Kannada News | Dinamaana.com | 01-07-2024
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ದಿಲ್ಲಿಗೆ ಹೋಗಿದ್ದರು. ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಅಮಿತ್ ಷಾ ಅವರಿಗೆ ವಿವರ ನೀಡುವುದು ಅವರ ದಿಲ್ಲಿ ಭೇಟಿಯ ಉದ್ದೇಶ. ಆದರೆ, ತಮ್ಮನ್ನು ಭೇಟಿ ಮಾಡಲು ಬಂದ ವಿಜಯೇಂದ್ರ ಅವರನ್ನು ಅಮಿತ್ ಷಾ ತುಂಬ ಹೊತ್ತು ಕಾಯಿಸಿದ್ದಾರೆ.
ನಿರೀಕ್ಷಿಸಿದಷ್ಟು ಸೀಟು ಬಂದಿಲ್ಲ ಎಂಬುದು ಅಮಿತ್ ಷಾ ಸಿಟ್ಟು …
ಕಾರಣ ಕರ್ನಾಟಕದ ನೆಲೆಯಲ್ಲಿ ತಾವು ನಿರೀಕ್ಷಿಸಿದಷ್ಟು ಸೀಟು ಬಂದಿಲ್ಲ ಎಂಬುದು ಅಮಿತ್ ಷಾ ಅವರ ಸಿಟ್ಟು. ಈ ಸಿಟ್ಟಿಗಿರುವ ಮತ್ತೊಂದು ಕಾರಣವೆಂದರೆ ಕರ್ನಾಟಕದಲ್ಲಿ ಪಕ್ಷ ಗೆಲ್ಲಬಹುದಾಗಿದ್ದ ಚಿಕ್ಕೋಡಿ, ಬೀದರ್, ದಾವಣಗೆರೆ, ಚಾಮರಾಜನಗರದಂತಹ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಕ್ಯಾಂಪು ಫುಲ್ಲು ನಿರಾಸಕ್ತಿ ತೋರಿಸಿತು ಎಂಬ ಫೀಡ್ ಬ್ಯಾಕು.
ಅಂದ ಹಾಗೆ ರಾಯಚೂರು, ಚಿಕ್ಕೋಡಿ, ಬೀದರ್ ನಂತಹ ಕ್ಷೇತ್ರಗಳಲ್ಲಿ ತಾವು ಸೂಚಿಸಿದ ಹೆಸರುಗಳನ್ನು ಪರಿಗಣಿಸದೆ ತಮ್ಮಿಷ್ಟ ಬಂದವರಿಗೆ ವರಿಷ್ಟರು ಟಿಕೆಟ್ ಕೊಟ್ಟರು. ಪರಿಣಾಮವಾಗಿ ಅವರೆಲ್ಲ ಸೋತು ಹೋದರು ಅಂತ ಯಡಿಯೂರಪ್ಪ ಟೀಮು ಕನವರಿಸುತ್ತಿದೆಯಾದರೂ ಮೋದಿ-ಅಮಿತ್ ಷಾ ಅದನ್ನೊಪ್ಪುತ್ತಿಲ್ಲ. ಅವರ ಪ್ರಕಾರ ಕ್ಯಾಂಡಿಡೇಟುಗಳು ಯಾರೇ ಇರಲಿ, ಆದರೆ ಕರ್ನಾಟಕದಲ್ಲಿ ಚುನಾವಣೆಯ ಸಾರಥ್ಯವನ್ನು ವಹಿಸಿಕೊಂಡವರು ಸೋಲಿನ ಜವಾಬ್ದಾರಿ ಹೊರಲೇಬೇಕು.
ಯಡಿಯೂರಪ್ಪ ಟೀಮಿನ ವಿರುದ್ದವೇ ಕಂಪ್ಲೇಂಟು ರಿಜಿಸ್ಟರ್
ಹಾಗಂತ ಈ ಜೋಡಿ ತೀರ್ಮಾನಿಸಿದ ಕಾಲಕ್ಕೆ ಸರಿಯಾಗಿ ಚಿಕ್ಕೋಡಿಯಲ್ಲಿ ಸೋತ ಅಣ್ಣಾ ಸಾಹೇಬ್ ಜೊಲ್ಲೆ, ಬೀದರ್ ನಲ್ಲಿ ಸೋತ ಭಗವಂತ ಖೂಬಾ ಸೇರಿದಂತೆ ಸೋತ ಹಲವರು ದಿಲ್ಲಿಗೆ ಹೋಗಿ ಯಡಿಯೂರಪ್ಪ ಟೀಮಿನ ವಿರುದ್ದವೇ ಕಂಪ್ಲೇಂಟು ರಿಜಿಸ್ಟರ್ ಮಾಡಿ ಬಂದಿದ್ದಾರೆ. ಪರಿಣಾಮ ಎಲ್ಲವೂ ಸೇರಿ ಮೋದಿ-ಅಮಿತ್ ಷಾ ಜೋಡಿ ಕಿರಿಕಿರಿ ಮಾಡಿಕೊಂಡಿದೆ.
ಹೀಗಾಗಿಯೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ನಂತರ ತಮ್ಮನ್ನು ಭೇಟಿ ಮಾಡಲು ಬಂದ ವಿಜಯೇಂದ್ರ ಅವರನ್ನು ಅಮಿತ್ ಷಾ ತುಂಬ ಹೊತ್ತು ಕಾಯಿಸಿದ್ದಾರೆ. ಕುತೂಹಲದ ಸಂಗತಿ ಎಂದರೆ ವಿಜಯೇಂದ್ರ ಅವರನ್ನು ಅಮಿತ್ ಷಾ ಕಾಯಿಸಿದ ಬೆಳವಣಿಗೆ ಯಡಿಯೂರಪ್ಪ ವಿರೋಧಿ ಕ್ಯಾಂಪಿನ ಸಂಭ್ರಮಕ್ಕೆ ಕಾರಣವಾಗಿ, ಇನ್ನೇನು ವಿಜಯೇಂದ್ರ ಅವರ ಪೊಲಿಟಿಕಲ್ ಕೆರಿಯರ್ರೇ ಮಸುಕಾಗಲಿದೆ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ.
ಮಠಾಧೀಶರೇಕೆ ಧ್ವನಿ ಎತ್ತಿದರು?
ಅಂದ ಹಾಗೆ ಇಂತಹ ಬೆಳವಣಿಗೆಗಳೇನೇ ಇರಲಿ, ಆದರೆ ವಿಜಯೇಂದ್ರ ಕ್ಯಾಂಪು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾಕೆಂದರೆ ರಾಜಕಾರಣದಲ್ಲಿ ಹಲವು ಸಲ ತಮ್ಮ ಕೈ ಮೇಲಾದರೆ, ಕೆಲವು ಸಲ ವಿರೋಧಿಗಳ ಕೈ ಮೇಲಾಗುತ್ತದೆ ಎಂಬುದು ಅದಕ್ಕೆ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ವಿಜಯೇಂದ್ರ ಭವಿಷ್ಯದ ನಾಯಕರಾಗಿ ಎಮರ್ಜ್ ಆಗಲು ಕಾರಣವಾಗುತ್ತಿವೆ ಎಂಬುದು ಅದರ ಲೆಕ್ಕಾಚಾರ. ಅದರ ಪ್ರಕಾರ, ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಏಕಕಾಲಕ್ಕೆ ಒಕ್ಕಲಿಗ ಮತ್ತು ಲಿಂಗಾಯತ ವರ್ಗಗಳ ಅಸಹನೆಗೆ ಕಾರಣವಾಗುತ್ತಿವೆ.
ಮೊನ್ನೆ ಒಕ್ಕಲಿಗ ಮಠಾಧೀಶರಾದ ಚಂದ್ರಶೇಖರನಾಥ ಸ್ವಾಮೀಜಿಗಳಾಡಿದ ಮಾತು ಮತ್ತು ಲಿಂಗಾಯತ ಮಠಾಧೀಶರಾದ ಶ್ರೀಶೈಲ ಜಗದ್ಗುರುಗಳಾಡಿದ ಮಾತುಗಳೇ ಇದಕ್ಕೆ ಸಾಕ್ಷಿ.
ಅಂದ ಹಾಗೆ ಒಕ್ಕಲಿಗ ಮಠಾಧೀಶರಾದ ಚಂದ್ರಶೇಖರನಾಥ ಸ್ವಾಮೀಜಿ ಏನು ಹೇಳಿದರು. ಸಿದ್ಧರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ವಹಿಸಿಕೊಡಬೇಕು ಅಂತ ತಾನೇ ಇಂತಹ ಮಾತುಗಳನ್ನು ಅವರೇಕೆ ಆಡಿದರು. ಅಧಿಕಾರ ಹಂಚಿಕೆಯ ಬಗ್ಗೆ ಕಾಂಗ್ರೆಸ್ ವರಿಷ್ಟರು ತೀರ್ಮಾನಿಸಿದ್ದರೆ ಅದು ಜಾರಿಯಾಗಲು ಇನ್ನೊಂದು ವರ್ಷವಾದರೂ ಕಾಯಲೇಬೇಕು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅಂತಹ ಅವಸರದ ಮಾತುಗಳೇಕೆ ಶುರುವಾದವು.
ಹಾಗಂತ ಕೆದಕಲು ಹೋದರೆ ಹಲವು ಕುತೂಹಲಕಾರಿ ಅಂಶಗಳು ಹೊರಬೀಳುತ್ತವೆ. ಅದರ ಪ್ರಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವ ವಿಷಯದಲ್ಲಿ ಸಿದ್ಧರಾಮಯ್ಯ ಟೀಮಿಗೆ ಸಹಮತವಿಲ್ಲ.
ಒಂದು ವೇಳೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದ್ದೇ ಹೌದಾದರೆ ಎರಡನೇ ಅವಧಿಗೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ, ಆದರೆ ಡಿ.ಕೆ.ಶಿವಕುಮಾರ್ ಅವರನ್ನು ಒಪ್ಪಲು ತಾವು ತಯಾರಿಲ್ಲ ಅಂತ ಈ ಟೀಮಿನ ಪ್ರಮುಖರು ಖಾಸಗಿ ಮಾತುಕತೆಯಲ್ಲಿ ಹೇಳತೊಡಗಿದ್ದಾರೆ.
ಅರ್ಥಾತ್, ಡಿಕೆಶಿಗೆ ಸಿಎಂ ಹುದ್ದೆ ತಪ್ಪಿಸುವ ಯತ್ನ ವ್ಯವಸ್ಥಿತವಾಗಿ ನಡೆದಿದೆ ಎಂಬುದು ಡಿಕೆ ಕ್ಯಾಂಪಿಗೆ ಕನ್ ಫರ್ಮ್ ಆಗಿದೆ. ಇದೇ ಕಾರಣಕ್ಕಾಗಿ ಆ ಟೀಮು ಹುಯಿಲೆಬ್ಬಿಸುತ್ತಿದೆ. ಚಂದ್ರಶೇಖರನಾಥ ಸ್ವಾಮೀಜಿಗಳ ಹೇಳಿಕೆಯ ಹಿಂದೆ ಪ್ರಭಾವ ಬೀರಿರುವುದೇ ಈ ಹುಯಿಲು ಎಂಬುದು ಸದ್ಯದ ಅನುಮಾನ.
ಹೀಗೆ ಸಿಎಂ ಪಟ್ಡಕ್ಕಾಗಿ ಪುನ: ಶುರುವಾದ ಕದನ ಅಂತಿಮವಾಗಿ ಡಿಕೆಶಿ ಕಾಲೆಳೆಯಲಿದೆ.ಆ ಮೂಲಕ ಒಕ್ಕಲಿಗರಿಗೆ ಸಿಎಂ ಪಟ್ಟ ತಪ್ಪಲಿದೆ. ಅಂದ ಹಾಗೆ ವಿಧಾನಸಭಾ ಚುನಾವಣೆಯ ನಂತರ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ನಿರೀಕ್ಷೆಯಿಂದ ಒಕ್ಕಲಿಗ ಸಮುದಾಯ ಕಾಂಗ್ರೆಸ್ಸಿಗೆ ಶಕ್ತಿ ನೀಡಿತ್ತು. ಆದರೆ ಯಾವಾಗ ಅದು ಹುಸಿಯಾಯಿತೋ ಇದರಿಂದ ಕೆರಳಿದ ಅದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಪವರ್ ತುಂಬಿತು. ಒಂದು ವೇಳೆ ಎರಡನೇ ಅವಧಿಯಲ್ಲೂ ಡಿಕೆಶಿಗೆ ಸಿಎಂ ಹುದ್ದೆ ದೊರೆಯದಿದ್ದರೆ ಅದು ನಿಶ್ಚಿತವಾಗಿ ಕೆರಳುತ್ತದೆ.ಮೈತ್ರಿಕೂಟದ ಜತೆ ಖಾಯಂ ಆಗಿ ನಿಲ್ಲುತ್ತದೆ ಎಂಬುದು ವಿಜಯೇಂದ್ರ ಕ್ಯಾಂಪಿನ ಕನಸು.
ಒಕ್ಕಲಿಗ-ಲಿಂಗಾಯತ ಶಕ್ತಿ ಒಗ್ಗೂಡಲಿದೆ
ಇನ್ನು ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಯ ಮಾತು ಶುರುವಾಗುತ್ತಿದ್ದಂತೆಯೇ ಶ್ರೀ ಶೈಲ, ರಂಭಾಪುರಿ ಪೀಠದ ಜಗದ್ಗುರುಗಳು, ಲಿಂಗಾಯತರಿಗೆ ಮುಖ್ಯಮಂತ್ರಿ ಯಾ ಉಪಮುಖ್ಯಮಂತ್ರಿ ಪಟ್ಟ ಸಿಗಲಿ ಅಂತ ಹೇಳಿದರು. ಹೀಗೆ ಅವರು ಹೇಳಿದ ಮಾತ್ರಕ್ಕೆ ಲಿಂಗಾಯತ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಸಿಕ್ಕಿ ಬಿಡುತ್ತದೆ ಅಂತಲ್ಲ.
ಆದರೆ ಅವರ ಮಾತಿನಿಂದ ಕರ್ನಾಟಕದ ಲಿಂಗಾಯತ ಸಮುದಾಯ ಮತ್ತೊಮ್ಮೆ ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂಬುದು ವಿಜಯೇಂದ್ರ ಕ್ಯಾಂಪಿನ ಲೆಕ್ಕಾಚಾರ.
ಅರ್ಥಾತ್, ಅಧಿಕಾರ ಹಂಚಿಕೆ ಅಂತ ಆಗಿದ್ದೇ ಆದರೆ ಸಿಎಂ ಪಟ್ಟ ಒಕ್ಕಲಿಗರಿಗೂ ಸಿಗುವುದಿಲ್ಲ, ಲಿಂಗಾಯತರಿಗೂ ಸಿಗುವುದಿಲ್ಲ. ಬದಲಿಗೆ ಅದು ಅಹಿಂದ ವರ್ಗಗಳ ನಾಯಕರೊಬ್ಬರ ಪಾಲಾಗಲಿದೆ. ಯಾವಾಗ ಈ ಬೆಳವಣಿಗೆ ನಡೆಯುತ್ತದೋ. ಆಗ ಪ್ರಬಲ ಒಕ್ಕಲಿಗ , ಲಿಂಗಾಯತ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಕನ್ ಸಾಲಿಡೇಟ್ ಆಗುತ್ತವೆ. ಮತ್ತು ಇದರ ಪರಿಣಾಮವಾಗಿ ಬಿಜೆಪಿ ಮೈತ್ರಿಕೂಟಕ್ಕೆ ಡೆಡ್ಲಿ ಪವರ್ ದಕ್ಕಲಿದೆ.
ಪರಿಸ್ಥಿತಿ ಹೀಗಾದಾಗ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ನಾಯಕರು ಬಿಜೆಪಿ ಮೈತ್ರಿಕೂಟದ ಮುಂಚೂಣಿಯಲ್ಲಿರಬೇಕು. ಇವತ್ತಿನ ಪರಿಸ್ಥಿತಿಯಲ್ಲಿ ಅಂತಹ ಎನ್ ಕ್ಯಾಶ್ ಮೆಂಟ್ ಪವರ್ ಇರುವ ಪ್ರಮುಖ ನಾಯಕ ವಿಜಯೇಂದ್ರ ಎಂಬುದು ಅವರ ಕ್ಯಾಂಪಿನ ಮಾತು.
ಲಿಂಗಾಯತ ಪಾಳಯ ಕುದಿಯುತ್ತಿದೆ
ಈ ಮಧ್ಯೆ ವಿಜಯೇಂದ್ರ ಕ್ಯಾಂಪಿನ ಕನಸಿಗೆ ಕರ್ನಾಟಕದ ಲಿಂಗಾಯತ ಪಾಳಯದಲ್ಲಿರುವ ಒಂದು ಕನವರಿಕೆ ಶಕ್ತಿ ತುಂಬಿದೆ.
ಅದೆಂದರೆ, ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಒಬ್ಬೇ ಒಬ್ಬ ಲಿಂಗಾಯತ ನಾಯಕ ಪೂರ್ಣಾವಧಿ ಮುಖ್ಯಮಂತ್ರಿ ಆಗಿಲ್ಲ.
ಲೆಕ್ಕಾಚಾರದ ದೃಷ್ಟಿಯಿಂದ ನೋಡಿದರೆ ರಾಜ್ಯದಲ್ಲಿ ಲಿಂಗಾಯತರೇ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.ಈ ಪೈಕಿ ನಿಜಲಿಂಗಪ್ಪ ಅವರೊಬ್ಬರೇ ಹತ್ತತ್ತಿರ ಏಳೂವರೆ ವರ್ಷಗಳ ಕಾಲ ರಾಜ್ಯವಾಳಿದ್ದಾರೆ.
ಆದರೆ ಅಂತಹ ನಿಜಲಿಂಗಪ್ಪ ಸೇರಿದಂತೆ ಯಾವೊಬ್ಬ ಲಿಂಗಾಯತ ನಾಯಕರು ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿಲ್ಲ.
1956 ರಲ್ಲಿ ನಿಜಲಿಂಗಪ್ಪ ಪಟ್ಟವೇರುವ ಕಾಲಕ್ಕೆ ಆ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿಗಳಾಗಿದ್ದರು.
1957 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ನಿಜಲಿಂಗಪ್ಪ ಪುನ: ಮುಖ್ಯಮಂತ್ರಿಯಾದರು.ಆದರೆ ಮರು ವರ್ಷವೇ ಪಕ್ಷದಲ್ಲಿ ಶುರುವಾದ ಭಿನ್ನಮತಕ್ಕೆ ಬಲಿಯಾದರು.
1962 ರ ಚುನಾವಣೆಯ ಸಂದರ್ಭದಲ್ಲಿ ನಿಜಲಿಂಗಪ್ಪ ಸಿಎಂ ಕ್ಯಾಂಡಿಡೇಟ್ ಆಗಿದ್ದರೂ ಚುನಾವಣೆಯಲ್ಲಿ ಸೋತರು.ಪರಿಣಾಮವಾಗಿ ಎಸ್.ಆರ್.ಕಂಠಿ ಮುಖ್ಯಮಂತ್ರಿಯಾದರು. ಮುಂದೆ ಕೆಲವೇ ಕಾಲದಲ್ಲಿ ಉಪಚುನಾವಣೆ ನಡೆದು ನಿಜಲಿಂಗಪ್ಪ ಗೆದ್ದರು. ಮರಳಿ ಮುಖ್ಯಮಂತ್ರಿಯಾದರು. ಆದರೆ, ಆ ಅವಧಿ ಅವರೊಬ್ಬರದಾಗಿರಲಿಲ್ಲ.
ಮುಂದೆ 1967 ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ನಿಜಲಿಂಗಪ್ಪ ಪುನ: ಮುಖ್ಯಮಂತ್ರಿಯಾದರು.ಆದರೆ 1968 ರಲ್ಲಿ ಎಐಸಿಸಿ ಅಧ್ಯಕ್ಚರಾಗುವ ಸನ್ನಿವೇಶ ಬಂದಾಗ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು.3
ಹೀಗೆ ನಿಜಲಿಂಗಪ್ಪ ಅವರಿಂದ ಹಿಡಿದು ಬಿ.ಡಿ.ಜತ್ತಿ,ಎಸ್.ಆರ್.ಕಂಠಿ,ವೀರೇಂದ್ರ ಪಾಟೀಲ್, ಎಸ್.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ತನಕ ಹಲವು ಲಿಂಗಾಯತ ನಾಯಕರು ಮುಖ್ಯಮಂತ್ರಿಗಳಾದರೂ ನಿರಂತರ ಐದು ವರ್ಷಗಳ ಕಾಲ ರಾಜ್ಯವಾಳಲಿಲ್ಲ.
ಆ ದೃಷ್ಟಿಯಿಂದ ಕರ್ನಾಟಕದ ಇತಿಹಾಸದಲ್ಲಿ ಹಿಂದುಳಿದ ವರ್ಗಗಳಿಂದ ಬಂದ ದೇವರಾಜ ಅರಸು, ಸಿದ್ಧರಾಮಯ್ಯ ಮತ್ತು ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿದ್ದಾರೆ.
ಅರ್ಥಾತ್, ತಮ್ಮ ಸಮುದಾಯದ ಒಬ್ಬ ನಾಯಕ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿಲ್ಲ ಎಂಬ ಕುದಿ ಲಿಂಗಾಯತ ಪಾಳಯದಲ್ಲಿ ಶುರುವಾಗಿದೆ. ಹೀಗೆ ಶುರುವಾಗಿರುವ ಕುದಿಯನ್ನು ತಣಿಸುವ ಶಕ್ತಿ ವಿಜಯೇಂದ್ರ ಅವರಿಗಿದೆ. ಹೀಗಾಗಿ ಆ ಕುದಿಯ ಹಬೆ ವಿಜಯೇಂದ್ರ ಅವರನ್ನು ಭವಿಷ್ಯದ ಲಿಂಗಾಯತ ನಾಯಕನ ಜಾಗದಲ್ಲಿ ಕೂರಿಸಲಿದೆ ಎಂಬುದು ಈ ಕ್ಯಾಂಪಿನ ಕನಸು.
ಹೀಗಾಗಿ ಅದು ದಿಲ್ಲಿ ರಾಜಕಾರಣದ ಕಿರಿಕ್ಕುಗಳ ಬಗ್ಗೆ ಚಿಂತಿಸುತ್ತಿಲ್ಲ. ಬದಲಿಗೆ ವಿಜಯೇಂದ್ರ ಅವರು ಭವಿಷ್ಯದ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಗಳ ಬಗ್ಗೆ ಕನಸು ಕಾಣುತ್ತಿದೆ.
ಸಂತೋಷ್ ಸಮಸ್ಯೆ ಅಲ್ಲ..
ಇನ್ನು ವಿಜಯೇಂದ್ರ ಅವರ ದಾರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಡ್ಡಿಯಾಗಲಿದ್ದಾರೆ ಎಂಬ ಮಾತಿದೆಯಾದರೂ ವಿಜಯೇಂದ್ರ ಕ್ಯಾಂಪು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ಮೊದಲ ದಿನದಿಂದಲೂ ಸಂತೋಷ್ಅವರ ವಿಶ್ವಾಸಕ್ಕೆ ಪಾತ್ರರಾಗಲು ಯತ್ನಿಸುತ್ತಲೇ ಇದ್ದಾರೆ.
ಉದಾಹರಣೆಗೆ ರಾಜ್ಯ ಬಿಜೆಪಿಯ ಹೆಡ್ ಆಫೀಸನ್ನೇ ತೆಗೆದುಕೊಳ್ಳಿ.ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾಗುವ ಕಾಲಕ್ಕೆ ಇಡೀ ಕಚೇರಿಯೇ ಸಂತೋಷಮಯವಾಗಿತ್ತು.ಅರ್ಥಾತ್, ಸಂತೋಷ್ ಅವರ ಸೂಚನೆಯ ಮೇರೆಗೆ ನೇಮಕಗೊಂಡವರ ಪಡೆಯೇ ಅಲ್ಲಿತ್ತು.
ಅಧ್ಯಕ್ಷರಾದ ನಂತರ ಈ ಟೀಮನ್ನು ಬದಲಿಸಿ,ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲು ವಿಜಯೇಂದ್ರ ಅವರಿಗೆ ಸಾಧ್ಯವಿತ್ತು.ಆದರೆ ತಪ್ಪಿಯೂ ಈ ಕೆಲಸಕ್ಕಿಳಿಯದ ವಿಜಯೇಂದ್ರ ಅವರು ಹಳೆ ಪಡೆಯನ್ನೇ ಮುಂದುವರಿಸಿದರು.
ಇದೇ ರೀತಿ ಪಕ್ಷದ ಪದಾಧಿಕಾರಿಗಳ ಪಟ್ಟಿ ತಯಾರಿಸಿದಾಗ ದಿಲ್ಲಿಯಲ್ಲಿದ್ದ ಸಂತೋಷ್ಅವರನ್ನು ಭೇಟಿ ಮಾಡಿ,ಇದೇ ಸಾರ್ ಪದಾಧಿಕಾರಿಗಳ ಪಟ್ಟಿ ಅಂತ ತೋರಿಸಿದ್ದರಂತೆ.
ಈಗಲೂ ಅಷ್ಟೇ, ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮುನ್ನ ಅವರು ಸಂತೋಷ್ ಅವರ ಗಮನಕ್ಕೆ ತರುತ್ತಾರೆ.
ಅಂದ ಹಾಗೆ ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ ಉದ್ದಕ್ಕೂ ಸಂತೋಷ್ ಅವರ ಜತೆ ಸಂಘರ್ಷ ಮಾಡುತ್ತಲೇ ಬಂದರು.ಆದರೆ ಈಗ ಅದನ್ನೇ ಮುಂದುವರಿಸಿಕೊಂಡು ಹೋಗುವುದು ಪ್ರಾಕ್ಟಿಕಲ್ ಅಲ್ಲ,ಮತ್ತದರ ಅಗತ್ಯವೂ ಇಲ್ಲ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಾವು ಇಪ್ಪತ್ತೈದು ವರ್ಷ ರಾಜಕೀಯ ಮಾಡಬೇಕಾದವರು.ಹೀಗಾಗಿ ಸಹನೆಯಿಂದ ಹೆಜ್ಜೆ ಇಡಬೇಕು ಎಂಬುದು ವಿಜಯೇಂದ್ರ ಅವರಿಗೆ ಅರ್ಥವಾಗಿದೆ.
ಪರಿಣಾಮ ಸಂತೋಷ್ ಅವರ ವಿರುದ್ದ ಹೆಜ್ಜೆ ಇಡುವ ಕೆಲಸಕ್ಕೆ ಅವರು ತಯಾರಿಲ್ಲ. ಮತ್ತು ಈ ಅಂಶವೇ ವಿಜಯೇಂದ್ರ ಅವರ ಬಲವನ್ನು ಹೆಚ್ಚಿಸಲಿದೆ ಎಂಬುದು ಈ ಕ್ಯಾಂಪಿನ ವಿಶ್ವಾಸ.
ಆರ್.ಟಿ.ವಿಠ್ಠಲಮೂರ್ತಿ