ದಾವಣಗೆರೆ (Davanagere) : ಬೋರ್‌ವೆಲ್ ಕೊರೆಸಿದ ಒಬ್ಬ ರೈತನಿಗೆ ಹಳೆಯ ಟಿಸಿ, ಇನ್ನೊಬ್ಬ ರೈತನಿಗೆ ಕೊಡಬೇಕಾದ ಟಿಸಿ ಬೇರೆಯವರಿಗೆ ಮಾರಾಟ ಮಾಡಿ, ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕೆಡಿಪಿ ಸಭೆಯಲ್ಲಿ ಬಹಿರಂಗ ಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅರ್ಹ ರೈತರಿಗೆ ಬೋರ್‌ವೆಲ್ ಕೊರೆಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ ಕಂದಗಲ್ಲು ಗ್ರಾಮದ ಗಂಗಾಧರಪ್ಪ ಎಂಬುವರಿಗೆ ಪಂಪ್‌ಸೇಟ್, ಪೈಪ್ ಸೇರಿ ಎಲ್ಲಾ ಪರಿಕರ ವಿತರಿಸಿ, ಹೊಸ ಟಿಸಿ ಬದಲು ಹಳೆಯ ಟಿಸಿ ಕೊಟ್ಟಿದ್ದಾರೆ. ಅದೇ ರೀತಿ ಹುಲಿಕಟ್ಟೆ ಚನ್ನಬಸಪ್ಪ ಎಂಬುವರಿಗೆ ಬೋರ್‌ವೆಲ್ ಕೊರೆಸಿ ಮೂರು ವರ್ಷದ ಬಳಿಕ ಪಂಪ್‌ಸೆಟ್, ಪೈಪ್‌ಗಳನ್ನು ವಿತರಿಸಿ, ಇವರಿಗೆ ಕೊಡಬೇಕಾದ ಟಿಸಿ ಬೇರೆಯವರಿಗೆ ಕೊಟ್ಟು, ಇವತ್ತಿಗೂ ರೈತನನ್ನು ಕಚೇರಿಗೆ ಅಲೆಯುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರೈತರಿಗೆ ವಂಚಿಸಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವುದನ್ನು ಶಾಸಕರು ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಆಡಳಿತಾಧಿಕಾರಿ ಕೃಷ್ಣನಾಯ್ಕ್, ಇಒ ರಾಮಭೋವಿ, ಕೂಡಲೇ ಈ ಬಗ್ಗೆ ತನಿಖೆ ಮಾಡಿ ವಾರದೊಳಗೆ ವಸ್ತುನಿಷ್ಠ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಸೌಲಭ್ಯ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕೋಟ್ಯಂತರ ರೂಪಾಯಿ ಅವ್ಯವಹಾರ?:
ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನೆಡುತೋಪು, ರಸ್ತೆ ಬದಿ, ಇಂಗು ಗುಂಡಿ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅಧಿಕಾರಿಗಳು ಮಾಡಿರುವ ಕಾಮಗಾರಿಗಳು ಕಾಣುತ್ತಿಲ್ಲ. ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ.
ಈ ಬಗ್ಗೆ ಖದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಪಂ ಆಡಳಿತಾಧಿಕಾರಿ, ಇಒಗೆ ಶಾಸಕ ಬಸವಂತಪ್ಪ ಸೂಚನೆ ನೀಡಿದರು.
ಅಧಿಕಾರಿಗಳು ಕೊಡುವ ಪುಸ್ತಕದಲ್ಲಿ ಕೆಲಸಗಳು ಅಕ್ಷರ ರೂಪದಲ್ಲಿ ಕಾಣುತ್ತಿವೆ. ಆದರೆ ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ನೀವು ಕೊಟ್ಟಿರುವ ಪುಸ್ತಕದಲ್ಲಿ ಕಾಣುವ ಕೆಲಸಗಳು ವಾಸ್ತವದಲ್ಲಿ ಕಾಣುತ್ತಿಲ್ಲ. ಕಳೆದ ಸಭೆಯಲ್ಲಿ ಮೂರು ವರ್ಷದ ಪ್ರಗತಿಯ ವರದಿ ಕೇಳಲಾಗಿತ್ತು. ಈವರೆಗೂ ಕೊಟ್ಟಿಲ್ಲ, ಸಭೆಗೆ ಅನುಪಾಲನಾ ವರದಿನೂ ತಂದಿಲ್ಲ. ಕೇಳಿದರೆ ಊಡಾಫೆ ಉತ್ತರ ಕೊಡ್ತೀರಿ. ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದೊಂದಿಗೆ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಬದು ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು. ರೈತರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ, ಈ ಬಾರಿ ಉತ್ತಮ ಮುಂಗಾರು ಆರಂಭದಿಂದ ಬಿತ್ತನೆಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಅಲ್ಲದೇ ಭದ್ರಾ ಜಲಾಶಯ ಭರ್ತಿಯಿಂದ ಭತ್ತ ಬೆಳೆಯುವುದಕ್ಕೂ ತೊಂದರೆ ಆಗುತ್ತಿಲ್ಲ. ಈಗಾಗಲೇ ಭತ್ತ ನಾಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೀಜ, ಗೊಬ್ಬರ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಕೃಷಿಭಾಗ್ಯ ಯೋಜನೆಯಡಿ ಆನಗೋಡು 38, ಮಾಯಕೊಂಡ 26 ಸೇರಿದಂತೆ ಒಟ್ಟು 84 ರೈತರಿಗೆ ಕೃಷಿಹೊಂಡದ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸಕ್ತ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಕೃಷಿಭಾಗ್ಯ ಯೋಜನೆ ಮುಖ್ಯಮಂತ್ರಿಗಳ ಕನಸಿ ಕೂಸು. ಹೀಗಾಗಿ ಎಲ್ಲಾ ರೈತರು ಈ ಸೌಲಭ್ಯ ಪಡೆದುಕೊಂಡು ಅಂತರ್ಜಲ ಮಟ್ಟದ ಕೊರತೆ ನೀಗಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಶಾಸಕ ಬಸವಂತಪ್ಪ ಹೇಳಿದರು.
Read also : DAVANAGERE NEWS : ಅಪ್ಸರಾ ಐಸ್ ಕ್ರೀಂನಿಂದ ʼಮುಸ್ಕಾನ್ʼ ಬಿಡುಗಡೆ
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ರೈತರು ತೋಟಗಳಲ್ಲಿ ಕೃಷಿಹೊಂಡ ಯಾವ ರೀತಿ ನಿರ್ಮಿಸಿಕೊಳ್ಳಬೇಕೆಂಬ ಕುರಿತು ತರಬೇತಿ ನೀಡಲಾಗುತ್ತಿದೆ. ದೊಡ್ಡ ಮತ್ತು ಸಣ್ಣ ಟ್ರಾ್ಯಕ್ಟರ್‌ಗಳಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಎಸ್ಸಿ-ಎಸ್ಟಿ ಮತ್ತು ಸಾಮಾನ್ಯರಿಗೆ ಒಟ್ಟು 17 ಕೊಡಲು ಅವಶ್ಯಕತೆ ಇದೆ. ಆದರೆ 60 ರಿಂದ 70 ಅರ್ಜಿಗಳು ಬಂದಿದ್ದು, ಬೇಡಿಕೆ ಹೆಚ್ಚಾಗಿದೆ ಎಂದರು. ಹೆಚ್ಚುವರಿಯಾಗಿ ಕೊಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.
ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಉತ್ತರ ಮತ್ತು ದಕ್ಷಿಣ ವಲಯದ ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಮಟ್ಟ ತಿಳಿದುಕೊಳ್ಳಬೇಕು. ಶಿಕ್ಷಕರು ಬೆಳಗ್ಗೆ ಮತ್ತು ಸಂಜೆ ಸಹಿಯನ್ನು ಒಂದೇ ಬಾರಿ ಮಾಡುವುದು ಭೇಟಿ ನೀಡಿದ ಕೆಲವು ಶಾಲೆಗಳಲ್ಲಿ ಕಂಡು ಬಂದಿದೆ. ನೀವು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಶಾಸಕ ಬಸವಂತಪ್ಪ ಪ್ರಶ್ನಿಸಿದರು. ತಬ್ಬಿಬ್ಬುಗೊಂಡ ದಕ್ಷಿಣ ವಲಯದ ಬಿಇಒ, ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಪರಿಣಾಮದಿಂದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇತ್ತೀಚಿಗೆ ಇಬ್ಬರು ಮದ್ಯವ್ಯಸನಿಗಳು ಜಗಳವಾಡುತ್ತಾ ರಸ್ತೆ ಬಂದ ಪರಿಣಾಮ ಲಾರಿ ಡಿಕ್ಕಿ ಓರ್ವನ ಸಾವಿಗೆ ಕಾರಣವಾಯಿತು. ಅಷ್ಟೇ ಅಲ್ಲದೇ, ಮದ್ಯ ಸೇವಿಸಿ ಪ್ರತಿನಿತ್ಯ ಗಲಾಟೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಶಾಸಕರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನೀವು ಏನು ಕೆಲಸ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ಡಾ.ಅಶ್ವಥ್, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.
–ಬಾಕ್ಸ್–
ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ
ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗದ ಅಂಬೇಡ್ಕರ್, ವಾಲ್ಮೀಕಿ, ತಾಂಡಾ, ಅಲ್ಪಸಂಖ್ಯಾತ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಶಾಸಕ ಕೆ.ಎಸ್.ಬಸವಂತಪ್ಪ ತಾಪಂ ಇಒ ರಾಮಭೋವಿ ಅವರಿಗೆ ಸೂಚನೆ ನೀಡಿದರು.
ಅನುಪಾಲನಾ ವರದಿ ತರದ ಅಧಿಕಾರಿಗಳು…
ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಾಗಿದ್ದ ಬಹುತೇಕ ಅಧಿಕಾರಿಗಳು ಅನುಪಾಲನಾ ವರದಿ ಇಲ್ಲದೆ ಹಾಜರಾಗಿದ್ದರು. ಇದರಿಂದ ಕುಪಿತಗೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಳೆದ ಸಭೆಯಲ್ಲಿ ನಡೆದ ವಿಷರ್ಯಗಳ ಕುರಿತು ವರದಿ ಇಲ್ಲದೆ ಸಭೆಗೆ ಬಂದು ಪ್ರಗತಿ ಬಗ್ಗೆ ಕೇಳಿದರೆ ಇಲ್ಲ ಎಂದರೆ ಅಧಿಕಾರಿಗಳ ಬೇಜವಾಬ್ದಾರಿ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಆಗಾದರೆ ಶಾಸಕರಿಗೆ ಕೊಡುವ ಗೌರವ ಇದೆನಾ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಆಡಳಿತಾಧಿಕಾರಿ ಕೃಷ್ಣನಾಯ್ಕ್, ಇಒ ರಾಮಭೋವಿ, ಮುಂದಿನ ಸಭೆಗೆ ಕಡ್ಡಾಯವಾಗಿ ಅನುಪಾಲನಾ ವರದಿಯೊಂದಿಗೆ ಹಾಜರಾಗಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.