ದಾವಣಗೆರೆ (Davanagere): ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ಮೀಸಲಿಟ್ಟಿರುವ ಅನುದಾನ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (AIMIM) ದಾವಣಗೆರೆ ಶಾಖೆಯ ಪ್ರತಿನಿಧಿ ಮಂಡಳಿಯು ಅಲ್ಪಸಂಖ್ಯಾತ ಅಧಿಕಾರಿ ಮೂಲಕ ಸಚಿವ ಬಿ.ಝಡ್, ಜಮೀರ್ ಅಹಮದ್‍ಖಾನ್ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಅಲಿ ಶೋಯಬ್ ಮಾತನಾಡಿ, ಪ್ರಸ್ತುತ 2024-25ನೇ ಸಾಲಿಗೆ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗೆ ₹3,059.84 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ, ಅದರಲ್ಲಿ ಕೇವಲ ₹ 1,505.72 ಕೋಟಿ ಮೊತ್ತ ಮಾತ್ರ ವಿನಿಯೋಗವಾಗಿದೆ. ಸುಮಾರು ₹1,276.29 ಕೋಟಿ ಅನುದಾನ ಇನ್ನೂ ಖರ್ಚಾಗದೆ ಉಳಿದಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದರು.
ಆದ್ದರಿಂದ ಈ ಕೂಡಲೇ ಉಳಿದಿರುವ ₹1,276.29 ಕೋಟಿ ಮೊತ್ತವನ್ನು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಪೂರ್ಣವಾಗಿ ಬಳಸಲು ತಕ್ಷಣ ಕ್ರಮ ಕೈಗೊಳ್ಳಬೇಕು, ಅನುದಾನದ ಯೋಜನೆವಾರು ಲೆಕ್ಕಪತ್ರ ಜನತೆಗೆ ಮತ್ತು ಸಂಬಂಧಿತ ಸಮಿತಿಗಳಿಗೆ ಜಾರಿಗೆ ತರಬೇಕು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಗಳ ಸದುಪಯೋಗ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಬೇಡಿಕೆಗಳ ಮನವಿ ನೀಡಿ ಒತ್ತಾಯಿಸಿದರು.
ಸರ್ಕಾರವು ಪ್ರಾಮಾಣಿಕವಾಗಿ ಈ ಅನುದಾನವನ್ನು ಸಮರ್ಪಕವಾಗಿ ಬಳಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಎಂಐಎಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಮತುಲ್ಲಾ, ಜಿಲ್ಲಾ ಸಮಿತಿಯ ಸದಸ್ಯ ಸನೌಲ್ಲಾ, ತಾಲೂಕು ಅಧ್ಯಕ್ಷ ಅಯೂಬ್ ಖಾನ್, ತಾಲೂಕು ಯುವ ಅಧ್ಯಕ್ಷ ತಾಹೀರ್ ಉಪಸ್ಥಿತರಿದ್ದರು.
Read also : Crime news | ಮನೆ ಕಳ್ಳತನ: ಆರೋಪಿ ಬಂಧನ