ಹರಿಹರ (Harihara ) : ಪೌರ ಕಾರ್ಮಿಕರು ನಗರದ ಜೀವನಾಡಿಗಳಾಗಿದ್ದಾರೆ, ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಹರಿಹರ ನಗರದ ಗುರುಭವನದಲ್ಲಿ ನಡೆದ ಪೌರ ಸೇವಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ನಗರದ ಪೌರರು ಆರೋಗ್ಯದಿಂದಿರಲು ಸಾಧ್ಯ ಆ ನಿಟ್ಟಿನಲ್ಲಿ ಪೌರಕಾರ್ಮಿಕರು ಕೆಲಸದ ವೇಳೆ ಸರಕಾರ ನೀಡಿದ ಹ್ಯಾಂಡ ಗ್ಲ್ಲೌಜ್ ಶೂಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಿದರು.
ದಿನಗೂಲಿ ಪೌರ ಕಾರ್ಮಿಕರಿಗೆ ವಿಳಂಬವಾದ ವೇತನವನ್ನು ಪಾವತಿಸುವಂತೆ ನಗರಸಭಾ ಸದಸ್ಯ ಆಟೋ ಹನುಮಂತಪ್ಪ ಒತ್ತಾಯಿಸಿದರು.
ಈ ಸಂದರ್ಬದಲ್ಲಿ ಕಾಯಂ ಪೌರ ಕಾರ್ಮಿಕರಿಗೆ ವಿಶೇಷ ಭತ್ತೆಯ ಚೆಕ್‍ನ್ನು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ವಿತರಿಸಿದರು. ನಂತರ ಸರ್ವ ದಿನಗೂಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ರೀತಿಯ ಕ್ರೀಡಾಕೂಟ ನಡೆಯಿತು.
Read also : Political analysis | ಸಿದ್ದು ಅಲ್ಲಾಡ್ತಿಲ್ಲ ಗವರ್ನರ್ ಬಿಡ್ತಿಲ್ಲ
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪೌರ ಕಾರ್ಮಿಕರಿಗೆ ನಗರಸಭೆ ವತಿಯಿಂದ ಪ್ರಶಸ್ತಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಉಪಾಧ್ಯಕ್ಷ ಎಂ ಜಂಬಣ್ಣ, ನಗರಸಭೆಯ ಪೌರಾಯುಕ್ತ ಪಿ ಸುಬ್ರಹ್ಮಣ್ಯ ಶೆಟ್ಟಿ, ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಸಂತೋಷ್ ಕುಮಾರ್, ಪೌರ ನೌಕರ ಸಂಘದ ಗೌರವಾಧ್ಯಕ್ಷ ಸದಾಶಿವಪ್ಪ, ಅಧ್ಯಕ್ಷ ಉಚ್ಚೆಂಗಪ್ಪ, ಕಾರ್ಯದರ್ಶಿ ಪರಸಪ್ಪ, ಗುತ್ತಿಗೆದಾರ ಸಂಘದ ಅಧ್ಯಕ್ಷ ಪಂಚಾಕ್ಷರಿ, ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ, ಸೇರಿದಂತೆ ಸರ್ವ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಬಿ.ಬಿ ರೇವಣ್ಣ ನಾಯಕ್ ನಿರೂಪಿಸಿದರು.