ದಾವಣಗೆರೆ : ಶರಣರ ದೃಷ್ಟಿಯಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳು ಎಷ್ಟು ಮುಖ್ಯವೋ ಅಷ್ಟೇ ದಿನನಿತ್ಯದ ನಿರ್ವಹಣೆಗಾಗಿ ಕಾಯಕವು ಅಷ್ಟೇ ಮುಖ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ಹೇಳಿದರು
ನಗರದ ಸಿದ್ದವೀರಪ್ಪ ಬಡಾವಣೆ ಸ್ವಾಮಿ ವಿವೇಕಾನಂದ ಬಡಾವಣೆ ಆಂಜನೇಯ ಬಡಾವಣೆ ಎಂ.ಸಿ.ಸಿ ಬಿ ಬ್ಲಾಕ್ ನಾಗರಿಕರು ಹಮ್ಮಿಕೊಂಡ ಬಸವ ಜಯಂತಿ ಹಾಗೂ ಸಿದ್ದಗಂಗಾ ಸ್ವಾಮಿಗಳ , ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡು ಆಶೀರ್ವಚನ ನೀಡಿದರು.
ಬಸವಣ್ಣನವರು ಜಗತ್ತಿಗೆ ಆದರ್ಶವಾದ ಕಾಯಕತತ್ವವನ್ನು ನೀಡಿದ್ದಾರೆ ಪ್ರತಿಯೊಬ್ಬ ವ್ಯಕ್ತಿಯೂ ಕಾಯಕವನ್ನು ಮಾಡಬೇಕು ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ ಸತ್ಯಶುದ್ದವಾದ ದುಡಿಮೆಯ ಶ್ರಮ ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು . ದುಡಿಯುವವರೇ ಬೇರೆ , ಅವರ ದುಡಿತದ ಫಲವನ್ನು ಅನುಭಿಸಯವವರೇ ಬೇರೆಯಾಗಿದ್ದ ಕಾಲದಲ್ಲಿ ತನು ಮನ ಬಳಲಿಸಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ವ್ಯಾಖ್ಯಾನಿಸಿ ದುಡಿದು ಉಣ್ಣುವುದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾಯಕ ಕಡ್ಡಾಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಪ್ರತಿಯೊಬ್ಬರು ದುಡಿಯಲೇಬೇಕೆಂಬುದು ಶರಣರ ನೇಮ ವ್ರತ . ಕಾಯಕಗಳಲ್ಲಿ ಮೇಲು ಕೀಳು ಎಂಬ ಭೇಧಬಾವವಿಲ್ಲ ಎಂದರು.
ಕಾಯಕದಿಂದ ಬಂದ ಪ್ರತಿಫಲವನ್ನು ದಾಸೋಹ ಮಾಡಬೇಕು. ದಾಸೋಹ ನಡೆಯುವ ಸಮಯದಲ್ಲಿ ಎಲ್ಲರೂ ಸಮಾನವಾಗಿ ಕುಳಿತು ಸಹಭೋಜನ ಮಾಡಿದ್ದರಿಂದ ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು ಬಸವಣ್ಣ ಈ ಆಧುನಿಕ ಯುಗಕ್ಕೆ ಬೇಕಾದ ಶಸ್ತ್ರಚಿಕಿತ್ಸಕ ವೈದ್ಯ. ಇಂದಿನ ಸಮಾಜದಲ್ಲಿರುವ ಭಯೋತ್ಪಾದನೆ , ಜಾತೀಯತೆ ,ಅಸ್ಪೃಶ್ಯತೆ , ಭ್ರಷ್ಟಾಚಾರ , ಹಿಂಸಾಚಾರ , ದಬ್ಬಾಳಿಕೆ ಎಂಬ ಸಮಾಜದ ರೋಗವನ್ನು ಹೊಡೆದೊಡಿಸಲು ಬಸವತತ್ವ ಎಂಬ ಔಷಧಿಯನ್ನು ನೀಡಬೇಕು ಎಂದು ಹೇಳಿದರು.
ವಿಶ್ರಾಂತ ಜಂಟಿ ನಿರ್ದೇಶಕ ಲಿಂಗರಾಜ್ ಎಚ್.ಕೆ ಮಾತನಾಡಿ, ಸಮ ಸಮಾಜವನ್ನು ಬಸವಣ್ಣನವರು ೧೨ ನೇ ಶತಮಾನದಲ್ಲಿ ಕಟ್ಟಿದರು ವ್ಯಕ್ತಿ ಮತ್ತು ಸಮಾಜದ ಉದ್ಧಾರಕ್ಕಾಗಿ ಕಾಯಕ ಮತ್ತು ದಾಸೋಹ ತತ್ವಗಳನ್ನು ನೀಡಿದರು ಎಂದರು .
ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಪರವಾಗಿ ಅವರ ತಾಯಿ ಶರಣಮ್ಮನವರಿಗೆ ಸನ್ಮಾನಿಸಲಾಯಿತು. ಯೋಗಗರು ಜ್ಞಾನಚಂದ್ರರವರಿಗೆ ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಕೆ.ಬಿ ಪರಮೇಶ್ವರಪ್ಪ ,ಭಕ್ತಮಂಡಳಿಯವರಾದ ವಿಶ್ವನಾಥ , ಕಾರ್ಯದರ್ಶಿ ರವಿಶಂಕರ್ , ಕರಿಬಸಪ್ಪ , ಡಾ. ಲಿಂಗರಾಜ್ , ಕೆ. ಶಶಿಧರ್ , ಶಶಿಧರ್ ಬಸಾಪುರ , ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ಕಾರ್ಯಕ್ರಮನ್ನು ನೀಡಿದರು.