ಅದೊಂದು ದಿನ, ಅಬಲೆ ವೃದ್ಧೆಯೊಬ್ಬಳು ಬಾಬಾಸಾಹೇಬರ ಮೇಲೆ ನಂಬಿಕೆಯಿಟ್ಟು ಬರೆದ ಆ ಒಂದು ಸಣ್ಣ ಪೋಸ್ಟ್ ಕಾರ್ಡಿನ ಪತ್ರಕ್ಕೆ ಅಂಬೇಡ್ಕರ್ ಚಿಕ್ಕೋಡಿಗೆ ಬಂದರು.ಅವಳಿಗಾದ ಅನ್ಯಾಯಕ್ಕೆ ಕೋರ್ಟಿನಲ್ಲಿ ದಾವೆ ಹೂಡುತ್ತಾರೆ. ಅಷ್ಟೊತ್ತಿಗಾಗಲೇ ಬಾಬಾಸಾಹೇಬರು ಅಸ್ಪೃಶ್ಯರ ಧ್ವನಿಯಾಗಿ,ಅತ್ತ್ಯುತ್ತಮ ಕಾನೂನು ತಜ್ಞರಾಗಿ ದೇಶದ ತುಂಬೆಲ್ಲ ಚಿರಪರಿಚಿತರಾಗಿದ್ದಂತಹ ಕಾಲವದು.
ಎಲ್ಲ ಕಾಲದಲ್ಲೂ ಇರುವ ಹಾಗೆ ಅವರಿಗೆ ಪರ -ವಿರೋಧದ ಜನ ಕೂಡ ಇದ್ದರು.ಚಿಕ್ಕೋಡಿಯಲ್ಲಿ ಆ ದಿನ, ಬಾಬಾಸಾಹೇಬರು ಬಂದಿರುವ ಸುದ್ದಿ ಕೇಳಿ, ದಮನಿತ ಸಮುದಾಯಗಳ ಊರ ಜನರು ಅಂಬೇಡ್ಕರ್ ಎಂಬ ತಮ್ಮ ಮಹಾಸೂರ್ಯನನ್ನು ನೋಡಲು ತಂಡೋಪತಂಡವಾಗಿ ಬಂದರು.
ಔಪಚಾರಿಕವಾಗಿ ಮಾತುಕತೆಯಾದ ನಂತರ ಕೋರ್ಟಿಗೆ ಹೋಗುವಾಗ ಬಾಬಾಸಾಹೇಬರ ಹಿಂದಿಂದೆ ನೂರಾರು ಜನ!. ಚಿಕ್ಕೋಡಿಯ ಆ ಬೀದಿಯಲ್ಲಿದ್ದ ಚಿನ್ನದ ಆಭರಣ ರಿಪೇರಿ ಅಂಗಡಿಯಲ್ಲಿ ತಲೆತಗ್ಗಿಸಿಕೊಂಡು ಆಭರಣ ತಯಾರಿಸುತ್ತಿದ್ದವನೊಬ್ಬ ಅಸಹನೆಯಿಂದ ಬಾಬಾರತ್ತ ,ಮತ್ತವರ ಹಿಂಬಾಲಕರತ್ತ,ಮತ್ತವರ ಪ್ರೊಸೆಷನ್ ರೀತಿಯ ನಡಿಗೆಯನ್ನು ತಲೆಯೆತ್ತಿ ಅಸಹನೆಯಿಂದ ನೋಡಿದವನೆ ತನ್ನ ಕಾಲ ಬುಡದಲ್ಲಿದ್ದ ಹಳೆಯ ಚಪ್ಪಲಿಯನ್ನು ತೆಗೆದು ಅವರತ್ತ ಎಸೆಯುತ್ತಾನೆ.
ಸ್ವಲ್ಪದರಲ್ಲಿ ಬಾಬಾಸಾಹೇಬರು ಅದರಿಂದ ತಪ್ಪಿಸಿಕೊಳ್ಳುತ್ತಾರೆ.ಅರೆಕ್ಷಣ ಹೊತ್ತು ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟೊತ್ತಿಗೆ ತಮ್ಮ ಅಧಿನಾಯಕನ ಮೇಲಾದ ದಾಳಿಗೆ ಜನ ಆಕ್ರೋಶಗೊಳ್ಳುತ್ತಾರೆ.ಹೀಗೆ ಆಕ್ರೋಶಗೊಂಡ ಜನರು ಇನ್ನೇನು ಚಪ್ಪಲಿ ತೂರಿದವನ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ, ಬಾಬಾಸಾಹೇಬರು… ಆಗಬಹುದಾಗಿದ್ದ ಅನಾಹುತವನ್ನು ಕೈಸನ್ನೆ ಮೂಲಕ ತಡೆಯುತ್ತಾರೆ. ಜನರು ತಮ್ಮ ನಾಯಕನ ಮುಖವನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಾರೆ.
ಒಂದು ರೀತಿಯ ಮೌನ ಆವರಿಸಿ ಬಿಟ್ಟಿತ್ತು.
ಆಗ, ಬಾಬಾಸಾಹೇಬರು ಮೆಲ್ಲನೆ ತಮ್ಮ ಕಾಲಿನ ಬೂಟು ತೆಗೆದು ಅವನ ಅಂಗಡಿಯ ಮುಂದಿನ ಅಂಗಳದಲ್ಲಿ ಹಾಕುತ್ತಾರೆ.
ಅವರ ಹಿಂದಿದ್ದ ಜನ …..
ಒಬ್ಬೊಬ್ಬರಾಗಿ….
ತಮ್ಮ ಸವೆದುಹೋದ,
ಉಂಗುಷ್ಟ ಹರಿದು ಹೋದ ಚಪ್ಪಲಿಗಳನ್ನೂ ಎಸೆಯತೊಡಗುತ್ತಾರೆ!.
ಹೀಗೆ….ಚಪ್ಪಲಿ,
ಕೆರ,
ಮೆಟ್ಟು
ಮತ್ತೆ ಕೆಲವರ ಬೂಟುಗಳು ಸೇರಿದಂತೆ ಕಾಲ್ಮರಿಗಳ ರಾಶಿಯೇ ಅವನ ಅಂಗಡಿಯ ಮುಂದೆ ಬೀಳುತ್ತದೆ.!
ದಟ್ ಈಸ್ ಪ್ರೊಟೆಸ್ಟ್!
ಅಲ್ಲಿಗೇ ಮುಗಿಯಲಿಲ್ಲ. ಆ ಜನರೊಂದಿಗೆ ಶಾಂತವಾಗಿ, ಮೌನವಾಗಿಯೇ ಸಾಗಿದ ಬಾಬಾ ಸಾಹೇಬರು ಸೀದಾ ಹೋಗಿದ್ದು, ಚಿಕ್ಕೋಡಿಯ ಮುನಿಸಿಪಾಲಿಟಿ ಕಚೇರಿಗೆ. ಅಲ್ಲಿನ ಅಧಿಕಾರಿಗೆ ಒಂದು ಅರ್ಜಿ ಕೊಟ್ಟು, ಆ ಅರ್ಜಿಯಲ್ಲಿ, ಘಟನೆಯ ವಿವರಗಳನ್ನು ಹೇಳಿ ಕೊನೆಗೆ,
” …….ಈ ದಿನ ಆದ ಘಟನೆಯು ಹೊಸದೇನೂ ಅಲ್ಲ, ಆದರೆ ಆತ ಆಭರಣ ರಿಪೇರಿಯವ, ತನ್ನ ಅರಿವಿನ ಕೊರತೆಯಿಂದ ಹೀಗೆ ಮಾಡಿರಬಹುದು. ಅದಕ್ಕೆ ಪ್ರಾಯಶ್ಚಿತ್ತವೆಂಬಂತೆ ಆತನ ಮನೆ ಮತ್ತು ಅಂಗಡಿಯ ಮುಂದೆ ಬಿದ್ದ ಚಪ್ಪಲಿಗಳನ್ನು ಆತನೇ ತೆಗೆಯಲಿ. ಯಾವ ಕಾರಣಕ್ಕೂ ತಾವುಗಳು ಈ ಕೆಲಸಕ್ಕೆ ಸರ್ಕಾರದ ಪೌರ ಕಾರ್ಮಿಕರನ್ನು ನೇಮಿಸದಿರಿ…”ಎಂದು ಮನವಿ ಪತ್ರ ಕೊಟ್ಟು ಬಂದರು.
Read Also: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
2.
ಭಾರತದ ಪ್ರಪ್ರಥಮ ಬೌದ್ಧ ಧರ್ಮೀಯ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರು ಬುಲ್ಡೋಜರ್ ನ್ಯಾಯದ ವಿರುದ್ಧ ತೀರ್ಪು ನೀಡಿ ಸಂವಿಧಾನವನ್ನು ಎತ್ತಿಹಿಡಿದರು. ಅಂಬೇಡ್ಕರ್ ವಾದಿ ಅವರ ತಾಯಿ ಸಂಘ ಪರಿವಾರದ ಶತಮಾನೋತ್ಸವ ಸಮಾರಂಭಕ್ಕೆ ಅತಿಥಿಯಾಗಲು ನಿರಾಕರಿಸಿದರು. ವಿಷ್ಣು ಮೂರ್ತಿ ಭಗ್ನಗೊಂಡ ಪ್ರಕರಣದ ವಿಚಾರಣೆಯಲ್ಲಿ ಆರ್ಕಿಯಾಲಾಜಿಕಲ್ ಇಲಾಖೆಯ ಅನುಮತಿ ಅಗತ್ಯ ಮತ್ತು ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲದಿರುವುದಿಲ್ಲವೆಂದು ನ್ಯಾಯಾಲಯದಲ್ಲಿ ಹೇಳಿರುವುದು ….
ಅವರ ಮೇಲಿನ ಅಸಮಾಧಾನಕ್ಕೆ ಹೀಗೆ ಕಾರಣಗಳು ನೂರಾರು. ಆದರೆ ಬಹುದೊಡ್ಡ ಹೇಳಿಕೊಳ್ಳಲಾಗದ ಅಸಮಾಧಾನವೆಂದರೆ ಅದು ಜಾತಿ!. ಇದರ ಅಸಹನೆಯ ಬಿಸಿಯನ್ನು ಅನುಭವಿಸಿದವರಿಗ ಮಾತ್ರ ಗೊತ್ತು. ನಿನ್ನೆಯ ದಿನ ರಾಜೇಶ್ ಕಿಶೋರ್ ಎಂಬ ಎಪ್ಪತ್ತೆರೆಡು ವರ್ಷ ವಯಸ್ಸಿನ ಡಾಕ್ಟರೇಟ್ ಪದವಿ, ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮ ಮತ್ತಿತರ ಪದವಿಗಳನ್ನು ಪಡೆದಾತ. ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರೆಡೆಗೆ ಶೂ ತೂರುವ ಪ್ರಯತ್ನ ಮಾಡಿದನಂತೆ.
ಬುದ್ಧ ಮಾರ್ಗಿಯಾದ ನ್ಯಾಯಮೂರ್ತಿಗಳು ಆ ವ್ಯಕ್ತಿಯ ಮೇಲೆ ಕೇಸ್ ದಾಖಲಿಸದೆ,ಕ್ಷಮಿಸಿ ಕಳುಹಿಸಿದರೆಂದು ವರದಿಯಾಗಿದೆ. ಮುಂದೆ ವಯೋವೃದ್ಧ ಸನಾತನಿ ವಕೀಲ,ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಕೂಗುತ್ತಿದ್ದಾನೆ. ಜೊತೆಗೆ ದೇವರು ಹೇಳಿದಂತೆ ನಡೆದುಕೊಂಡಿದ್ದೇನೆ ಎಂಬ ಮಾತುಗಳನ್ನು ಆಡಿದ್ದಾನೆ.
***
ಗಾಂಧಿಯನ್ನು ಕೊಂದವರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಅದೇ ಪರಿವಾರದ ಜನ, ಇಷ್ಟು ದಿನ ನೇಪಥ್ಯದಲ್ಲಿದ್ದ ಅದೇ ಜನ, ಇಂದು ಗಾಂಧಿಯನ್ನು ಹತ್ಯೆಗೈದೆವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲಘಟ್ಟಕ್ಕೆ ತಲುಪಿದ್ದಾರೆ. ಸಂಘ ಪರಿವಾರ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಕಾಲದಲ್ಲಿ ತೂರಿ ಬರಲು ತಯಾರಾದ ಬೂಟು ಅಸ್ತವ್ಯಸ್ತಗೊಂಡ ಭಾರತದ ಸಂಕೇತದಂತೆ ಕಾಣಿಸುತ್ತಿದೆ.
ನರವಿಕಲ್ಪಕ್ಕೆ ಒಳಗಾದವನಂತೆ ಕಾಣುವ ,ಬೂಟು ತೂರಲು ಯತ್ನಿಸಿದ ವಕೀಲ, ಮತ್ತವನ ಬೂಟು ಆ ಶತಮಾನೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾದರೂ ಆಶ್ಚರ್ಯವಿಲ್ಲ!
***
ಈ ಹೊತ್ತು, ಹಿಂದೂಗಳು ಅಷ್ಟೆ, ಮುಸ್ಲಿಮರೂ ಅಷ್ಟೆ.,ಕ್ರಿಶ್ಚಿಯನ್ನರೂ ಕೂಡ. ಈ ಯಾವ ಧರ್ಮಗಳೂ ತಮ್ಮ ನಿಜವಾದ ದೇವರುಗಳ ಹುಡುಕಾಟವನ್ನೇ ಬಿಟ್ಟು ಬಿಟ್ಟಿವೆ. ಧರ್ಮಗಳಲ್ಲಿ, ದೇವರು ಮತ್ತು ಮನುಷ್ಯರೊಂದಿಗೆ ಸಂವಾದಗಳೇ ಇಲ್ಲದ ಕಾಲದಲ್ಲಿ ನಾವು ಇದ್ದೇವೆ. ಮೊದಲಾದರೆ ಹಿಂದುಗಳ ಜಾತ್ರೆಯಲ್ಲಿ ಅನ್ಯ ಧರ್ಮೀಯರೂ ಭಾಗವಹಿಸೋರು. ಮುಸ್ಲಿಮರ ರಮಜಾನಿನ ಊಟಕ್ಕೆ ಹಿಂದೂಗಳೇ ಅತಿಥಿಗಳು. ಇಂಥಾ ಭಾರತವೀಗ ಬದಲಾಗಿ ಹೋಗಿದೆ. ಧರ್ಮಾಧಾರಿತ ಓಟುಗಳು ಎಂದೂ ಸೀಟುಗಳನ್ನು ಸೃಜಿಸುತ್ತಿರಲಿಲ್ಲ.ಆದರಿಂದು ಧರ್ಮದ ಒಂದು ಘೋಷಣೆ,ಆಚರಣೆ,ಒಂದು ಮೆರವಣಿಗೆ,ಶೋಭಾಯಾತ್ರೆ, ಸಾಕು-ಓಟುಗಳು ಪಾರ್ಲಿಮೆಂಟಿನ ಸೀಟುಗಳಾಗಿಬಿಡುತ್ತವೆ.ಇದು ಅಪಾಯಕಾರಿ.
ಕೋಮು ಆಧಾರದ ಮೇಲಿನ ರಾಜಕಾರಣವನ್ನು ವಿರೋಧಿಸಲು ಸ್ವಾತಂತ್ರ್ಯಪೂರ್ವದಲ್ಲಿ ಕೆಲ ಸುಧಾರಣಾವಾದಿ ಆಂದೋಲನಗಳಾದರೂ ಇದ್ದವು.ಅದಕ್ಕೂ ಹಿಂದೆ ಬುದ್ಧನ ನೆನಪುಗಳಿದ್ದವು, ಬಸವನಿದ್ದ, ಕನಕ, ಕಬೀರ, ನಾರಾಯಣಗುರು,ಶರೀಫರಿದ್ದರು.
ಈಗ ಎಲ್ಲವೂ ಚುನಾವಣಾಮಯ!
ಬೂಟು-ತೂರಿದ ವಕೀಲ;
ಸನಿಹದಲ್ಲಿಯೇ ಕೆಲ ರಾಜ್ಯಗಳಲ್ಲಿ ಚುನಾವಣೆಗಳು ಘೋಷಣೆಯಾಗಿವೆ.
ಇಷ್ಟು ಸಾಕಲ್ಲವೆ?
***
ನಿನ್ನೆಯಿಂದ ಗೆಳೆಯರು ‘ಏನಣ್ಣಾ…ಇದು ಹಿಂಗಾತು,ಕಾನ್ಷ್ಟಿಟ್ಯೂಷನಲ್ ಹೆಡ್ ಅವರಿಗೇ ಹೀಗಾದರೆ ಸಾಮಾನ್ಯರ ಗತಿಯೇನು?’ಎಂದು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ.
ಅದಕ್ಕೆ, ನಮ್ಮ ದೇಶ ಎಷ್ಟು ಕೆಟ್ಟು ಹೋಗಿದೆ ಎಂದರೂ ನಾವು ಮಾಡಬೇಕಾದ ಕೆಲವು ಕೆಲಸಗಳಿವೆ ಎಂದು ಲೋಹಿಯಾ ಅವರ ಕೊನೆಗಾಲದ “ನಿರಾಶಾ ಕಾಲದ ಕರ್ತವ್ಯಗಳು” ಪುಸ್ತಕದಲ್ಲಿ ಹೇಳಿರುವುದನ್ನು ಮತ್ತೆ ನೆನಪಿಸಲಷ್ಟೇ ಸಾಧ್ಯವಾಯಿತು.
- ಬಿ.ಶ್ರೀನಿವಾಸ