ಅಮೃತ ಬಡವರ ಮನೆಯ ಹುಡುಗಿಯಾದರೆ ಏನಂತೆ? ಇಂತಹ ಸೊಸೆ ನಮಗೆ ಸಿಗಲಿಲ್ಲವಲ್ಲ ಎಂದು ಹಲವರು ಹಲುಬಿದರು. ಹಳ್ಳಿಯಲ್ಲಿ ಬೆಳೆದ ಹುಡುಗಿ. ದುಂಡು ಮುಖದ ಬೆಳದಿಂಗಳ ಬಾಲೆ. ಉದ್ದದ ಜಡೆಯಲ್ಲಿ ಯಾವಾಗಲೂ ನಗುವ ಹೂವಿನ ಮಾಲೆ, ಒಟ್ಟಿನಲ್ಲಿ ಲಕ್ಷಣದ ಹೆಣ್ಣು. ಕೆಲಸದಲ್ಲೂ ಅತ್ಯಂತ ಚುರುಕು. ಬಿಕಾಂ ಪದವೀಧರೆ. ತಂದೆ ತಾಯಿ ಶಿವಮೊಗ್ಗದ ಹಳ್ಳಿಯಲ್ಲಿ ಒಂದು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ಅಮೃತ ಹಾಗೂ ಒಬ್ಬನೇ ಮಗ ಯತೀಶನನ್ನು ತಕ್ಕಮಟ್ಟಿಗೆ ಓದಿಸಿ ಮುದ್ದಾಗಿ ಬೆಳೆಸಿದ್ದರು.
ಚೆಲುವೆಯಾಗಿದ್ದರು ಸಹ ಹಣದ ಅಭಾವದಿಂದಾಗಿ ಅಮೃತಳಿಗೆ ಗಂಡು ಸಿಕ್ಕಿದ್ದು ತಡವೇ ಆಯಿತು. ದಾವಣಗೆರೆಯ ಸಿರಿವಂತ ಸಂಬಂಧ ರಾಜೇಶನ ಮನೆಯವರು ಒಪ್ಪಿಕೊಂಡಾಗ ತಂದೆ ಹಾಗೂ ಅಣ್ಣ ಯತೀಶ ಸಾಲ ಮಾಡಿ, ಕೈಮೀರಿ ಅದ್ದೂರಿಯಾಗಿಯೇ ವಿವಾಹವನ್ನು ಮಾಡಿಕೊಟ್ಟರು.
ಕೆಲವು ತಿಂಗಳ ತರುವಾಯ ಅಮೃತಳಿಗೆ ಅತ್ತೆ, ಮಾವ ಹಾಗೂ ರಾಜೇಶನ ನಡುವಳಿಕೆ ಬೇಸರ ತರಿಸಿತ್ತು. ಅಮೃತಾ ಬಂದ ಮೇಲೆ ಮನೆಯ ಕೆಲಸದವಳನ್ನು ಬಿಡಿಸಿ ಮನೆಯ ಎಲ್ಲಾ ಕೆಲಸವನ್ನು ಇವಳ ಪಾಲಿಗೆ ವಹಿಸಿದರು. ನಾದಿನಿಯು ಪದೇ ಪದೇ ಬಂದುಳಿದು ತಿಂಗಳಗಟ್ಟಲೆ ಊಟ ಉಪಚಾರ ಮಾಡಿಸಿಕೊಂಡು, ತಾಯಿಗೆ ಚಾಡಿ ಹೇಳಿ ಹೋಗುತ್ತಿದ್ದದ್ದು ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು.
ಎಂಟು ತಿಂಗಳ ಗರ್ಭಿಣಿಯಾದಾಗಲೂ ಮನೆ ಕೆಲಸದ ಅತಿಯಾದ ಒತ್ತಡದಿಂದಾಗಿ ಸಮಯಕ್ಕೆ ಮುಂಚೆ ಗಂಡು ಮಗುವನ್ನೇನೋ ಹೆತ್ತಳು. ಆದರೆ, ದುರಾದೃಷ್ಟವೆಂಬಂತೆ ಅದು ಉಳಿಯಲಿಲ್ಲ. ಇದಾದ ತರುವಾಯ ಮತ್ತೆ ಮಗುವಿಗಾಗಿ ಹಂಬಲಿಸಿದರು ಕೂಡ ಆಸೆ ಈಡೇರಲಿಲ್ಲ. ಈ ಕಾರಣಕ್ಕಾಗಿ ಮನೆಯವರ ಚುಚ್ಚುಮಾತಿನಿಂದ ರೋಸಿ ಹೋದರು ಕೂಡ ಎಲ್ಲವನ್ನು ಸಹಿಸಿ ಎಲ್ಲರಿಗೂ ಅಮೃತದ ಧಾರೆಯನ್ನೇ ಎರೆಯುತ್ತಾ ಹದಿನಾಲ್ಕು ವರ್ಷ ಒಂದೇ ಮನೆಯಲ್ಲಿ ಕಳೆದಳು.
ಅತ್ತೆ ಮಾವ 15 ದಿನಗಳ ಯಾತ್ರೆಗೆಂದು ಹೊರಟಾಗ ಅವರ ದಾರಿ ಬುತ್ತಿಗೆ ಎಂದು ಚಕ್ಕುಲಿ ಕೊಡಬಳೆ ಮುಂತಾದ ಬಗೆ ಬಗೆಯ ತಿಂಡಿಗಳನ್ನು ಮಾಡಿಕೊಟ್ಟಳು. ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದ ರಾಜೇಶ ಕೆಲಸದ ನಿಮಿತ್ತ ಹೆಚ್ಚಾಗಿ ಊರೂರು ಸುತ್ತಾಡುತ್ತಿದ್ದ. ಕೆಲ ಸಮಯ ಮಾತ್ರ ಇವರ ಜೊತೆ ಇರುತ್ತಿದ್ದ. ಆದರೆ ಅಮೃತಾಳನ್ನು ಬೇರೆ ಮನೆ ಮಾಡಿಕೊಂಡು ಕರೆದು ಕೊಂಡು ಹೋಗುವ ಯೋಚನೆ ಎಂದು ಮಾಡಲಿಲ್ಲ. ಕೇಳಿದಾಗಲೆಲ್ಲ ಯಾವ ಊರಲ್ಲಿ ಅಂತ ಮನೆ ಮಾಡಲಿ? ನನ್ನದು ತಿರುಗಾಡುವ ಕೆಲಸ, ಅದು ಅಲ್ಲದೆ ಅಪ್ಪ ಅಮ್ಮನ್ನ ನೋಡಿಕೊಳ್ಳುವವರು ಯಾರು? ಇಲ್ಲೇನು ಕೊರತೆಯಾಗಿರುವುದು ನಿನಗೆ, ಎಂದು ಹೇಳುತ್ತಲೇ ಬಂದಿದ್ದ.
Read also : Silent dolls… | ಮೌನವಾದ ಗೊಂಬೆಗಳು …
ಯಾತ್ರೆಗೆ ಹೊರಟ ಅತ್ತೆ ಮಾವನನ್ನು ಕರೆದುಕೊಂಡು ಹೋಗಿ ರೈಲು ಹತ್ತಿಸಿ ಆಟೋ ಹಿಡಿದು ಹಿಂತಿರುಗು ಬರುವಾಗ ಆಕಸ್ಮಿಕವಾಗಿ ಅವಳ ಕಣ್ಣು ಒಂದು ಮನೆಯ ಅಂಗಳದಲ್ಲಿ, ಬರ್ಮುಡಾ ಹಾಕಿ ಕುಳಿತಿದ್ದ ವ್ಯಕ್ತಿಯ ಮೇಲೆ ಬಿತ್ತು. ಆಟೋ ನಿಲ್ಲಿಸಲು ಹೇಳಿ ದುಡ್ಡು ಕೊಟ್ಟು,ಕೆಳಗಿಳಿದು ನೋಡಿದಳು.. ಅರೆ! ಇದೇನಿದು, ರಾಜೇಶ ಈ ಮನೆಯಲ್ಲಿ? ನಂಬಲಾಗಲಿಲ್ಲ. ಹಾಗೆ ಹೆಜ್ಜೆ ಇಡುತ್ತಾ ಗೇಟಿನ ಬಳಿ ಹೋದಳು, ಅಷ್ಟೊತ್ತಿಗೆ ಆಸಾಮಿ ಒಳಗೆ ಹೋಗಿದ್ದ. ಅಲ್ಲಿ 12 ವರ್ಷದ ಬಾಲೆ ತೂಗುಯ್ಯಾಲೆಯಲ್ಲಿ ತೂಗುತ್ತಾ ಕುಳಿತಿದ್ದಳು. ಅಮೃತ ಆ ಹುಡುಗಿಯನ್ನು ಕರೆದು ನಿನ್ನ ಹೆಸರೇನು? ಇಲ್ಲಿ ಕೂತಿದ್ದವರು ರಾಜೇಶ್ ಅಲ್ಲವ? ಎಂದು ಕೇಳಿದಳು.
ಆ ಹುಡುಗಿ “ಅಪ್ಪ ನಿಮ್ಮನ್ನು ಯಾರೂ ಆಂಟಿ ಕೇಳಿಕೊಂಡು ಬಂದಿದ್ದಾರೆ”.. ಎಂದು ಹೇಳುತ್ತಾ ಒಳಗೆ ಓಡಿಹೋದಳು. ಅಮೃತ ಅನಯಾಸವಾಗಿ ಆ ಹುಡುಗಿಯ ಹಿಂದೆ ಹೋದಳು.. ಅಲ್ಲಿ ರಾಜೇಶ ಸೋಫಾದ ಮೇಲೆ ಒಂದು ಹೆಣ್ಣಿನ ಮಡಿಲಲ್ಲಿ ತಲೆ ಇಟ್ಟು ಜೋರಾಗಿ ನಗುನಗುತ್ತಾ ಹರಟೆ ಹೊಡೆಯುತ್ತಿದ್ದನ್ನು ನೋಡಿ ‘ರಾಜೇಶ್’ ಎಂದು ಜೋರಾಗಿ ಚೀರಿದಳು.
ರಾಜೇಶನು ಗಾಬರಿಯಿಂದ ಎದ್ದು ಕುಳಿತನು, ಊಹಿಸದ ಘಟನೆ ನಡೆಯಿತು, ಅವನ ರಹಸ್ಯ ಬಯಲಾಯಿತು…ಅಳುತ್ತಿದ್ದ ಅಮೃತಳನ್ನು ಸಮಾಧಾನಪಡಿಸುತ್ತಾ..ಅಮೃತ ಸ್ವಲ್ಪ ಅವಕಾಶ ಕೊಡು, ಎಲ್ಲವನ್ನು ಹೇಳುತ್ತೇನೆ ಎಂದು ಬೇಡಿಕೊಂಡ. ವಿಷಯ ಗೊತ್ತಾಗಿದ್ದು ಇಷ್ಟೇ, ರಾಜೇಶ ಹಾಗೂ ಅಮೃತ ಹನಿಮೂನ್ ಗೆಂದು ಹೋಗಿದ್ದಾಗ ಅದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಮತ್ತೊಂದು ಜೋಡಿ ರೇಖಾ ಹಾಗೂ ಪ್ರದೀಪ್.
ಹೌದು ಅಮೃತಳಿಗೆ ಈಗ ನೆನಪಾಯಿತು.. ಇವರ ಜೊತೆಯಲ್ಲೇ ಅಲ್ಲವಾ ನಾವು ನಮ್ಮ ಕಾರನ್ನು ಸುತ್ತಾಡುವುದಕ್ಕೋಸ್ಕರ ಶೇರಿಂಗ್ ಮಾಡಿಕೊಂಡಿದ್ದು . ಹೌದು ಅಲ್ಲಿಯ ಪರಿಚಯ ರಾಜೇಶ ಹಾಗೂ ಮಾಡ್ರನ್ ರೇಖಾಳನ್ನು ಹತ್ತಿರ ತಂದಿತ್ತು. ಈ ವಿಷಯ ತಿಳಿದ ರೇಖಾಳಗಂಡ ಪ್ರದೀಪ ರೇಖಾಳಿಗೆ ಡೈವರ್ಸ್ ಮಾಡಿ ವಿದೇಶಕ್ಕೆ ಹೋಗಿ ಸೆಟಲ್ ಆಗಿದ್ದ. ತರುವಾಯ ಅದೇ ರೇಖಾಳ ಜೊತೆ ರಾಜೇಶ ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಸಂಸಾರ ಮಾಡಿಕೊಂಡಿದ್ದ.. ಉಯ್ಯಾಲೆ ತೂಗುತ್ತಿದ್ದ ಹನ್ನೆರಡರ ಹುಡುಗಿ ಇವರ ಮಗಳು ಎಂದು ತಿಳಿದಾಗ ಹೃದಯ ಬಿರಿದು, ಅರೆ ಪ್ರಜ್ಞಾವಸ್ಥೆಯಂತಾಗಿ ಏನು ಮಾತು ಬಾರದೆ ಅಮೃತ ಮತ್ತೊಂದು ಆಟೋ ಹತ್ತಿ ಮನೆಗೆ ಬಂದಳು.
ದುಃಖ, ರೋಷ, ಅವಮಾನ ಎಲ್ಲವೂ ಒಟ್ಟಿಗೆ ಅವಳ ಜೀವ ಹೀರಿತ್ತು. ಮನೆಯಲ್ಲಿ ಯಾರೂ ಇಲ್ಲದ ಹೊತ್ತಲ್ಲಿ ಏನು ಮಾಡಬೇಕೆಂದು ತೋಚದೆ ಕೈಗೆ ಸಿಕ್ಕಿದಷ್ಟು ತನ್ನ ಬಟ್ಟೆಯನ್ನು ಒಂದು ಲಗೇಜ್ ಬ್ಯಾಗಿಗೆ ಹಾಕಿದಳು., ಪರ್ಸಲ್ಲಿ ಒಂದಷ್ಟು ದುಡ್ಡನ್ನು ತೆಗೆದುಕೊಂಡು. ಮನೆಗೆ ಬೀಗವನ್ನು ಹಾಕಿ ಪಕ್ಕದ ಮನೆಯವರ ಕೈಗೆ ಕೀಯನ್ನು ಕೊಟ್ಟು ಆಟೋ ಹತ್ತಿ ಬಸ್ ನಿಲ್ದಾಣಕ್ಕೆ ಹೋದಳು. ಇಂತಹ ಸಮಯದಲ್ಲಿ ಹೆತ್ತವರನ್ನು ಕಳೆದುಕೊಂಡ ತವರು ಮನೆ ಸೇರಿ, ಬಡತನದಲ್ಲಿರುವ ಅಣ್ಣ ಅತ್ತಿಗೆಗೆ ಭಾರವಾಗುವುದು ಹೇಗೆ ಎಂದು ಯೋಚಿಸಿದಳು, ಗೋಳಾಡಿದಳು. ತವರು ಮನೆಗೆ ಹೋದರೂ ಊರಿನವರೆಲ್ಲ ಬುದ್ಧಿ ಹೇಳಿ, ನೀನೇ ಹೊಂದಿಕೊಂಡು ಹೋಗು ಎಂದು ಹೇಳುತ್ತಾರೆ.
ಎಲ್ಲರ ಬಾಯಿಗೂ ನಾನು ಆಹಾರವಾಗಬೇಕು. ಇಷ್ಟು ವರ್ಷ ತನ್ನನ್ನು ಕತ್ತಲೆಯಲ್ಲಿಟ್ಟು ಮೋಸ ಮಾಡಿದವನ ಜೊತೆ, ನನ್ನ ಪ್ರೀತಿಯನ್ನು ಕೊಂದವನ ಜೊತೆ, ಬಾಳಲಾಗುವುದಿಲ್ಲ ಎನಿಸಿತು.ಆದ್ದರಿಂದ ಅಲ್ಲಿಗೆ ಹೋಗುವುದು ಬೇಡವೆಂದು ನಿರ್ಧರಿಸಿದಳು.
ಬಸ್ ನಿಲ್ದಾಣದಲ್ಲಿ ಮೈಸೂರಿಗೆ ಹೊರಡುವ ಬಸ್ ರೆಡಿ ಇದ್ದಿದ್ದರಿಂದ ಏನೂ ತೋಚದ ಉನ್ಮತ್ತ ಸ್ಥಿತಿಯಲ್ಲಿ ಬಸ್ಸನ್ನು ಹತ್ತಿ ಕಿಟಕಿಯ ಪಕ್ಕದ ಸೀಟಲ್ಲಿ ಕುಳಿತಳು. ಕಂಡಕ್ಟರ್ ಬಂದು ಎಲ್ಲಿಗೆ? ಎಂದು ಕೇಳಿದಾಗ ಲಾಸ್ಟ್ ಸ್ಟಾಪ್ಎಂದು ಹೇಳಿದಳು, ಕಂಡಕ್ಟರ್ ಮೈಸೂರಿಗೆಂದು ಟಿಕೆಟ್ ಕೊಟ್ಟನು. ಶಿವಮೊಗ್ಗದ ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು, ಮದುವೆಯಾದ ಮೇಲೆ ದಾವಣಗೆರೆ ಸೇರಿದವಳು, ಜೀವನದಲ್ಲಿ ಒಮ್ಮೆಯೂ ಮೈಸೂರನ್ನು ನೋಡಿರಲಿಲ್ಲ. ಪ್ರಯಾಣದ ಉದ್ದಕ್ಕೂ ಜೀವನದ ಸಿಹಿ ಕಹಿ ಘಟನೆಗಳು, ಅವಳನ್ನು ಎಡಬಿಡದೆ ಕಾಡಿ ಗೋಳಾಡಿಸಿತು.
ಬಸ್ ಮೈಸೂರು ಸೇರುವ ಹೊತ್ತಿಗೆ ರಾತ್ರಿ 12 ಗಂಟೆಯಾಗಿತ್ತು. ಎದೆಯಲ್ಲಿ ಆತಂಕ, ಭಯ ಏನು ಮಾಡುವುದು, ಎಲ್ಲಿ ಹೋಗುವುದು ಗೊತ್ತಿಲ್ಲ.. ರಾತ್ರಿ 12 ಗಂಟೆಯ ಕತ್ತಲು ಅವಳನ್ನು ಮತ್ತಷ್ಟು ಭಯಭೀತಳನ್ನಾಗಿ ಮಾಡಿಸಿತು. ನಾಲ್ಕು ಹೆಜ್ಜೆ ಇಡುತ್ತಿದ್ದಂತೆ ಒಬ್ಬ ಮಹಿಳೆ ಬಂದು ಕೇಳಿದಳು “ಮೇಡಂ ನೀವು ಯಾವ ಕಡೆ ಹೋಗುತ್ತಿದ್ದೀರಿ? ನಾನು ಒಬ್ಬಳೇ ಇದ್ದೀನಿ, ಕತ್ತಲೆ ಹೊತ್ತು, ಶೇರಿಂಗ್ ಆಟೋ ಪಡೆಯೋಣವ, ಎಂದಳು.
ಅಮೃತ ಎಚ್ಚರಗೊಂಡವಳಂತೆ ಹೂ ಆಗಲಿ ಎಂದಳು.. ಆ ಮಹಿಳೆ ನಾನು ಬೆಟ್ಟದ ಬಳಿ ಇರುವ ವೃದ್ರಾಶ್ರಮದಿಂದ ಸ್ವಲ್ಪಮುಂದೆ ಹೋಗಬೇಕು, ತಾವೆಲ್ಲಿಗೆ? ಎಂದು ಕೇಳಿದಳು. ಅಮೃತಳಿಗೆ ವೃದ್ಧಾಶ್ರಮ ಕೇಳಿಸಿದ್ದರಿಂದ ಅವಳು “ನಾನು ವೃದ್ಧಾಶ್ರಮದ ಬಳಿ ಇಳಿದುಕೊಳ್ಳುವೆ ಎಂದು ಹೇಳಿದಳು. ಆ ಅಪರಿಚಿತ ಹೆಂಗಸು ಆಟೋದವನಿಗೆ ಬಾಡಿಗೆ ದುಡ್ಡನ್ನು ಮಾತನಾಡಿ ಅಮೃತಳನ್ನು ವೃದ್ಧಾಶ್ರಮದ ಬಳಿ ಇಳಿಸಿ, ತಾನು ಮುಂದೆ ಹೋದಳು.
ಆಟೋ ಇಳಿದ ಅಮೃತವಳಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ರಾತ್ರಿ ಒಂದು ಗಂಟೆ ಸುಮಾರು.. ಸುತ್ತಲೂ ಕತ್ತಲೆ ಗಾಬರಿಯೊಂದಿಗೆ ಹೆಜ್ಜೆ ಇಡುತ್ತಾ ವೃದ್ಧಾಶ್ರಮದ ಗೇಟಿನ ಒಳಗಡೆ ಹೋದಳು. ದೀಪಗಳೆಲ್ಲವೂ ಆರಿದ್ದವು, ಕತ್ತಲೆಯಲ್ಲಿಯೇ ಜಗುಲಿಯ ಮೂಲೆಯಲ್ಲಿ ಗೋಡೆಗೆ ಒರಗಿ ಕುಳಿತಳು.
ಚಾಮುಂಡಿ ಬೆಟ್ಟದಿಂದ ಸುಯ್..ಎಂದು ಬೀಸುತ್ತಿದ್ದ ತಂಪಾದ ಗಾಳಿಗೆ ನಡುಕ ಪ್ರಾರಂಭವಾಯಿತು. ಬ್ಯಾಗಿನಿಂದ ಒಂದು ಸೀರೆಯನ್ನು ತೆಗೆದು ಹೊದ್ದು, ಬ್ಯಾಗನ್ನು ತಬ್ಬಿ ಮುದುಡಿಕೊಂಡು ಮೂಲೆಯಲ್ಲಿ ಕಣ್ಮುಚ್ಚಿ ಕುಳಿತಳು. ಬೆಳಿಗ್ಗೆಯಿಂದ ಉಪವಾಸವಿದ್ದು, ಆಯಾಸವಾಗಿದ್ದ ಅಮೃತಳಿಗೆ ನಿದ್ದೆ ಆವರಿಸಿತು.
ಬೆಳಗ್ಗೆ ಸುಮಾರು 5:00 ಗಂಟೆಗೆ ಅಲ್ಲಿದ್ದ ವಯಸ್ಸಾದ ಅಜ್ಜ ಅಜ್ಜಿಯರೆಲ್ಲ ವಾಕಿಂಗ್ ಗೆ ಎಂದು ಹೊರಗೆ ಬಂದಿದ್ದರು. ಮೂಲೆಯಲ್ಲಿ ಮುದುಡಿ ಕುಳಿತಿದ್ದ ಅಮೃತಾಳನ್ನು ನೋಡಿ ಅಜ್ಜಿ ಒಬ್ಬರು “ಯಾರಮ್ಮ ತಾಯಿ ನೀನು, ಇಲ್ಲೇಕೆ ಹೀಗೆ ಕೂತಿರುವೆ ?ಎಂದು ಎಬ್ಬಿಸಿದರು.. ಹಸಿದಿದ್ದ ಕಾರಣ, ಆಯಾಸವಾಗಿ ನಿತ್ರಾಣಗೊಂಡಿದ್ದಳು. ಮತ್ತೊಬ್ಬರು “ಅಯ್ಯೋ ಪಾಪ, ಮೊದಲು ಒಳಗೆ ಕರೆಯಿರಿ, ಚಳಿ ಇದೆ ಎಂದು ಕರೆದುಕೊಂಡು ಹೋಗಿ ಕಾಫಿ ಬಿಸ್ಕತ್ತನ್ನು ಕೊಟ್ಟು ಆಮೇಲೆ ವಿಚಾರಿಸೋಣ ಎಂದು ಹೇಳಿದರು.
ಹಸಿವಾಗಿದ್ದ ಅಮೃತಳ ಬಾಯಿಗೆ, ಬಿಸ್ಕತ್ ಜೊತೆ ಬಿಸಿ-ಬಿಸಿಯಾದ ಕಾಫಿ ಅಮೃತದಷ್ಟೇ ರುಚಿ ಎನಿಸಿತು. ಜೀವನದ ಅನುಭವವನ್ನು ಹೊಂದಿದ್ದ ಅವರಿಗೆ ಈಕೆ ಅತ್ತಿರುವುದರಿಂದ ಮುಖವೆಲ್ಲ ಊದಿದಂತಾಗಿದೆ, ಏನೋ ಕಷ್ಟದ ಪರಿಸ್ಥಿತಿಯಿಂದ ಬಂದಿದ್ದಾಳೆ ಎಂದು ಗ್ರಹಿಸುವುದು ಕಷ್ಟವಾಗಲಿಲ್ಲ. ಅಲ್ಲಿ ಎಲ್ಲರೂ ಕೇಳುತ್ತಿದ್ದ ಬಗೆ ಬಗೆಯ ಪ್ರಶ್ನೆಗಳಿಗೆ ಕಣ್ಣೀರು ಒಂದೇ ಉತ್ತರವಾಗಿತ್ತು. ಬೆಳಿಗ್ಗೆ7 ಗಂಟೆಯ ಸುಮಾರಿಗೆ ಆಶ್ರಮದ ಒಡತಿ ಗೌರಿ ಗಿರೀಶ್ ಬಂದರು. ಇವಳನ್ನು ನೋಡಿ ಅವರಿಗೆ ಕನಿಕರ ಮೂಡಿತು .”ನೋಡಮ್ಮ ಹೀಗೆಲ್ಲ ಆಶ್ರಮದಲ್ಲಿ ಇರಲು ಅವಕಾಶವಿಲ್ಲ. ಯಾರು ನೀನು? ಎಲ್ಲಿಂದ ಬಂದಿರುವೆ? ಎಂದು ಕೇಳಿದಾಗ ಹೆಸರು ಹೇಳಲು ಭಯಗೊಂಡಳು.
ಇವರೆಲ್ಲಾ ಸೇರಿ ಎಲ್ಲಿ ತನ್ನನ್ನು ಮತ್ತೆ ಹಿಂದಿರುಗಿ ರಾಜೇಶನ ಬಳಿಗೋ, ಅತ್ತೆಯ ಮನೆಗೆ ಕಳುಹಿಸುವರೋ ಎಂದು ಭಯಗೊಂಡು ತನ್ನನ್ನು ಬಾಲ್ಯದಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಅಮ್ಮಚ್ಚು ನೆನಪಿಗೆ ಬಂದು “ನನ್ನ ಹೆಸರು ಅಮ್ಮಚ್ಚು”ಎಂದು ಹೇಳಿದಳು.
ಎಲ್ಲರೂ ಆಶ್ಚರ್ಯವಾಗಿ ಏನು ಅಮ್ಮಚ್ಚು ಎಂದು ಕೇಳಿದರು. ನಾನು ಬಹಳ ಕಷ್ಟದಿಂದ ಬಂದಿರುವೆ, ಇಲ್ಲಿ ಯಾರನ್ನೋ ಹುಡುಕಬೇಕಿದೆ ಹಾಗೂ ಕೆಲಸಕ್ಕಾಗಿ ಬಂದಿರುವೆ ಎಂದು ಹೇಳಿದಳು. ದಯವಿಟ್ಟು ಒಂದು ವಾರ ನನಗೆ ಇಲ್ಲಿ ಇರಲು ಅವಕಾಶ ಮಾಡಿಕೊಡಿ, ನಾನು ಕೈಲಾದ ಕೆಲಸವನ್ನು ಮಾಡಿಕೊಂಡು ಇಲ್ಲಿರುತ್ತೇನೆ ಎಂದು ಗೋಗರೆಗಳು. ಅಲ್ಲಿದ್ದ ಹಿರಿಯರೆಲ್ಲರೂ ಒಪ್ಪಿಕೊಂಡಾಗ ಗೌರಿ ಗಿರೀಶ್ ಸಹ ಒಂದು ವಾರ ಇರಲು ಅನುಮತಿ ಕೊಟ್ಟರು.
ತಕ್ಷಣ ಅವರಿಗೆ ನೆನಪಾಗಿದ್ದು ಅಡುಗೆ ಅಂಬುಜಮ್ಮ ಒಂದು ವಾರ ರಜಾ ಹಾಕಿ ಮಗಳ ಮನೆಗೆ ಹೋಗಿರುವುದರಿಂದ ಅಡಿಗೆಯವರು ಇಲ್ಲವಾಗಿದ್ದರು. ಗೌರಿ “ಏನಮ್ಮ ಅಮಚ್ಚು, ನಿನಗೆ ಒಂದು 25 ಜನಕ್ಕೆ ಅಡಿಗೆ ಮಾಡಲು ಬರುತ್ತದೆಯೇ? ಎಂದು ಕೇಳಿದರು.. ಅಮೃತಾ ಖುಷಿಯಾಗಿ ಓಹೋ, ಅದಕ್ಕೇನಂತೆ 50 ಜನಕ್ಕೆ ಬೇಕಾದರೂ ಮಾಡಬಲ್ಲೆ ಎಂದಳು.
ಸರಿ ಹಾಗಿದ್ದರೆ ಅಡುಗೆ ಅಂಬುಜಾ ಬರುವವರೆಗೂ ನೀನು ಇಲ್ಲಿ ಇರಬಹುದು ಎಂದು ಹೇಳಿದರು. ಅಂತೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಹಾಗೆ ಆಯ್ತು ಎಂದು ನಿಟ್ಟಿಸಿರು ಬಿಟ್ಟಳು.ಅಲ್ಲಿ ಎಲ್ಲರಿಗೂ ಅಡಿಗೆ ತಿಂಡಿ ಕಾಫಿ ಮಾಡುತ್ತಾ ಅವರು ಹೇಳಿದ ಕೆಲಸವನ್ನೆಲ್ಲ ಪ್ರೀತಿಯಿಂದ ಮಾಡಿಕೊಂಡು ಒಂದು ವಾರದಲ್ಲಿ ವೃದ್ಧಾಶ್ರಮದಲ್ಲಿ ಇದ್ದ ಎಲ್ಲರಿಗೂ ಅಚ್ಚು ಮೆಚ್ಚಿನ ಅಮ್ಮಚ್ಚು ಆಗಿಹೋದಳು .
ಆಶ್ರಮದ ಒಡತಿ ಗೌರಿ ಪ್ರೀತಿಯ ಗಂಡ ಗಿರೀಶನನ್ನು ಕಳೆದುಕೊಂಡ ಮೇಲೆ ಒಂಟಿ ಜೀವನ ನಡೆಸಲು ಸಾಧ್ಯವಾಗದೆ ಇದ್ದಾಗ ಅವರ ಮನೆಗೆ ಸೇರಿಕೊಂಡಂತೆ ಈ ಆಶ್ರಮವನ್ನು ಕಟ್ಟಿದ್ದರು. ವಾರ ಮುಗಿಯುತ್ತಿದ್ದಂತೆ ಅಮೃತಳಿಗೆ ಭಯ ಕಾಡತೊಡಗಿತು. ಎಂದಿನಂತೆ ಬೆಳಿಗ್ಗೆ ಗೌರಿಯವರು ಬರುವ ಹೊತ್ತಿಗೆ ಎಲ್ಲರಿಗೂ ತಿಂಡಿ ಸಿದ್ದ ಮಾಡಿದ್ದಳು. ಏನಮ್ಮ ಅಮ್ಮಚ್ಚು ಅವರೆಕಾಳು ಉಪ್ಪಿಟ್ಟು, ಕಾಫಿ ಘಮ ಹೊರಗಡೆ ರಸ್ತೆ ತನಕ ಬರುತ್ತಿದೆ.. ಎಂದು ನಗುತ್ತಾ ಒಳಗೆ ಬಂದರು.
“ಅಮ್ಮಚ್ಚು ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಬಾ” ಎಂದಾಗ ಅಮೃತಳಿಗೆ ಎದೆ ಧಸಕ್ಕೆಂದಿತು. ಇವತ್ತು ಆಶ್ರಮ ಬಿಟ್ಟು ಹೋಗು ಎಂದು ಹೇಳಲು ಬಂದಿದ್ದಾರೆ ಎಂದು ಊಹಿಸಿದಳು. ಗೌರಿ ಮಾತು ಪ್ರಾರಂಭಿಸಿ .’ನಿನಗೆ ಕೆಲಸ ಸಿಕ್ಕಿತಾ ಅಮ್ಮಚ್ಚು? ಎಂದು ಕೇಳಿದರು. ಅಮೃತ ತಲೆತಗ್ಗಿಸಿ ಇಲ್ಲ ಎಂದಳು.
ನನಗೊಂದು ಸಹಾಯ ಮಾಡುತ್ತೀಯಾ ಎಂದು ಕೇಳಿದರು ಗೌರಿ. ಅಡುಗೆ ಅಂಬುಜಾ ಮಗಳು ಫೋನ್ ಮಾಡಿದ್ದಳು. ಅವರ ತಾಯಿ ಸ್ನಾನದ ಮನೆಯಲ್ಲಿ ಜಾರಿ ಬಿದ್ದು ಸೊಂಟದ ಮೂಳೆ ಮುರಿದಿದೆಯಂತೆ, ಇನ್ನು ಮುಂದೆ ಅವರು ಕೆಲಸಕ್ಕೆ ಬರೋದಿಲ್ಲ ಅಂತ ಹೇಳಿದಳು. ನಿನಗೆ ಇಷ್ಟವಿದ್ದರೆ ನೀನು ಇಲ್ಲೇ ಮುಂದುವರೆಯುತ್ತೀಯಾ? ಎಂದು ಕೇಳಿದಾಗ ಅಮೃತಳಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು.
ಇದಾದ ನಂತರ ಅವಳ ಜೀವನದಲ್ಲಿ ನಡೆದದ್ದು ಪವಾಡವೆ. ಗೌರಿಯವರಿಗೆ ಬಹಳ ಆಪ್ತಳಾಗಿ ಆಶ್ರಮದ ಪ್ರತಿಯೊಂದು ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಳು. ಅಮೃತಳ ಜೀವನದ ಘಟನೆ ಬಲ್ಲವರಾಗಿದ್ದರು. ಅವರಿಗೂ ಎಂಬತ್ತರ ಹತ್ತಿರ ವಯಸ್ಸಾದಾಗ ಆಶ್ರಮದ ಜವಾಬ್ದಾರಿಯನ್ನೆಲ್ಲ ನಂಬಿಕಸ್ಥ ಅಮೃತಳಿಗೆ ಬಿಟ್ಟುಕೊಟ್ಟರು, ಅಷ್ಟು ಹೊತ್ತಿಗೆ ಆಗಲೇ “ಅಮ್ಮಚ್ಚು ವೃದ್ಧಾಶ್ರಮ” ಎಂದೇ ಊರಿಗೆಲ್ಲ ಹೆಸರುವಾಸಿಯಾಗಿತ್ತು.
ಮನೆಯವರಿಗೆ ತೋರಿಸಿದ ಪ್ರೀತಿ ಮಮಕಾರ ನಿರರ್ಥಕವಾಗಿತ್ತು. ಬದುಕು ಬೇಡವೆನಿಸುವಂತಿತ್ತು.. ಆದರೆ ಇಲ್ಲಿ ಸಂಬಂಧವೇ ಇಲ್ಲದವರ ಜೊತೆಗಿನ ಬಾಂಧವ್ಯ, ತನ್ನಂತೆ ಪ್ರೀತಿಯಿಂದ ವಂಚಿತರಾಗಿ ಬಂದು ಸೇರಿದ್ದ ವೃದ್ಧಾಶ್ರಮದ ಸದಸ್ಯರು, ಕೊರತೆ ಇಲ್ಲದ ಪ್ರೀತಿ ವಾತ್ಸಲ್ಯವನ್ನು ಆ ಹಿರಿಯ ಜೀವಗಳು ತೋರಿಸುತ್ತಿದ್ದಾಗ ಬಯಸದೇ ಬಂದ ಭಾಗ್ಯ ಎಂದರೆ ಇದೇ ಇರಬೇಕು ಅಂದುಕೊಂಡಳು. ಕಳೆದು ಹೋದ ಬದುಕನ್ನು ಮತ್ತೆಂದು ನೆನೆಯಲಿಲ್ಲ, ಪರಿತಪಿಸಲೂ ಇಲ್ಲ. ತನ್ನ ಮನೆಯಲ್ಲಿಯೇ ಎಲ್ಲರ ತಾತ್ಸಾರಕ್ಕೆ ಒಳಗಾಗಿದ್ದ ಅಮೃತ ಈಗ ಆಶ್ರಮದಲ್ಲಿ ಎಲ್ಲರ ಅಚ್ಚುಮೆಚ್ಚಿನ ಅಮ್ಮಚ್ಚು ಆಗಿಯೆ ಉಳಿದಿದ್ದಾಳೆ, ಆಶ್ರಮದ ಜೊತೆ ತಾನು ಬೆಳೆಯುತ್ತಿದ್ದಾಳೆ.
ಸವಿತಾ ಎಸ್ ವೆಂಕಟೇಶ್. ಮೈಸೂರು.