ಶಿವಮೊಗ್ಗ: ಮಿಲಿಂದ ಸಂಸ್ಥೆ (ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ)ಯಿಂದ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಒಬ್ರು ಸುದ್ಯಾಕೆ, ಒಬ್ರು ಗದ್ಲ್ಯಾಕೆ ಸಮಗ್ರ ಕೃಥಾ ಸಂಕಲನ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ ಪ್ರೆಸ್ ಟ್ರಸ್ಟ್ ಭವನದಲ್ಲಿ ನಡೆಯಿತು.
ಕತೆಗಳಲ್ಲಿ ನಿಷ್ಠುರತೆ, ಜೀವ ಪರತೆಯಿದೆ
ಚಿಂತಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಜಾಹ್ನವಿ ಅವರು ಕನ್ನಡದ ಅತ್ಯುತ್ತಮ ಲೇಖಕಿಯರಲ್ಲಿ ಒಬ್ಬರು. ಅಂತಹ ಕತೆಗಳನ್ನು ಅವರು ಮಾತ್ರ ಬರೆಯಲು ಸಾಧ್ಯ. ಅವರ ಕತೆಗಳಲ್ಲಿ ನಿಷ್ಠುರತೆ, ಜೀವ ಪರತೆ, ಶ್ರದ್ಧೆ ಕಾಣುತ್ತದೆ. ಒಬ್ಬ ಶ್ರೇಷ್ಠ ಲೇಖಕನ ಗುಣವೇ ಡಿಸ್ಟರ್ಬ್ ಮಾಡುವಂಥದ್ದು. ಅಂತಹ ಗುಣ ಕನ್ನಡದ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಕತೆಗಳಲ್ಲಿ ಕಾಣಬಹುದು ಎಂದರು.
ಅಪರೂಪದ ಬರಹಗಾರ್ತಿ ಜಾಹ್ನವಿ
ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್, ಜಾಹ್ನವಿ ಅವರು ಲಂಕೇಶರ ಬಯಲಲ್ಲಿ ಬೆಳಗಿದವರು. ಅವರ ಕುಲುಮೆಯಿಂದ ಎದ್ದು ಬಂದಂತೆ ಕತೆಗಳನ್ನು ಬರೆದ ಅವರು ಸ್ತ್ರೀ ಸ್ಪಂದನೆಗೆ ಒತ್ತು ಕೊಟ್ಟು ವಿಭಿನ್ನವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು. ಎರಡು ದಶಕಗಳ ಕಾಲ ಬರೆದಿರುವ ಅವರು ಒಬ್ಬ ಅಪರೂಪದ ಬರಹಗಾರ್ತಿ. ಅವರ ಬರವಣಿಗೆಯಲ್ಲಿ ಅವಸರವಿದೆ. ಸಂಪ್ರದಾಯಕ್ಕೆ ಹೊಡೆತವಿದೆ. ರೂಢಿಗತ ಮೌಲ್ಯಗಳನ್ನು ಧಿಕ್ಕರಿಸಿ ಮಾನವೀಯತೆಗಳು ಅವರ ಕೃತಿಯಲ್ಲಿ ಅಡಗಿವೆ ಎಂದು ಬಣ್ಣಿಸಿದರು.
ಬಿ.ಟಿ.ಜಾಹ್ನವಿ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕ, ಮಿಲಿಂದ ಸಂಸ್ಥೆ ಮುಖ್ಯಸ್ಥ ಬಿ.ಎಲ್.ರಾಜು, ಮಿಲಿಂದ ಸಂಸ್ಥೆ ಗೌರವಾಧ್ಯಕ್ಷ ಎ.ಕೆ.ಅಣ್ಣಪ್ಪ, ಮಾನವ ಬಂಧುತ್ವ ವೇದಿಕೆಯ ಎ.ಬಿ.ರಾಮಚಂದ್ರಪ್ಪ, ಪೆÇ್ರ. ರಾಚಪ್ಪ, ರಜೀಯಾ ಇತರರ ಇದ್ದರು.