ಮವೆಂದರೆ ಇಷ್ಟ. ಆದರೆ ಆ ಧರ್ಮದಲ್ಲಿನ ಹಿಂಸಾತ್ಮಕ ಪ್ರಚೋದನೆ ನನಗೆ ಇಷ್ಟವಾಗುವುದಿಲ್ಲ.
ಒಂದೇ ಮಾತಲ್ಲಿ ಹೇಳುವುದಾದರೆ ನನಗೆ ಯಾರೂ ಮೇಲೂ ದ್ವೇಷವಿಲ್ಲ.ಆದರೆ ಸಮಾನತೆ ಇಷ್ಟಪಡದವರನ್ನು ನಾನು ಇಷ್ಟಪಡುವುದಿಲ್ಲ. ಸಮಾನತೆಯನ್ನು ಆಶಿಸುವ ದೇಶ ನನ್ನ ನಿರೀಕ್ಷೆ”. ಹೀಗೆ ಹೇಳಿದ ನಿರ್ದೇಶಕಿಯ ಮಾತುಗಳನ್ನೇ ಬರೆಯುತ್ತಾ ಈ ಮಾತುಗಳಿಗೆ ಎಷ್ಟೊಂದು ಅರ್ಥಗಳಿವೆ ಎಂದು ಲೇಖಕರು ಓದುಗನ ಮುಂದೆ ಇಡುತ್ತಾರೆ.
ಬೌದ್ಧಿಕ ಹುಡುಕಾಟದಂತೆ ತೋರುವ ಇಲ್ಲಿನ ಬರೆಹಗಳಿಗೆ ಒಂದಷ್ಟು ರೂಪಕ ಕಾವ್ಯದ ಸ್ಪರ್ಶ ಸಿಕ್ಕಿದ್ದಿದ್ದರೆ ಪುಸ್ತಕದ ಶಕ್ತಿ, ಪ್ರಭಾವ ಅಪಾರವಾಗುತ್ತಿತ್ತು.ವೈಚಾರಿಕ ಚಿಂತನೆ ಮತ್ತು ಬರೆಹಗಳನ್ನು ಪ್ರಕಟಿಸುವುದರಲ್ಲಿ ಕರ್ನಾಟಕದ ‘ವೈಚಾರಿಕ ಮದ್ದಿನುಗ್ರಾಣ’ವೇ (ಇದು ಕುಂ.ವೀ.ಯವರೇ ಕರೆದ ಪದ) ಆಗಿರುವ ಲಡಾಯಿ ಪ್ರಕಾಶನದ ಈ ಪುಸ್ತಿಕೆಯಲ್ಲಿ ಅಪರೂಪಕ್ಕೆಂಬಂತೆ ಕಾಗುಣಿತ ದೋಷಗಳು ನುಸುಳಿಬಿಟ್ಟಿವೆ.
ಜಾತ್ಯತೀತ,ವಿಚಾರವಾದಿಗಳ , ಬುದ್ದಿಜೀವಿಗಳ ಮೌನ ಈ ಕಾಲದಲ್ಲಿ ಎಷ್ಟೊಂದು ಅಪಾಯಕಾರಿ ಎಂಬುದನ್ನು ಅರಿತು,ಮೇರಾ ಭಾರತ್ ಮಹಾನ್ ಎಂಬ ಭವ್ಯ ಭಾರತದ ಅಪಸವ್ಯಗಳನ್ನು ಜನರು ಮುಂದಿಡುವ ಪ್ರಯತ್ನ ಮಾಡುತ್ತಾ, ತನ್ನ ಬೌದ್ಧಿಕ ಪ್ರತಿರೋದವನ್ನು ದಾಖಲಿಸುತ್ತಿರುವ ಸೃಜನಶೀಲ ಕಥೆಗಾರ, ಕಾದಂಬರಿಕಾರ,ಲೇಖಕ ಕುಂ.ವೀ.ಯವರು ಈ ವೈಚಾರಿಕ ಕೃತಿಯನ್ನು ಕನ್ನಡಕ್ಕೆ ಸೃಜನಾನುವಾದಿಸಿ ಬರಹಗಾರನಾಗಿ ತನ್ನ ನೈಜ ಕರ್ತವ್ಯವನ್ನು ಮೆರೆದಿದ್ದಾರೆ.ವಿಷಯ ಮತ್ತು ಸಾಮಾಜಿಕ ಬದ್ಧತೆಯ ಕಾರಣದಿಂದ “ಗೌರವಾನ್ವಿತ ಮೂರ್ಖರು”ಗಮನ ಸೆಳೆಯುತ್ತದೆ.
ಬಿ.ಶ್ರೀನಿವಾಸ
