ಶಿವಮೊಗ್ಗ, ಜು. 20: ಭದ್ರಾ ಜಲಾಶಯದ ಒಳಹರಿವಿನಲ್ಲಿ ಶನಿವಾರ ತುಸು ಇಳಿಕೆ ಕಂಡುಬಂದಿದೆ. ಉಳಿದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂಗೆ ಸುಮಾರು 5 ಅಡಿಯಷ್ಟು ನೀರು ಹರಿದು ಬಂದಿದೆ. ಇದು ಪ್ರಸ್ತುತ ಮುಂಗಾರು ಮಳೆ ಅವಧಿ ವೇಳೆ ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ನೀರು ಸಂಗ್ರಹವಾಗಿರುವುದು ಇದೇ ಮೊದಲಾಗಿದೆ.
ಶನಿವಾರ (ಜು. 20) ರ ಬೆಳಿಗ್ಗೆ 6 ಗಂಟೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 46,876 ಕ್ಯೂಸೆಕ್ ಇದೆ. ಜು. 19 ರಂದು ಒಳಹರಿವಿನ ಪ್ರಮಾಣ 49,555 ಕ್ಯೂಸೆಕ್ ಇತ್ತು. ಪ್ರಸ್ತುತ ಡ್ಯಾಂನ ಹೊರಹರಿವು 186 ಕ್ಯೂಸೆಕ್ ಇದೆ. ಸದ್ಯ ಭದ್ರಾ ಡ್ಯಾಂ ನೀರಿನ ಮಟ್ಟ 162 ಅಡಿ 3 ಇಂಚು ಇದೆ (ಗರಿಷ್ಠ ಮಟ್ಟ : 186 ಅಡಿ) ಇದೆ.
ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 142. 1 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಮುಂಗಾರು ಮಳೆ ಅವಧಿ ವೇಳೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಡ್ಯಾಂ ನೀರಿನ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 21. 2 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ಭದ್ರಾ ಜಲಾಶಯವು ಒಟ್ಟಾರೆ 45. 040 ಟಿಎಂಸಿಯಷ್ಟು ನೀರು ಸಂಗ್ರಹಣಾ ಸಾರ್ಮರ್ಥ್ಯ ಹೊಂದಿದೆ. ಪ್ರಸ್ತುತ 28. 336 ಟಿಎಂಸಿ ನೀರು ಸಂಗ್ರಹವಾಗಿದೆ.
ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದಿದೆ. ಈ ಕಾರಣದಿಂದ ಪ್ರಸ್ತುತ ವರ್ಷ ಡ್ಯಾಂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಗಳು ಇವೆ.