ದಾವಣಗೆರೆ ನ.26: ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕಾದರೆ ಶಿಕ್ಷಣದ ಜತೆಗೆ ಶಿಸ್ತು, ಸಂಯಮ ಹಾಗೂ ಉತ್ತಮ ಸಂಸ್ಕಾರದ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು ಎಂದು ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷ ಸಿ.ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕುವೆಂಪು ನಗರದಲ್ಲಿನ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ “ಮಕ್ಕಳ ಹಬ್ಬ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.
ನೆಹರೂ ಅವರ ಜನ್ಮದಿನದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಅದರಂತೆ ಇಂದು ಮಕ್ಕಳ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಆರ್ಟಿಕಲ್ 21 ರಡಿ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ಕಲ್ಪಿಸಿದೆ. ಯಾವುದೇ ಒಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸಂವಿಧಾನದ ಆಶಯ. ಆದರೂ ಇತ್ತೀಚೆಗೆ ಮಕ್ಕಳ ಮೇಲೆ ಹಲ್ಲೆ, ವಿವಿಧ ರೀತಿಯ ದೌರ್ಜನ್ಯ ಪ್ರಕರಣ ನಡೆಯುತ್ತಲೇ ಇವೆ. ಅದರಲ್ಲೂ ಅಪ್ರಾಪ್ತ ಮಕ್ಕಳ ಮೇಲೆ ಪೋಕ್ಸೋ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಿಸುವ ಸಲುವಾಗಿ ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ಕಾಯ್ದೆ, ಬಾಲಕಾರ್ಮಿಕ ನಿಷೇಧ, ಪೋಕ್ಸೋ ಹೀಗೆ ಹಲವು ವಿಶೇಷ ಕಾಯ್ದೆ ರೂಪಿಸಿರುವುದಲ್ಲದೇ ವಿಶೇಷ ನ್ಯಾಯಾಲಯಗಳನ್ನು ಸಹ ಸ್ಥಾಪಿಸಿದೆ. ಪೋಷಕರು, ಶಿಕ್ಷಕರು ಮಕ್ಕಳನ್ನು ಶೋಷಣೆಗೆ ಒಳಪಡಿಸದೇ, ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳ ಸರಿ ತಪ್ಪುಗಳನ್ನು ತಿಳಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕ ವ್ಯಕ್ತಿಗಳಾಗಿ ಬಾಳುವಂತೆ ಅವರ ಬದುಕು ರೂಪಿಸಬೇಕು ಎಂದರು.
Read also : ಮಾನವನಷ್ಟೇ ಪರಿಸರವೂ ಪ್ಲಾಸ್ಟಿಕ್‌ನಿಂದ ಉಸಿರುಗಟ್ಟಿದೆ:ಜಿ.ಎಂ.ಗಂಗಾಧರಸ್ವಾಮಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರ್ಣಿಮಾ ಮಾತನಾಡಿ, ಮಕ್ಕಳು ಶಿಸ್ತು ಬದ್ಧ ಜೀವನ ರೂಢಿಸಿಕೊಂಡಲ್ಲಿ ತಮ್ಮ ಜೀವನದುದ್ದಕ್ಕೂ ಯಶಸ್ವಿಯಾಗಿ ಬದುಕಬಹುದು. ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಉತ್ತಮ ನಾಗರಿಕ ವ್ಯಕ್ತಿಯಾಗಿ ಬಾಳುವುದರೊಂದಿಗೆ ಇಲಾಖೆ, ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾದ ಸಿ.ನಾಗೇಶ್ ಅವರು ಸಂವಿಧಾನ ಪೀಠಿಕೆ ಭೋದಿಸಿದರು. ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಟಿ.ಎನ್.ಕವಿತಾ ಸ್ವಾಗತಿಸಿದರು.
ಈ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ಮಂಜುಳ, ಸದಸ್ಯರಾದ ಡಿ.ಕರಿಯಮ್ಮ, ಎಂ.ನಾಗರಾಜ್ ನಾಯ್ಕ್, ಬಾಲ ನ್ಯಾಯ ಮಂಡಳಿ ಸದಸ್ಯೆ ವಿಜಯಮಾಲ ಮತ್ತಿತರರು ಉಪಸ್ಥಿತರಿದ್ದರು.
