ದಾವಣಗೆರೆ.ಡಿ.13: ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಡಿ.15 ರಿಂದ 17 ರವರೆಗೆ 3 ದಿನಗಳ ಕಾಲ ಶ್ರೀ ಉಮಾ ಮಹೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ.
ನಾಗನೂರು ಮತ್ತು ಶಿರಮಗೊಂಡನಹಳ್ಳಿ ಗ್ರಾಮದ ಭಕ್ತಾದಿಗಳಿಂದ 3 ದಿನಗಳ ಕಾಲ ನಡೆಯಲಿರುವ ಜಾತ್ರೆಗಾಗಿ ನಾಗನೂರು ಗ್ರಾಮ ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಡಿ.15 ರ ನಾಳೆ ಬೆಳಗ್ಗೆ 6 ಕ್ಕೆ ಶ್ರೀ ಉಮಾ ಮಹೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಸಾಯಂಕಾಲ ಭಕ್ತರಿಂದ ಜವಳ, ಹರಕೆ ಅರ್ಪಿಸುವುದು ಮತ್ತು ಕಾರ್ತಿಕ ಕದಳಿ ಮಂಟಪದಲ್ಲಿ ಶ್ರೀ ಉಮಾ ಮಹೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ಪವಡಿಸಲಿವೆ.
ನಂತರ ಶಿರಮಗೊಂಡನಹಳ್ಳಿಯ ಶ್ರೀ ಚನ್ನಬಸವೇಶ್ವರ ಸ್ವಾಮಿಯನ್ನು ಡೊಳ್ಳು-ಮೇಳಗಳಿಂದ ನಾಗನೂರು ಗ್ರಾಮಸ್ಥರು ಬರಮಾಡಿಕೊಂಡು ಮೆರವಣಿಗೆ ಸಮೇತ ವಿರಾಮ ಮಂಟಪದಲ್ಲಿ ಪವಡಿಸುವುವು ಅದೇ ದಿನ ರಾತ್ರಿ ಕೋಲಾಟ, ವೀರಗಾಸೆ, ಭಜನೆ ಇತ್ಯಾದಿ ನಡೆಯಲಿವೆ.
Read also : ನಕಲಿ ಬಂಗಾರ ವಂಚನೆ ಪ್ರಕರಣ:ಇಬ್ಬರ ಬಂಧನ
16 ರಂದು ಉರುಳು ಸೇವೆ, ಸ್ವಾಮಿಯನ್ನು ನಡೆ ಮಡಿಯಿಂದ ತೋಟದ ಮಠಕ್ಕೆ ಕರೆದೊಯ್ಯುವುದು. ನಂತರ ಗಂಗಪೂಜೆ, ಪ್ರಸಾದ ವಿನಿಯೋಗ, ಮಧ್ಯಾಹ್ನ ಬೆಲ್ಲದ ಬಂಡಿ ಎತ್ತುಗಳನ್ನು ಡೊಳ್ಳು-ಹಲಗೆ ಮೆರವಣಿಗೆ ಮತ್ತು ರಾತ್ರಿ 7 ರಿಂದ ಶ್ರೀ ದುರುಗಮ್ಮನ ಕಾರ್ತಿಕೋತ್ಸವ ಜರುಗಲಿದೆ.
ಡಿ. 17 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಠದಲ್ಲಿ ಪ್ರಸಾದ ವಿನಿಯೋಗ, ಮಧ್ಯಾಹ್ನ ಎತ್ತುಗಳ ಮೆರವಣಿಗೆ, ಸಂಜೆ ಮುಡುಪು, ಹರಕೆಯನ್ನು ತೋಟದ ಮಠಕ್ಕೆ ಮೆರವಣಿಗೆ ಮುಖಾಂತರ ಅರ್ಪಿಸುವುದು ಮತ್ತು ಮಠದ ಗದ್ದಿಗೆಯಿಂದ ಸ್ವಾಮಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿಯ ಮೆರವಣಿಗೆಯೊಂದಿಗೆ ಊರೊಳಗೆ ಬರಮಾಡಿಕೊಳ್ಳುವುದು. ನಂತರ ಬಾವುಟ ಹರಾಜು ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
