Kannada News | Dinamaana.com | 22-05-2024
ಗುಡಿಸಲುಳಿಂದ ಹೊಗೆಯೇಳುವುದಕ್ಕೂ ಮುನ್ನವೇ , ನಿದ್ದೆಯಿಂದ ಇನ್ನೂ ಎದ್ದಿರದ ಮೂಡಣದ ಸೂರ್ಯನಿಗೊಂದು ನಮಸ್ಕರಿಸಿ ಸಂದಿಗೊಂದಿಗಳನ್ನು ದಾಟಿಕೊಂಡು ಬಂದರೆ ದಟ್ಟ ಹಸಿರಿನ ಕಾಡು !. ಕೈ ಬೀಸಿ ಕರೆಯುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ದಟ್ಟ ಕಾಡಿನ ಆ ಬೆಟ್ಟಗಳಲ್ಲಿ ಆಕೆ ಮಾಯವಾಗಿಬಿಡುತ್ತಿದ್ದಳು.
ಉರುವಲಿನ ಕಟ್ಟಿಗೆಗಳನ್ನು ಆರಿಸಿ ಹೊರೆ ಕಟ್ಟಿ ಮಾರುವ ಯಾಡಿ ಎಂದರೆ ನಮಗೆಲ್ಲ ಬಹಳ ಇಷ್ಟ. ಆಕೆ ಹೊತ್ತ ಹೊರೆಯ ಜೊತೆಗೆ ಕವಳಿಹಣ್ಣು,ಕಾರೆ ಹಣ್ಣು,ಕೇರಣ್ಣು,ಬಾರೆಣ್ಣು,ಬಿಕ್ಕೆ ಹಣ್ಣುಗಳಿರುತ್ತಿದ್ದುದೇ ಆಕೆಯ ಮೇಲಿನ ಪ್ರೀತಿಗೆ ಕಾರಣವಾಗಿತ್ತು.
ಬೊಗಸೆ ತುಂಬಾ ಕವಳಿ,ಬಿಕ್ಕಿ,ಕಾರೆ,ಬಾರೆ ಕೊಡುತ್ತಿದ್ದಳು.
ಶಂಕ್ರಪ್ಪನ ಹೋಟ್ಲಿಗೆ ಒಂದ್ ಹೊರೆ ಕಟ್ಟಿಗೆ ಹಾಕಿ,ಇನ್ನೊಂದನ್ನು ಸಾಲಿಗುಡಿಯ ಬಳಿ ಇರಿಸಿ,ಸಾಲಿಗುಡಿ ಮುಂದೆ ಊಟದ ಬೆಲ್ಲು ಹೊಡೆಯೋ ಟೈಮಿಗೆ ಸರಿಯಾಗಿ ಕುಂತು, ಐದ್ ಪೈಸೆ,ಹತ್ತಪೈಸೆಗೆ ಬೊಗಸೆ ತುಂಬಾ ಕವಳಿ,ಬಿಕ್ಕಿ,ಕಾರೆ,ಬಾರೆ,ಹಣ್ಣು ಕೊಡುತ್ತಿದ್ದಳು.
ಯಾರೂ ಸುಳ್ಳು ಹೇಳಿ ಹಣ್ಣು ಇಸ್ಕಂಡು ತಿನ್ನಲಿಲ್ಲ
ದಿನಾಲು ರೊಕ್ಕ ಕೊಡದೆ ಗದರಿಸಿ ಕಳುಹಿಸುವ ಅಪ್ಪ,ಅವ್ವನನು ನೆನೆಯುತ್ತ ಓರೆಗಣ್ಣಿನಲ್ಲಿ ಯಾಡಿಯ ಉಡಿಯೊಳಗಿನ ಹಣ್ಣುಗಳೆಡೆಗೆ ಆಸೆಯಿಂದ ನೋಡುತ್ತ ನಿಂತ ಹುಡುಗರ ಕರೆದು,”ಏಯ್..ತಮ್ಮಾ ಬಾರೋ ಇಲ್ಲಿ,…ಇಕಾ..ತಗಾ..ತಿನ್ನು”ಎಂದು ರೊಕ್ಕ ಕೊಡದೆಯೇ ಹಣ್ಣು ನೀಡುತ್ತಿದ್ದಳು. ಹಾಗಂತ ಯಾಕೋ ಏನೋ ಆ ಯಾಡಿಯ ಹತ್ತಿರ ಯಾರೂ ಸುಳ್ಳು ಹೇಳಿ ಹಣ್ಣು ಇಸ್ಕಂಡು ತಿನ್ನುತಿರಲಿಲ್ಲ.
ಉಚ್ಚಿಬೆಲ್ಲು ಮುಗಿದು ಷಡಾಕ್ಷರಯ್ಯ ಮೇಷ್ಟ್ರು ಕೈಯಲ್ಲಿ ಬುಕ್ಕ ಹಿಡಿದು ಹೊರಟರೆಂದರೆ ಪಾಠ ಸುರುಮಾಡೋ ಸಮಯವೆಂದು ನಾವೆಲ್ಲ ದಡಬಡಾಯಿಸಿ ಕ್ಲಾಸ್ ರೂಮಿಗೆ ಹೋಗಿ ಕುಂತು,ಯಾಡಿಯ ಬಣ್ಣ ಬಣ್ಣದ ಲಂಗ,ಅದಕ್ಕೆ ಹಾಕಿದ ವೃತ್ತಾಕಾರದ ಗಾಜಿನ ಚೂರಿನ ಬಿಲ್ಲೆಗಳು,ಕಿವಿಗೆ ಮತ್ತು ಕೂದಲಿಗೆ ಇಳಿಬಿದ್ದ ಚೈನು..ಹತ್ ಪೈಸೆ,ಇಪ್ಪತ್ ಪೈಸೆ,ನಾಲ್ಕಾಣೆ,ಎಂಟಾಣೆ ನಾಣ್ಯಗಳಿಗೆ ತೂತು ಹಾಕಿ ದಮ್ಮಡಿ ಮಾಡಿ,ಹೊಲಿದು ಬೆನ್ನು ಕಾಣುವ ಚೋಲಿ ಧರಿಸಿದ ಅವಳ ಕಾಯ ಕಣ್ಮುಂದೆ ಬರುತ್ತಿತ್ತು.
ದಪ್ಪ ದಪ್ಪನೆಯ ಆಕೆಯ ಕೈಗಳಲ್ಲಿನ ದಂತದ ಬಳೆಗಳು,ಹಣೆ-ಗಲ್ಲಗಳ ಗದ್ದದ ಮೇಲಿನ ಹಚ್ಚೆಯ ಗುರುತು,ಕೈದೋಳಿನ ಮೇಲೆ ಯಾರದೋ ನೆನಪಿಗೆ ಹಾಕಿಸಿದ ಹಚ್ಚೆಯ ಹೆಸರು,ಮೂಗಿಗೆ ರಿಂಗಿನಾಕಾರದ ನತ್ತು…..ಇವೇ ಕಣ್ಣ ಮುಂದೆ ಬರುತ್ತಿದ್ದವು.
ಓಣಿಗುಂಟ “ಕಟ್ಟಿಗೆಮ್ಮೋ”ಎಂದು ಕೂಗುತ್ತ ..
ಇಂತಹ ಬಣ್ಣಬಣ್ಣದ ವೇಷ ತೊಟ್ಟ ಯಾಡಿ,ಸಾಲಿಯ ಉಚ್ಚಿಬೆಲ್ಲು ಮುಗಿಸಿ…ಚಿಲ್ಲರೆಕಾಸನ್ನು ಬಣ್ಣ ಬಣ್ಣದ ಬಟ್ಟೆಯ ಚೀಲದಲ್ಲಿರಿಸಿಕೊಂಡು ಕಟ್ಟಿಗೆ ಹೊರೆ ಹೊತ್ತು ಓಣಿಗುಂಟ “ಕಟ್ಟಿಗೆಮ್ಮೋ” ಎಂದು ಕೂಗುತ್ತ ಹೊರಡೋದು ದಿನನಿತ್ಯದ ಕೆಲಸವಾಗಿತ್ತು.ಆಗಲೂ ಕೂಡ ಆಕೆ ಹುಡುಗರಿಗೆ ಕೊಟ್ಟು ಉಳಿದ ಹಣ್ಣುಗಳನ್ನು ಕಟ್ಟಿಗೆ ಹಾಕಿಸಿಕೊಂಡು ಮನೆಯ ಹುಡುಗರಿಗೆಂದೋ ಇಲ್ಲವಾದರೆ ದಾರಿಯಲ್ಲಿ”ಬೇ ಯಾಡೀ…ಹಣ್ ಅದಾವ?” “ಕಾರಿಹಣ್ ತಂದೀಯಾ?” ಎಂದು ಕೇಳಿದವರಿಗೆಲ್ಲ ಅರಪಾವು ಜ್ವಾಳಕ್ಕೋ ರಾಗಿಗೋ.. ಸಜ್ಜೆಗೋ.. ಕೊಟ್ಟು, ಕಾಳುಗಳನ್ನು ಉಡಿಯ ಸೊಂಟಕ್ಕೆ ಸುತ್ತಿಕೊಂಡು ನಡೆಯುತ್ತಿದ್ದಳು.
Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-29 ಉಗುಳಮ್ಮನ ಜಾತ್ರೆಯಲ್ಲಿ ನೀವೂ ಬಂದು…
ನಮ್ದು ಮನಿ ನಡೀಬೇಕಲ್ಲ
“ನಮ್ದು ಮನಿ ನಡೀಬೇಕಲ್ಲ, ನಿಮ್ಮ ಅಣ್ಣ…ಕುಡ್ದು ಬರ್ತಾನಲ್ಲ,ಬಂದು ಬಡೀತಾನ,ನೀವು ತಂಗೇರು ಬುದ್ದಿ ಹೇಳ್ಬೇಕೂ..” ಎಂದು ನಗುನಗುತ್ತಲೇ ಕಹಿಯನ್ನು ಹೊರಚೆಲ್ಲಿ ಊರ ತಾಂಡಾದ ಕಡೆಗೆ ನಡೆಯುತ್ತಿದ್ದಳು. ಬಿಕ್ಕಿ ಹಣ್ಣು ಮಾರುತ್ತಿದ್ದ ಆಕೆಯೀಗ ಮುದುಕಿಯಾಗಿದ್ದಾಳೆ.
ಹುಲಿ ಓಡಿಸಿದ್ದು…
ಆಕೆ ಹೇಳುತ್ತಿದ್ದ ನವಿಲುಸ್ವಾಮಿ ಬೆಟ್ಟದ ಮೇಲೆ ನವಿಲುಗಳು ನೃತ್ಯ ಮಾಡುತ್ತಿದ್ದುದು,ಕಟ್ಟಿಗೆ ಆರಿಸೋ ಸಮಯದಲ್ಲಿ ಬಂಡೆ ಮೇಲೆ ಮಿರಿಮಿರಿ ಮಿಂಚುವ ಮೈಯ್ಯನ್ನು ಬಿಸಿಲು ಕಾಸುತ್ತ ಕುಳಿತ ಹುಲಿರಾಯನನ್ನು ನೋಡಿದ್ದು…ಹೆದರದೆ ಕೈಲಿದ್ದ ಕುಡುಗೋಲನ್ನು ವಿರುದ್ಧ ದಿಕ್ಕಿಗೆ ಎಸೆದು ಸದ್ದು ಮಾಡಿ , ಹುಲಿಯನ್ನು ಅತ್ತ ಓಡಿಸಿ ಬಚಾವಾಗಿ ಬಂದುದನ್ನು ಹೇಳುವಾಗ ನಮ್ಮ ಮೈ ರೋಮಾಂಚನಗೊಳ್ಳುತ್ತಿತ್ತು.
ಆದರೆ ಕುಳ್ಳಗಿನ ಕಪ್ಪನೆಯ ಗಂಡನೆಂಬ ವ್ಯಕ್ತಿ,ಕುಡಿದು ಬಂದು ದನಕ್ಕೆ ಬಡದಂಗೆ ಬಡಿವಾಗಲೂ ಯಾಕೆ ಓಡಿಸಲಾಗಲಿಲ್ಲ?ಎಂದು ಕೇಳಿದ್ದಕ್ಕೆ,ಕಣ್ಣಂಚಿನ ತುಂಬ ನೀರಿಟ್ಟುಕೊಂಡೂ ಮನಸಾರೆ ನಕ್ಕ ಆ ನೋಟವನ್ನು ಮರೆಯಲಾದೀತೆ? ನನ ಕಂದನ ನಾ ಬಿಡೆನೆಂದು ಗಟ್ಟಿಯಾಗಿ ಅಪ್ಪಿನಿಂತ ಕಾಯಿಯಂತೆ, ದೊಡ್ಡ ದೊಡ್ಡ ಗುಂಡುಗಳ ಸುತ್ತ ಅಪ್ಪಿನಿಂತ ಕಾರೆಹಣ್ಣು,ಕವಳಿಹಣ್ಣಿನ ಪೊದೆಗಳನ್ನು ಯಾರೋ ಕಿತ್ತೆಸೆದಿದ್ದಾರೆ.ಕಲ್ಲು ಗುಂಡು ಮಣ್ಣನ್ನೂ ಗೆಬರಿಕೊಂಡು ಹೋಗಿದ್ದಾರೆ. ಸದಾ ಹಚ್ಚಹಸೂರಿನ ಬೆಟ್ಟಗಳೆಲ್ಲ ಯಾವುದೋ ರೋಗಕ್ಕೆ ತುತ್ತಾದವರಂತೆ ತೊನ್ನು ಹತ್ತಿದ ಚರ್ಮದವರಂತೆ ಕಾಣುತ್ತಿವೆ. ಸಾಲಿಗುಡಿಯ ಮುಂದೆ ಬಿಲ್ಡಿಂಗುಗಳು ಎದ್ದುನಿಂತಿವೆ.
ಗೌರ್ಮೆಂಟು ಸಾಲಿಯ ಮಕ್ಕಳು ಟೈ ಬೆಲ್ಟು ಬೂಟುಗಳ ಕಾನ್ವೆಂಟಿನ ಹುಡುಗರನ್ನು ಬೆಕ್ಕಸ ಬೆರಗಾಗಿ ನೋಡುತ್ತಾ ನಿಂತಿದ್ದಾರೆ.ಸಾಲಿಗುಡಿಯ ಮುಂದೆ ಬಿಕ್ಕಿ ಹಣ್ಣಿನ ಮುದುಕಿ ಈಗ ಇಲ್ಲ. ಆಕೆಯ ಮಕ್ಕಳೀಗ ಎಲ್ಲರಂತೆ ಗಣಿ ಧಣಿಗಳ ಧೂಳಿನ ರೊಕ್ಕದಲ್ಲಿ ಅವರೂ ಬಿಲ್ಡಿಂಗು ,ಕಾರು,ಹೀರೋಹೊಂಡಾಗಳೆಂದು ತಿರುಗುತ್ತಿರಬಹುದೆಂದುಕೊಂಡಿದ್ದೆ.
ಆದರೆ…. ಆಕೆ ಮೊನ್ನೆ ದಿನ ಬಸ್ ಸ್ಟ್ಯಾಂಡಿನಲ್ಲಿ ಸಿಕ್ಕಳು!
ಐದು ಪೈಸೆ,ಹತ್ತುಪೈಸೆ,ನಾಕಾಣೆ,ಎಂಟಾಣೆಯ ವೃತ್ತ,ಪಂಚಭುಜಾಕೃತಿಗಳ ನಾಣ್ಯಗಳ ವೇಷದ ಯಾಡೀ…ಕೈ ತುಂಬಾ ಕವಳಿ,ಕಾರೆ,ಬಾರೆ ಮತ್ತು ಬಿಕ್ಕಿಹಣ್ಣು ಕೊಡುತ್ತಿದ್ದ ಅವಳ ಕೈ ನೋಡಿದೆ.
ಮುದುಕಿ ಅಕ್ಷರಶಃ ಭಿಕ್ಷುಕಿ
ಆಕೆ ಹಣ್ಣು ಹಣ್ಣು ಮುದುಕಿಯಾಗಿದ್ದಳು. ಆಕೆಯ ಬಣ್ಣಬಣ್ಣದ ಚೋಲಿ ಲಂಗ ಮಾಸಿಹೋಗಿದ್ದವು.ಅದರಲ್ಲಿದ್ದ ಗಾಜಿನ ಚೂರುಗಳೆಲ್ಲ ಉದುರಿ ಹೋದ ಗುರುತುಗಳಿದ್ದವು. ಬಿಕ್ಕಿ ಹಣ್ಣಿನ ಆ ಮುದುಕಿ ಅಕ್ಷರಶಃ ಭಿಕ್ಷುಕಿಯಾಗಿದ್ದಳು.
ಬಿ.ಶ್ರೀನಿವಾಸ