ಶಿವಮೊಗ್ಗ, ಜು. 27: ಮಧ್ಯ ಕರ್ನಾಟಕದ ಜನರ ಜೀವನಾಡಿ ಭದ್ರಾ ಜಲಾಶಯವಾದ ಭರ್ತಿಗೆ ಕೇವಲ 8 ಅಡಿ ನೀರು ಮಾತ್ರ ಬಾಕಿದ್ದು, ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದ್ದು, ಕೆಲವೇ ದಿನಗಳಲ್ಲಿಯೇ ಜಲಾಶಯ ಗರಿಷ್ಠ ಮಟ್ಟ ತಲುಪಲಿದೆ..!
ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರಲಾರಂಭಿಸಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂಗೆ 4. 3 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜು. 27 ರ ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 49,081 ಕ್ಯೂಸೆಕ್ ಗೆ ಏರಿಕೆಯಾಗಿದೆ! ಶುಕ್ರವಾರ ಒಳಹರಿವಿನ ಪ್ರಮಾಣ35,138 ಕ್ಯೂಸೆಕ್ ಇತ್ತು. ಉಳಿದಂತೆ ಶನಿವಾರ 206 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 178 (ಗರಿಷ್ಠ ಮಟ್ಟ : 186) ಅಡಿ ಇದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 158 ಅಡಿಯಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 20 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ಒಟ್ಟಾರೆ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ನದಿ, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳು ಗರಿಷ್ಠ ಮಟ್ಟಕ್ಕೆ ತಲುಪಲಾರಂಭಿಸಿರುವುದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ.