ದಾವಣಗೆರೆ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬಂಡವಾಳಶಾಹಿಗಳ ವಿರುದ್ಧ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಸಂಘ-ಪರಿವಾರಗಳು ವಿಶೇಷವಾಗಿ ವಿರೋಧ ಪಕ್ಷಗಳು ಕರಾಳ ದಿನವೆಂದು ಬಿಂಬಿಸುತ್ತಲೇ ಬಂದಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಮುಖಂಡ ಡಿ. ತಿಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1975ರ ಜೂನ್ 25 ರಂದು ಭಾರತದಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈಗಾಗಲೇ 50 ವರ್ಷ ಸಂದಿಸಿದರೂ ಸಹ ಇಂದಿನವರೆಗೂ ಸಂಘ ಪರಿವಾರ ಮತ್ತು ವಿರೋಧ ಪಕ್ಷಗಳು ಕರಾಳದಿನವೆಂದು ಬಿಂಬಿಸುತ್ತಿರುವುದು. ಪದೇ ಪದೇ ಚರ್ಚಿಸುತ್ತಿರುವುದು ವಿಪರ್ಯಾಸ ಎಂದಿದ್ದಾರೆ
ದೇಶದ ಬಡವರಿಗೆ, ದಲಿತರಿಗೆ ವಿವಿಧ ಕಾರ್ಯಕ್ರಮ ಹಾಕಿಕೊಂಡು ದೇಶದ ಉದ್ಧಾರಕ್ಕೆ ಶ್ರಮಿಸುತ್ತಿದ್ದ ಇಂದಿರಾಗಾಂಧಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಷಡ್ಯಂತ್ರ ನಡೆಸಿದ್ದವು. ಸರ್ಕಾರದ ವಿರುದ್ಧ ದಂಗೆ ಏಳಲು, ವಿದ್ಯಾರ್ಥಿಗಳಿಗೆ, ಪೊಲೀಸರಿಗೆ ಮತ್ತು ಸೈನ್ಯಕ್ಕೆ ವಿಪಕ್ಷಗಳು, ಕರೆಕೊಟ್ಟವು. ವಿದೇಶಿ ಬಂಡವಾಳ ಶಾಹಿಗಳ ಬೆಂಬಲ ಪಡೆದು ಕೋಮುವಾದ ಪ್ರಚೋದಿಸಿ, ಅಶಾಂತಿ ಹೆಚ್ಚಿಸಿ, ಅರಾಜಕತೆ ಸೃಷ್ಟಿಸಲು ವಿಪಕ್ಷಗಳು ಮುಂದಾದಾಗ ಇಂದಿರಾಜಿ ಅವರು ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ದೇಶದಲ್ಲಿ ಹೇರಬೇಕಾಯಿತು ಎಂದು ತಿಳಿಸಿದ್ದಾರೆ.
ದೇಶದ ಅಸ್ತಿತ್ವಕ್ಕೆ ಧಕ್ಕೆ ತರಲು ವಿಪಕ್ಷಗಳು ಮುಂದಾಗಿದ್ದವು. ಸರ್ಕಾರದ ಪಾಲಿಗೆ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಕಗ್ಗೋಲೆಯಲ್ಲ, ಜನಹಿತ ಕಾಪಾಡುವ ಏಕೈಕ ಮಾರ್ಗವಾಗಿತ್ತು. ತಾತ್ವಿಕವಾಗಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜನಾಂಗದ ಬಡವರಿಗೆ ಹೆಚ್ಚಿನ ಅನುಕೂಲವಾಯಿತು ಎಂದು ಅಭಿಪ್ರಾಯಿಸಿದ್ದಾರೆ.
ಇಂದಿರಾಗಾಂಧಿಯವರು ಜಾರಿಗೆ ತಂದ 20 ಅಂಶದ ಕಾರ್ಯಕ್ರಮಗಳು ಸಂವಿಧಾನ ವಿಧಿ 21 ರಡಿ ಬದುಕುವ ಹಕ್ಕು, ಬಹಳ ಮುಖ್ಯವಾದ ಅಸ್ಪೃಶ್ಯತೆ ನಿಮೂರ್ಲನೆ ಹಾಗೂ ಜೀತ ಪದ್ಧತಿಯಿಂದ ಮುಕ್ತಿ, ಊಳುವವನೇ ಭೂಮಿಯ ಒಡೆಯದಂತಹ ಸಮಾಜಮುಖಿ, ದೀನ, ದಲಿತೋದ್ಧಾರದ ಕಾರ್ಯಕ್ರಮ ಹಾಕಿಕೊಂಡು ಯಶಸ್ವಿ ಅನುಷ್ಠಾನಕ್ಕೆ ಸಾಧ್ಯವಾಯಿತು ಎಂದು ಪ್ರತಿಪಾದಿಸಿದ್ದಾರೆ.
ದೇಶದ ಶೇ.85 ರಷ್ಟು ಜನರ ಬದುಕು ಮತ್ತು ಭದ್ರತೆಗಾಗಿ. ಬೆರಳಣಿಕೆಯಷ್ಟು ಪಟ್ಟಭದ್ರ ಶ್ರೀಮಂತ ಜನರನ್ನು ಬಂಧಿಸಿ ಜೈಲಿಗೆ ಹಾಕುವುದು ಅನಿವಾರ್ಯವಾಗಿತ್ತು. ಶ್ರೀಮಂತರ ಕಪಿಮುಷ್ಠಿಯಿಂದ ಬಡ ಜನರನ್ನು ರಕ್ಷಿಸಿ ಬದುಕಲು ಅವಕಾಶ ನೀಡಲು ಶ್ರೀಮತಿ ಇಂದಿರಾಗಾಂಧಿಯವರು ತೆಗೆದುಕೊಂಡ ತೀರ್ಮಾನವೇ ತುರ್ತು ಪರಿಸ್ಥಿತಿ ಎಂದಿದ್ದಾರೆ.
ಇದೊಂದು ಕ್ರಾಂತಿಕಾರಿ ಹೆಜ್ಜೆಯಾದರೂ ವಿಪಕ್ಷಗಳು, ಪಟ್ಟಭದ್ರರು. ಪ್ರತಿಗಾಮಿಗಳು, ಮೂಲಭೂತವಾದಿಗಳು ಇದನ್ನೇ ಕರಾಳ ದಿನವೆಂದು ಬೊಬ್ಬೆ ಹಾಕುತ್ತಿರುವುದನ್ನು ಇನ್ನಾದರೂ ಕೈಬಿಟ್ಟು ದೇಶದ ಜನರ ಅಭಿವೃದ್ಧಿಯತ್ತ ಗಮನಹರಿಸಲಿ ಎಂದಿದ್ದಾರೆ.