ದಾವಣಗೆರೆ- ಕಲಾ ವಿದ್ಯಾರ್ಥಿಗಳು ಎಲ್ಲಾ ಪ್ರಕಾರದ ಕಲೆಗಳಿಗೂ ಮುಕ್ತವಾಗಿ ತೆರೆದುಕೊಂಡು, ಆಸಕ್ತಿ ವಹಿಸಿ ಅಭ್ಯಸಿಸಬೇಕು, ಅವಲೋಕಿಸಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ನಿಯೋಜಿತ ಅಧ್ಯಕ್ಷ ಪ.ಸ.ಕುಮಾರ ಸಲಹೆ ನೀಡಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾಗ್ಯಾಲರಿಯಲ್ಲಿ ದಾವಣಗೆರೆ ಕಲಾಶಾಲೆ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಜೂ.28ರವರೆಗೆ ಏರ್ಪಡಿಸಿರುವ ಅಕ್ಷರ ಸಿಂಗಾರೋತ್ಸವ:3- ಅಕ್ಷರ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯು ಕನ್ನಡ ಲಿಪಿಯ ವೈಶಿಷ್ಟ್ಯಪೂರ್ಣ ಪ್ರಸ್ತುತಿ ಇರುವ ಲಿಪಿಗಾರಿಕೆಯನ್ನು ಪ್ರೋತ್ಸಾಹಿಸಲಿದೆ . ಕಲಾವಿದರ ಇಂತಹ ಕಲಾ ಪ್ರದರ್ಶನ ನಡೆಸುವ, ಅವರ ಸಾಧನೆಯನ್ನು ದಾಖಲೀಕರಣ ಮಾಡುವ ಹಂಬಲವಿದೆ. ವೈಶಿಷ್ಟ್ಯಪೂರ್ಣವಾಗಿ ಕನ್ನಡ ಲಿಪಿ ಬರೆಯುವದು ಪತ್ರಿಕೆ ವಲಯದಲ್ಲಿ ಕೂಡ ಒಪ್ಪಿತವಾಗಿದೆ. ಇದೀಗ ಸುರೇಶ್ ವಾಘ್ಮೋರೆ ಮತ್ತವರ ಸ್ನೇಹಿತರ ತಂಡವು ಅಕ್ಷರ ಸಿಂಗಾರೋತ್ಸವ ಹೆಸರಲ್ಲಿ ಅನೇಕ ವಿನ್ಯಾಸದಲ್ಲಿ ಕನ್ನಡ ಲಿಪಿಗಳನ್ನು ಬರೆದು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪೆÇ್ರ.ಮುರಿಗೇಂದ್ರಪ್ಪ ಮಾತನಾಡಿ, ದೃಶ್ಯಕಲಾ ಕಾಲೇಜು ಇತ್ತೀಚೆಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನತೆಗೆ ಹೆಚ್ಚು ಹತ್ತಿರವಾಗುತ್ತಿದೆ. ಇಂದು ಕಲೆ, ಕಲಾಶಾಲೆ, ಕಲಾ ಪರಿಸರ ಉಳಿಸಲು ಹೋರಾಟ ಮಾಡಬೇಕಾದ ಸಂದರ್ಭವಿದೆ. ಕಲಾಶಾಲೆ, ದೃಶ್ಯಕಲಾ ಕಾಲೇಜುಗಳಲ್ಲಿ ಖಾಯಂ ಬೋಧಕರ ನೇಮಕ ಸೇರಿದಂತೆ ಕಲಾ ವಲಯದ ಸಮಸ್ಯೆ ಪರಿಹರಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಯತ್ನಿಸಬೇಕು. ಕಲಾ ವಿದ್ಯಾರ್ಥಿಗಳು, ಕಲಾವಿದರು ತಮ್ಮ ಪ್ರತಿಭೆಯನ್ನು ಮುಕ್ತ ಮನಸ್ಸಿನಿಂದ ಬೇರೆಯವರಿಗೂ ಹಂಚಬೇಕು. ಇದರಿಂದ ಕಲಾ ವಲಯ ಬೆಳೆಯಲು, ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ ಮಾತನಾಡಿ, ಅಕ್ಷರ ಸಿಂಗಾರೋತ್ಸವವು ಕನ್ನಡ ಅಕ್ಷರಗಳಿಗೆ ಸುಂದರ, ಕಲಾತ್ಮಕ, ಲಿಪಿಗಾರಿಕೆಯ ಮೆರಗನ್ನು ನೀಡಿ, ಆ ಮೂಲಕ ಕನ್ನಡ ಅಕ್ಷರ, ಭಾಷೆ, ಸಂಸ್ಕೃತಿಯನ್ನು ಪ್ರೀತಿಸಲು ಉತ್ತೇಜಿಸುವ ಆಸೆ ಹೊಂದಿರುವ ಸಮಾನಮನಸ್ಕ ಕಲಾವಿದರುಗಳ ಗುಂಪಾಗಿದೆ. ಬೆಂಗಳೂರು, ಮೈಸೂರು ನಂತರ ಇದೀಗ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ 3ನೇ ಅಕ್ಷರ ಸಿಂಗಾರೋತ್ಸವ ಪ್ರದರ್ಶನ ಏರ್ಪಡಿಸಲಾಗಿದೆ. ಬೇರೆ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು, ಕನ್ನಡ ನಾಡಿನ ಬೇರೆ ಪ್ರದೇಶಗಳಿಂದ ಬಂದವರು ಹಾಗೂ ಕೇರಳದಂತಹ ಹೊರರಾಜ್ಯದಿಂದ ಬಂದವರೂ ಸಹ ಈ ಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಜೂ.28ರವರೆಗೆ ನಡೆಯುವ ಪ್ರದರ್ಶನಕ್ಕೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಪ್ರವೇಶಾವಕಾಶ ಇರುತ್ತದೆ ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಅಕ್ಷರ ಸಿಂಗಾರೋತ್ಸವ ತಂಡದ ಸುರೇಶ್ ವಾಘ್ಮೋರೆ, ಬಾ.ಮ.ಬಸವರಾಜಯ್ಯ, ಎ.ಮಹಾಲಿಂಗಪ್ಪ, ಜಿ.ಹೆಚ್.ಸೂಗೂರ, ಬಾಬು ಜತ್ಕರ್, ಬೋಧನಾ ಸಹಾಯಕರಾದ ಶಿವಶಂಕರ್ ಸುತಾರ್, ಡಾ.ಸಂತೋಷ ಕುಲಕರ್ಣಿ, ಡಾ.ಗಿರೀಶ್ ಕುಮಾರ್, ಹರೀಶ್ ಹೆಡ್ನವರ್, ಪ್ರಮೋದ ಆಚಾರ್, ನವೀನ್ ಆಚಾರ್, ಅರುಣ್ ಕಮ್ಮಾರ, ರಂಗನಾಥ ಕುಲಕರ್ಣಿ, ಡಿ.ಹೆಚ್.ಸುರೇಶ್, ಕಾಲೇಜಿನ ಕಚೇರಿ ನೌಕರರಾದ ನಂದಕುಮಾರ್, ಶಿವಕುಮಾರ್, ನಾಗರಾಜ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕ್ಷರ ಸಿಂಗಾರೋತ್ಸವ ತಂಡದ ಸದಸ್ಯ ಟಿ.ಬಿ.ಕೋಡಿಹಳ್ಳಿ ಸ್ವಾಗತಿಸಿ, ವಂದಿಸಿದರು. ಶಾರದಾ ಜಾವಗಲ್ ಪ್ರಾರ್ಥಿಸಿದರು. ಕಾಲೇಜಿನ ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ಟ ಕಾರ್ಯಕ್ರಮ ನಿರೂಪಿಸಿದರು.