Kannada News | Sanduru Stories | Dinamaana.com | 28-05-2024
“ಅವ್ವಾ…ಅವ್ವಾ…”ಮತ್ತೆ ಮತ್ತೆ ಕೂಗುತ್ತಿದ್ದಾನೆ ಪೋರ. ಸದಾ ಕೆಮ್ಮುತ್ತಿದ್ದ ಅವಳೀಗ ಕೆಮ್ಮುತ್ತಿಲ್ಲ. ಗಾಬರಿಗೊಂಡ ಹುಡುಗ ಅಪ್ಪನ ಹುಡುಕುತ್ತ ಓಡತೊಡಗಿದ. ಅಳುತ್ತ ಓಡುವ ಹುಡುಗನ ನೋಡಿ ತಮ್ಮ ಮೈಗೆ ಅಂಟಿದ ಕೆಂಪುಧೂಳನ್ನು ಕೊಡವಿಕೊಳ್ಳುವುದರಲ್ಲಿ ಜನ ಮಗ್ನರಾಗಿದ್ದಾರೆ.
ಅಲ್ಲೊಂದು ಗಣಿಧಣಿಗಳ ಸ್ವರ್ಗವಿದೆ (Sanduru Stories)
ಅಲ್ಲೊಂದು ಗಣಿಧಣಿಗಳ ಸ್ವರ್ಗವಿದೆ. ದೊಡ್ಡ ದೊಡ್ಡ ಗುಡ್ಡಗಳನ್ನು ಅನಾಮತ್ತು ಎತ್ತಿ ಹಾಕುವ ರಕ್ಕಸ ಜೆಸಿಬಿ ಯಂತ್ರಗಳೇ ತುಂಬಿರುವ ಲೋಕವದು. ಹ್ಞಾ…ಅಲ್ಲಿ ಅಪ್ಪ ನಿಂತಿದ್ದಾನೆ “ಅಪಾ..ಅಪ್ಪಾ ಅವ್ವ ಮಾತಾಡುವಲ್ಳು”ಕೂಗಿದ. ಗಣಿಧಣಿಗಳ ಮುಂದೆ ಅಪ್ಪ ಮೊಣಕಾಲೂರಿ ಏನನ್ನೋ ಬೇಡುತ್ತಿದ್ದಾನೆ. ಆ ಹುಡುಗ ಈ ಬಾರಿ ಜೋರಾಗಿ ಕೂಗುತ್ತಿದ್ದಾನೆ. “ಅಪ್ಪಾ….ನಿನ್ನ ಹಿಂದೆ ಆ ರಕ್ಕಸ ಯಂತ್ರ ಐತೆ ಇತ್ಲಾಕಡೀಗ್ ಬಾ….” ಮಗನ ನೋಡಿದನಷ್ಟೆ. ಆತನಿಗೇನೂ ಕೇಳಿಸುತ್ತಿಲ್ಲ.
“ಕೊಡ್ತಾರೆ ತಡಕಾ ಮಗಾ… (Sanduru Stories)
“ಕೊಡ್ತಾರೆ ತಡಕಾ ಮಗಾ…ಧಣಿಗಳು ಅಂಗೇನಿಲ್ಲ”ದೂರದಿಂದಲೇ ಕೂಗಿ ಹೇಳುತ್ತಿದ್ದಾನೆ. “ಅಪ್ಪಾ…ಅಪ್ಪಾ..ಸರಕೋ..ನಿನ್ ಹಿಂದೆ ಜೆ ಸಿ ಬಿ…”ಎನ್ನುತ್ತಲೇ ಕುಸಿದು ಕುಳಿತ. ರಕ್ಕಸಯಂತ್ರ ಕಲ್ಲು ಮಣ್ಣಿನೊಂದಿಗೆ ಅದನ್ನೂ ಎತ್ತಿ ಟಿಪ್ಪರಿಗೆ ಹಾಕುತ್ತಿದೆ. “ಅಪ್ಪಾ…ಅವ್ವಾ…”ಎಂದು ಬಡಬಡಿಸುವ ಆ ಪೋರನ ಮಾತು ಈಗ ಯಾರಿಗೂ ಕೇಳಿಸುತ್ತಿಲ್
ಆಕೆ ತಲೆಯೆತ್ತಿ ನಡೆದಿದ್ದಾಳೆ (Sanduru Stories)
ನಮ್ಮೂರು ನಿಮಗೆ ಗೊತ್ತಲ್ಲ. ಅದೇ ಬೆಟ್ಟ ಗುಡ್ಡ ಕಾಡು ಮೇಡು,ಹೊಲ ಗದ್ದೆ,ಮಣ್ಣು ಧೂಳು…..ಎಲ್ಲವೂ ಲಾರಿ ಟಿಪ್ಪರುಗಳಲ್ಲಿ ಮಾರಿಕೊಂಡ ಸುದ್ದಿಯಾಯ್ತಲ್ಲ ಅದೇ ಊರು. ನಮ್ಮೂರಿನಲ್ಲೀಗ ಪ್ರಭುಗಳಿಲ್ಲ ಆದರೆ ಅವರ ಕಟೌಟುಗಳಿವೆ. ಊರಿಗೆ ಊರೇ ಕೆಮ್ಮುತಿಹುದು. ಕೋಳ ತೊಟ್ಟು ಹೋದ ಪ್ರಭುಗಳು ಮೊನ್ನೆ ದಿನ ಕೋರ್ಟಿಗೆ ಬಂದಿದ್ದರು. ಊರ ಹಸಿರು ಗುಡ್ಡ ಬೆಟ್ಟ,ಕಾಡು ಮೇಡು, ಮಣ್ಣು ಮಾರಿಕೊಂಡು ಕೋಳ ತೊಟ್ಟು ನಿಂತವರ ಮುಂದೆ ದೇಹ ಮಾರಿ ಬದುಕು ನೂಕುವ ಆಕೆ ತಲೆಯೆತ್ತಿ ನಡೆದಿದ್ದಾಳೆ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
ಸ್ಮೃತಿಗೆ ಸರಿದವರು (Sanduru Stories)
ಈ ಹಿಂದೆಯೂ ಅವರು ತಮ್ಮ ಹಳ್ಳಿಯ ದುಸ್ಥಿತಿಯ ಕುರಿತು ಆರಿಸಿ ಕಳಿಸಿದ ಎಮ್ಮೆಲ್ಲೆ ಮುಂದೆ ಅಲವತ್ತುಕೊಂಡಿದ್ದರು. “ನಿಮ್ಮೂರು ಒಂದೇ ಏನ್ ನನಿಗೆ ?” ಗದರಿಸಿದ್ದನಾತ. ಆಗ ಹಚ್ಚ ಹಸಿರು,ಕಾಡು ಬೆಟ್ಟ ಗುಡ್ಡಗಳು ಹಾಗೇ ಇದ್ದವು. ಮೊನ್ನೆ ರೊಕ್ಕದ ಎಲೆಕ್ಷನ್ನಾಯಿತಲ್ಲ, ಹಳಬ ಸೋತು ಹೋದ. ಈಗ ಗಣಿ ಧಣಿ ಎಮ್ಮೆಲ್ಲೆ. ಊರ ಸಮಸ್ಯೆ ಬೆಂಗಳೂರಿಗೆ ಹೋಗಿ ಹೇಳಿಯೇ ಸೈ ಎಂದು ತಂಡವೊಂದು ಹೊರಟಿತು. ಹೋಗ್ಹೋಗುತ್ತಲೆ ಹುಡುಗರು ಬಂದು ಬಂಗಲೆಗೆ ಕರೆದುಕೊಂಡು ಹೋದರು. ಹೊಟ್ಟೆ ತುಂಬ ರುಚಿ ರುಚಿಯಾದ ಊಟ ತಿಂಡಿ ಕೊಡಿಸಿದರು.
ಕಣ್ಣ ತುಂಬ ಗಣಿಧಣಿ ಕಟೌಟು (Sanduru Stories)
ಊರ ಜನರ ಬವಣೆ…ಬರ..ಹೇಳಿಕೊಳ್ಳೋದಿಕ್ಕೆ ಆಗಲಿಲ್ಲ. ಮುಂಜಾನಿಯಿಂದ ಬೆಂಗಳೂರನೆಲ್ಲ ತೋರಿಸಿದರು. ಆಗ ಕೂಡ ಊರು ನೆನಪಾಗಲಿಲ್ಲ. ರಾತ್ರಿ ಐನೂರರ ಗಾಂಧಿ ಕೈಗೆ ಬಂದಾಗಲಂತೂ ಊರ ನೆನಪು ಮಕ್ಕಳ ನೆನಪು ಮಾಸಿ, ಕಣ್ಣ ತುಂಬ ಗಣಿಧಣಿ ಕಟೌಟು ತುಂಬಿತು.
ಅವರು ಊರಿಗೆ ಮರಳಿದರು. ರಾತ್ರಿಯಿದ್ದ ಬೆಟ್ಟಗಳು ಮುಂಜಾನೆ ಖಾಲಿಯಾಗಿದ್ದವು. ಕುರಿ , ಮ್ಯಾಕೆಮರಿ ಜಿಗದಾಡಿ ಹಿಕ್ಕೆಹಾಕಿದ ಜಾಗಗಳು, ಸಾಲಿಗುಡಿಯ ಅಕ್ಷರಗಳು ಅದಿರು ಹೊತ್ತು ಟಿಪ್ಪರುಗಳಲ್ಲಿ ದೇಶ ವಿದೇಶಗಳಿಗೆ ಸಾಗುತ್ತಲೇ ಇವೆ.
ರೊಕ್ಕದ ಎಮ್ಮೆಲ್ಲೆ….ಐಷಾರಾಮಿ ಬಂಗಲೆ, ಬಸ್ಸು,ಊಟ ……ಗುಣಗಾನ ನಡೆಯುತ್ತಲೇ ಇದೆ.
ಬಿ.ಶ್ರೀನಿವಾಸ