ಬಯಲ ಬೇಲಿಯ ಆಚೆ
ಬಿಸಿಲಿಗೆ ಮರವಾಗಿ, ನೆಲಕೆ ನೆರಳಾಗಿ
ಆ….ಹೊತ್ತಿನಿಂದ ಈ….ಹೊತ್ತಿನಿವರೆಗೆ
ಕೆರ ಹೊಲೆದು ಕೆರದಂತಾದೆ
ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ
ಉಬ್ಬು ತಗ್ಗುಗಳ ತೊರೆದು
ಬೇಲಿ ಕಡಿದು
ನನ್ನ ಗುಡಿಸಲೆದರು ಹೆದ್ದಾರಿ ಹಾಸುತ್ತಿತ್ತು.
ಜಗವ ಬಗೆದು,
ಚರ್ಮವ ಸುಲಿದು
ರಟ್ಟೆ ಸೋಲಿಸಿ ಬಡಿದು,
ಮೆತ್ತಗೆ ಹದಗೊಳಿಸಿ
ಕಾಯಕದ ಚಿಮುಟಿಗೆ ಕರುಳ ದಾರವ ತೊಡೆಸಿ
ಆಕಾರ ಕೊಟ್ಟೆ.
ಪರಮಾನ್ನ ಉಂಡವರ ಪಾದ ಹೊಕ್ಕ ಕೆರ
ನನ್ನನೇ ಮರೆಯಿತು.
ಮರೆತ ಕೆರವ ಮೆಟ್ಟಿದ್ದರೆ
ಚರಿತ್ರೆಯ ಗೊಣಸಾಗಿ
ನೆಲದ ಒಡಲಲಿ ಹೂತ ದನಿಗೆ ಕೊರಳಾಗುತ್ತಿತ್ತು.
ಬಿರುಕಿರಲಿ, ಆನೆಬಿಲ್ಲಿಯ ಅಳುಕಿರಲಿ,
ಸವೆದಿರಲಿ ನವೆದಿರಲಿ,
ಸಣ್ಣದಿರಲಿ ದೊಡ್ಡದಿರಲಿ
ಎಂಥ ಪಾದವೆ ಇರಲಿ
ಬೆವರ ಪಾಲೀಷಿಗೆ ಮಿರಮಿರ ಮಿನುಗಿ
ಜೀರ್ ಜೀರ್, ಪಟಪಟಾ ಹಾಡ ಗುನುಗಿ
ಜಾತಿ,ದರ್ಮ, ವರ್ಗದ ಗಡಿ ಮೀರಿ
ಚೆನ್ನನ ತೊಡೆಯಲಿ ಅರಳಿ,
ನಿನ್ನ ತೆಲೆ ಮೆಟ್ಟಿದ ಕೆರವ ನಾ ಮೆಟ್ಟಿದ್ದರೆ ಬಸವಾ…
ದೇಹವೆ ದೇಗುಲವಾಗಿ
ದಯೆತೊಟ್ಟ ದರ್ಮಕ್ಜೆ ಲಾಂಚನವಾಗಿ
ಬೆವರ ದೇವರ ಪಟ್ಟದಲಿ
ಕಾಯಕಕೆ ಉಧೋ… ಎನ್ನುತ್ತಿತ್ತು
ನೆಲದ ಒಡಲಲ್ಲಿ
ಸಮಪಾಲ, ಸಮಬಾಳ ಬಳ್ಳಿ ಹಬ್ಬುತ್ತಿತ್ತು.
ಹೇಳಿ ಹೃದಯವಂತ ಕವಿಗಳೇ,
ಘನವೇತ್ತ ಜನರೇ ಹೇಳಿ,
ನಾ ಹೊಲೆದ ಕೆರ
ಜಗದ ಹೊಲಸನು ತಿಂದರೂ
ನಿಮಗೆ ಹೊಲಸ ಹಚ್ಚಿತ್ತೆ?
ಕಲ್ಲೆಡವಿ ನೊಂದರೂ
ನಿಮಗೆ ಗಾಯ ಕೊರೆದಿತ್ತೇ?
ನಿಮ್ಮ ಹೆಜ್ಜೆಗೆ ಹೆಜ್ಜೆಹಾಕಿ
ಗುಡ್ಡ ಬೆಟ್ಟವ ತಟ್ಟಿ
ನೆಲದ ಧೂಳನು ನುಂಗಿ
ದಿಕ್ಕು ತಪ್ಪಿ, ಹುದುಲಿಗೆ ಸಿಕ್ಕು,
ಮೂಳೆ ಮುರಿದು, ಉಂಗುಷ್ಟ ಕಿತ್ತು
ಶತ ಶತಮಾನದ ಕೀವು ಕಕ್ಕಿದ ಕೆರವ
ನಾ ಮೆಟ್ಟಿದ್ದರೆ,
ಬುದ್ದ ಬೆಳಕಿನ ಹಣತೆಯಾಗುತ್ತಿತ್ತು
ನಾನತ್ವ ತೊರೆದು ನಾವತ್ವದ ಭಾವಕೋಶ ಅರಳುತ್ತಿತ್ತು.
ಮಹಾ ಜನರೇ,
ನಿಮ್ಮ ಪಾದ ಹೊಕ್ಕ ಕೆರ ನನ್ನ ಮೈ ಕಚ್ಚಿದೆ ಈಗ
ಕೆರಕ್ಕೆ ಕಚ್ಚುವ ಚಟ ಕಲಿಸಿದವರಾರು ಸ್ವಾಮಿ?
ಎಂಬ ಪ್ರಶ್ನೆಗೆ
ಜಗದ ಬೆತ್ತಲ ನಗು ಮಾತ್ರ ಉತ್ತರ.
ಆ… ಹೊತ್ತಿಂದ ಈ… ಹೊತ್ತಿನ ತನಕ
ಕೆರ ಹೊಲೆದು ಕೆರದಂತಾದೆ
ಅಪ್ಪಿತಪ್ಪಿಯೂ ಯಾರ ಹೊಸಲ ದಾಟಲಿಲ್ಲ
ಮನೆಮುಂದಿನ ಮೂಲಿಬಿಟ್ಟು
ಮನದ ಮಂದಿರಕೆ ನುಸುಳೇ ಇಲ್ಲ
ನಾ ಹೊಲೆದ ಕೆರವ ನಾ ಮಟ್ಟಲೇ ಇಲ್ಲ. !
Read also : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ -ಪಿ.ಆರ್.ವೆಂಕಟೇಶ್
ಪಿ.ಆರ್. ವೆಂಕಟೇಶ್….