ದಾವಣಗೆರೆ: ಅಧಿವೇಶನದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ‘ಡಿ’ ದರ್ಜೆ ನೌಕರರು ಸನ್ಮಾನಿಸಿದರು.
ಮುಂಗಾರು ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಗುತ್ತಿಗೆದಾರರಿಂದ ಶೋಷಣೆ ನಡೆಯುತ್ತಿದೆ. ಸಕಾಲಕ್ಕೆ ವೇತನ ಕೊಡುತ್ತಿಲ್ಲ. ಮರ‍್ನಾಲ್ಕು ತಿಂಗಳು ವೇತನ ನೀಡದೆ ಸತಾಯಿಸುವುದು, ಪಿಎಫ್, ಇಎಸ್‌ಐಗೆ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ಇದರಿಂದ ನೌಕರರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ನೌಕರರು ದೂರುತ್ತಾರೆ. ಹೀಗಾಗಿ ಸರ್ಕಾರವೇ ನೇರವಾಗಿ ಅವರ ಖಾತೆಗಳಿಗೆ ವೇತನ ನೀಡಲು ಕ್ರಮ ತೆಗೆದುಕೊಳ್ಳುವಂತೆ ಎಂದು ಅಧಿವೇಶನದಲ್ಲಿ ಈ ವಿಷಯ ಕುರಿತು ಚರ್ಚೆ ನಡೆಸಿ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಹೊರ ಗುತ್ತಿಗೆ ನೌಕರರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.