ದಾವಣಗೆರೆ: ಪಾಲಿಕೆ ವ್ಯಾಪ್ತಿಯ 41ನೇ ವಾರ್ಡ್ನ ಸರ್ವೆ ನಂಬರ್ 62ರ ಸೈಟ್ ನಂಬರ್ 154ರ ಉದ್ಯಾನವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿರುವ ಪಾಲಿಕೆ ಅಧಿಕಾರಿಗಳ ಕ್ರಮವನ್ನು ಎಸ್.ಎ.ರವೀಂದ್ರನಾಥ್ ನಗರ ನಾಗರಿಕ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿತು
.
ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಚೌಡೇಶ್ವರಿ ದೇವಸ್ಥಾನದ ಟ್ರಸ್ಟಿ ಎಂ.ಆನಂದ್ ಮಾತನಾಡಿ, ಮಹಾನಗರ ಪಾಲಿಕೆಯ ಅವೈಜ್ಞಾನಿಕವಾದ ಯೋಜನೆಯಿಂದ ಎಸ್.ಎ.ರವೀಂದ್ರನಾಥ ನಗರದ ನಿವಾಸಿಗಳಿಗೆ ಹಾಗೂ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತೀವ್ರ ತೊಂದರೆ ಆಗಲಿದ್ದು, ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದರು.
ನಗರದ ಲೋಕಿಕೆರೆ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಎದುರಿಗೆ ಅತಿದೊಡ್ಡ ಪಾರ್ಕ್ ಇದಾಗಿದ್ದು, ಪಕ್ಕದಲ್ಲಿಯೇ ಕೈಗಾರಿಕಾ ಪ್ರದೇಶ ಇದೆ, ಚೌಡೇಶ್ವರಿ ದೇವಸ್ಥಾನ, ಭೂತಪ್ಪ ದೇವಸ್ಥಾನ ಇವೆ. ಸುತ್ತಮುತ್ತ ಜನವಸತಿ ಪ್ರದೇಶ ಇದೆ. ಅಲ್ಲದೆ ಈ ಜಾಗೆಯನ್ನು ಟೌನ್‌ಹಾಲ್ ಮತ್ತು ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಕಾಯ್ದಿರಿಸಲಾಗಿದೆ ಎಂದು ನಕಾಶೆಯಲ್ಲೇ ತಿಳಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ವಸತಿಗೃಹ ನಿರ್ಮಿಸಲು ಸಹ ಯೋಜನೆ ಸಿದ್ಧವಾಗಿತ್ತು, ಅದೂ ಕೂಡ ನೆನೆಗುದಿಗೆ ಬಿದ್ದಿದೆ.
ಇಂತಹ ಪ್ರಮುಖ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿರುವುದು ಸ್ಥಳೀಯ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಒಂದು ವೇಳೆ ಹಠಕ್ಕೆ ಬಿದ್ದು ಪಾಲಿಕೆ ಏನಾದರೂ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ, ಸುತ್ತಮುತ್ತಲಿನ ನಿವಾಸಿಗಳು ರೋಗ-ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇದೆ, ಘಟಕದಿಂದ ಹೊರಸೂಸುವ ದುರ್ವಾಸನೆ, ಕ್ರಿಮಿಕೀಟಗಳಿಂದಾಗಿ ಯಾವ ನಾಗರಿಕರು ಇಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಕ್ಷಣ ಪಾಲಿಕೆ ತನ್ನ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಈ ಸ್ಥಳದಲ್ಲಿ ಏನಾದರೂ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ, ತಕ್ಷಣ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆಂದು ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದ ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳಿಗೆ ನಾಗರಿಕರು ಎಚ್ಚರಿಕೆ ನೀಡಿದರು.
ಎಸ್.ಎ.ರವೀಂದ್ರನಾಥ ನಗರ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ಮಲ್ಲನಗೌಡ್ರು, ಅಧ್ಯಕ್ಷ ಎನ್.ಸಿದ್ಧರಾಮಪ್ಪ, ಪದಾಧಿಕಾರಿಗಳಾದ ಎಸ್.ಆರ್.ಸೋಮಶೇಖರಪ್ಪ, ಎನ್.ಎಸ್.ಮಹೇಶ್ವರಪ್ಪ, ಜಿ.ಕರಿಬಸಪ್ಪ, ಸಿ.ಕೆ.ಶಿವಪ್ಪ ಸೇರಿದಂತೆ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.