ದಾವಣಗೆರೆ: ವ್ಯಕ್ತಿಯೊಬ್ಬರಿಗೆ ಅನಾಮಧ್ಯೇಯ ವ್ಯಕ್ತಿಗಳು ಫೋನ್ ಮಾಡಿ, ಆನ್‌ಲೈನ್ ಮೂಲಕ 3,57,780 ರೂ. ವಂಚನೆ ಮಾಡಿರುವ ಬಗ್ಗೆ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆಯ ನಿವಾಸಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ತಾನು ಫೆಡಕ್ಸ್ ಕೋರಿಯರ್‌ನ ಉದ್ಯೋಗಿ ಎಂದು ಪರಿಚಯಿಸಿಕೊಂಡು, ನೀವು ಕೋರಿಯರ್ ಮೂಲಕ ಮಾದಕ ವಸ್ತುಗಳನ್ನು ಮುಂಬೈಯಿಂದ ತೈವಾನ್‌ಗೆ ಕಳುಹಿಸುತ್ತಿದ್ದೀರಾ. ಮಾದಕ ವಸ್ತು ಹಾಗೂ ಟ್ರಾವಲಿಂಗ್ ಪಾಸ್ ಪೋರ್ಟ್‌ಗೆ ಸಂಬಂಧಿಸಿರುವುದಿರಂದ ಮುಂಬೈ ಪೊಲೀಸರಿಗೆ ಸಂಪರ್ಕಿಸುವುದಾಗಿ ಹೇಳಿ, ಕಾನ್ಫರೆನ್ಸ್ ಕಾಲ್ ಮೂಲಕ ಯಾರೋ ಪೊಲೀಸ್ ಅಧಿಕಾರಿಯವರಿಗೆ ಸಂಪರ್ಕಿಸುವುದಾಗಿ ಹೇಳಿ ನಂಬಿಸಿದ್ದ.
ಆ ಕಡೆಯಿಂದ ಪೊಲೀಸ್ ಸೋಗಿನಲ್ಲಿ ಮಾತನಾಡಿದ ವ್ಯಕ್ತಿಯು ಆಧಾರ್ ನಂಬರ್ ಪಡೆದು ನೀವು ಮುಂಬೈಗೆ ಬಂದು ದೂರು ನೀಡಬೇಕೆಂದು ಹೇಳಿದ್ದ. ಆಗ ಅಲ್ಲಿಗೆ ಬರಲಾಗುವುದಿಲ್ಲ ಎಂದು ಪಿರ್ಯಾದಿ ಹೇಳಿದಾಗ, ನೀವು ಆನ್‌ಲೈನ್ ಮೂಲಕವು ದೂರು ನೀಡಬಹುದು ಎಂದು ನಂಬಿಸಿ, ಸ್ಕೈಪ್ ಮೂಲಕ ಸಂಪರ್ಕಿಸಿ , ನಿಮ್ಮ ಬ್ಯಾಂಕ್ ಖಾತೆ ಮೂಲಕ ಮಾದಕ ವಸ್ತು ಮಾರಾಟ ಮಾಡಿರುವ ಹಣ ವರ್ಗಾವಣೆ ಆಗಿದೆ ಹಾಗೂ ಮನಿ ಲ್ಯಾಂಡರಿಂಗ್‌ನಲ್ಲಿ ನಿಮ್ಮ ಖಾತೆ ಬಳಕೆಯಾಗಿದೆ.
ಆದ್ದರಿಂದ ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್‌ಬಿಐ ಎಜೆಂಟ್ ಖಾತೆಗೆ ವರ್ಗಾಯಿಸಿ, ನಿಮ್ಮ ಮೇಲಿರುವ ಆರೋಪ ಪರಿಶೀಲಿಸಿದ ನಂತರ ನಿಮ್ಮ ಖಾತೆಗೆ ಹಣ ವರ್ಗಾಯಿಸುವುದಾಗಿ ಹೇಳಿ ನಂಬಿಸಿ, 3,57,780 ರೂ. ಖಾತೆಗೆ ವರ್ಗಾವಣೆ ಮಾಡಿಸಿಕೊಂಡು, ನಂತರ ಹಣ ಹಾಕದೇ ವಂಚಿಸಿದ್ದಾರೆ.
ಆದ್ದರಿಂದ ತಮ್ಮನ್ನು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಇಎನ್ ಪೊಲೀಸ್ ಠಾಣೆಗೆ ವಂಚೆನೆಗೆ ಒಳಗಾದ ವ್ಯಕ್ತಿ ದೂರು ನೀಡಿದ್ದಾರೆ.