ಆಕಾಶದ ನೀಲಿಯಲಿ
ಚಂದ್ರ ತಾರೆ ತೊಟ್ಟಿಲಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರಷ್ಟೇ ಸಾಕೆ
ಜಿ.ಎಸ್. ಶಿವರುದ್ರಪ್ಪರವರ ಕವಿವಾಣಿಯಂತೆ ನೋವ ನೆರಿಗೆಯಾಗಿಸಿಕೊಂಡ ಪ್ರತಿಯೊಬ್ಬರ ಬದುಕಲ್ಲಿ ಹೆಣ್ಣು ತಾಯಿಯಿಂದ ಹಿಡಿದು ಮಡದಿಯವರೆಗೆ ವಿವಿಧ ಸ್ಥಾನಗಳಲ್ಲಿ ಅಲಂಕರಿಸಿ ಗಂಡಿನ ಆತ್ಮಬಲ ಹೆಚ್ಚಿಸುವ ಶಕ್ತಿವರ್ಧಕವಾಗಿದ್ದಾಳೆ. ಅವನು ಎಷ್ಟೇ ಬಲಿಷ್ಠನಾಗಿದ್ದರು, ಬದುಕು ಅಯೋಮಯವಾಗಿ ಭಾವದ ಬಿತ್ತಿಗಳು ತಲ್ಲಣಗೊಂಡು ತತ್ತರಿಸುತ್ತವೆ .
ನೀನು ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ… ಏನೆಲ್ಲಾ ಸಾಧನೆಯ ಶಿಖರ ಏರಿದ್ದರೂ ಸಹ ನನ್ನ ಗರ್ಭದಿಂದಲೇ ಬಂದಿರುವೆ ಎಂಬುದು ಸದಾ ಸ್ಮರಣೆಯಲ್ಲಿಸಿಕೊಂಡು ಮುಂದೆ ಸಾಗಬೇಕಾದುದು ಸಂಸ್ಕಾರಯುತ ಕರ್ತವ್ಯ.
ಮಾಂಸದ ಮುದ್ದೆಯಂತಹ ಭ್ರೂಣಕ್ಕೆ ಜೀವವನ್ನಷ್ಟೇ ಅಲ್ಲ, ಜೀವನವನ್ನು ನೀಡಿದ್ದೇನೆ. ಲಾಲನೆ – ಪಾಲನೆ ಮಾಡಿ ಸಾಕಿ ಬೆಳೆಸಿ ಜಗತ್ತಿಗೆ ನಿನ್ನನ್ನು ಪರಿಚಯಿಸಿದ್ದೇನೇ ಸಮರ್ಪಣಾ ಭಾವದಿಂದ ಬೀರುವ ಮಂದಹಾಸದ ಮೇಲೆ ನಿನ್ನ ಕರಿನೆರಳ ಛಾಯೆಯನ್ನು ಮೂಡಿಸಬೇಡ .
ಅರಳುಗಣ್ಣಿನ ಆಸೆಗಳಿಗೆ ಹರಳಿನ ಚೂರಾಗಿ ಚುಚ್ಚಬೇಡ
ತಾಯಿ , ಅಕ್ಕ – ತಂಗಿ, ಹೆಂಡತಿ, ಮಗಳ ರೂಪದಲ್ಲಿದ್ದೇನೆಯಲ್ಲವೇ..? ಸುಕೋಮಲ ಕಾಯದ ಪುಷ್ಪದಂತ ನನ್ನ ಹೆಜ್ಜೆ – ಹೆಜ್ಜೆಗೂ ಕೆಂಗಣ್ಣಿನಿಂದ ನೋಡಿ ದಹಿಸಬೇಡ , ಕಣ್ಣಿನ ಕಿಚ್ಚಿಗೆ ಕಮರುವಂತ ಸೂಕ್ಷ್ಮ ಸಂವೇದನಾಶೀಲಾ ಸ್ವಭಾವದ ಹಾಲುಗಲ್ಲದ ಹಸುಳೆ ಎನ್ನದೆ ಕಿತ್ತು ತಿನ್ನುವ ಪೈಶಾಚಿಕ ಕೃತ್ಯಕ್ಕೆ ನೀನು ಮುಂದಾಗುವಾಗ, ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡುವಾಗ , ಸಜೀವ ದಹನ ಮಾಡುವಾಗ, ನಿನ್ನಲ್ಲೇ ಅಡಗಿಕೊಂಡು ಗುಪ್ತಗಾಮಿನಿಯಂತೆ ಪ್ರವಹಿಸುವ ನೋವ್ವು, ಸಂಕಟ ಪ್ರಚೋದನೆಗೊಳ್ಳದಿರಲು ಕಾರಣವಾದರೂ ಏನಿರಬಹುದು..?
ಒಂದು ಬಾರಿ ಬಂದು ನೋಡು ಈ ಸುಂದರ ಜಗತ್ತಿನಲ್ಲಿ ಅರಳಿ ಘಮಘಮಿಸುವ ಹೂದೋಟದಂತ ನನ್ನ ಇಡೀ ಬದುಕನ್ನೇ ನಿನಗಾಗಿಯೇ ಅರ್ಪಿಸಲು ಕಾಯುತ್ತಿದ್ದೇನೆ .
ಸಂಯಮಶೀಲ ಅರ್ಪಣಾ ಭಾವಕ್ಕೆ, ಸಹಚಾರಿಕೆಗೆ ನಿನ್ನಿಂದ ಬಯಸುವುದಾದರೂ ಏನು..? ಕೇವಲ ಸ್ನೇಹ – ಪ್ರೀತಿ ಮಾತ್ರ. ಪ್ರತಿಯೊಂದು ರಂಗದಲ್ಲೂ ಸಹ ನಿನ್ನಷ್ಟೇ ಸರಿಸಮಾನವಾಗಿ ದುಡಿಯಬಲ್ಲ ಚಾಕಚಕ್ಯತೆಯನ್ನು ಹೊಂದಿದ್ದರು, ಬುದ್ಧಿಮತ್ತೆಯಲ್ಲಿ ಮೇಲಿದ್ದರೂ, ನೀನು ಕೈಚೆಲ್ಲಿದರೂ ಸಹ ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತು ಸಾಗುವ ದಣಿವರಿಯದ ದಯಾವಂತೆಯಾದ ನನ್ನ ದಾರಿಯಲ್ಲಿ ಹೂವು ಬಳ್ಳಿಗಳು ಸ್ವಾಗತಿಸದೆ ತೊಡರುಗಾಲು ಹಾಕಿದ್ದು ಖೇದನೀಯ ಸಂಗತಿ. ಹಂಚಿದಷ್ಟು ಇಮ್ಮಡಿಯಾಗುವ ಸ್ನೇಹ – ಪ್ರೀತಿಯಿಂದ ನಡೆಸಿಕೊಂಡಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ.
ಗೀತಾಮಂಜು ಬೆಣ್ಣೆಹಳ್ಳಿ
ಶಿಕ್ಷಕಿ ,ಕವಯಿತ್ರಿ
ಸ. ಹಿ. ಪ್ರಾ. ಶಾಲೆ, ಬೆಣ್ಣೆಹಳ್ಳಿ
ಜಗಳೂರು. ತಾ.
ದಾವಣಗೆರೆ. ಜಿ.