ದಾವಣಗೆರೆ ಅ.28 : ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು, ಇದು ಸಂಸ್ಥೆಗಳ ಶಕ್ತಿಯನ್ನು ಕುಗ್ಗಿಸುವ ಜೊತೆಗೆ ಜನರ ವಿಶ್ವಾಸವನ್ನು ಹಾಳುಮಾಡುವುದು ಮತ್ತು ನ್ಯಾಯದ ತತ್ವವನ್ನ ದುರ್ಬಲಗೊಳಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ ಹೇಳಿದರು.
ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ ಮತ್ತು ಲೋಕಯುಕ್ತಾ ಘಟಕ ದಾವಣಗೆರೆ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣಲ್ಲಿ ಏರ್ಪಡಿಸಲಾದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಕೇವಲ ಭ್ರಷ್ಟಾಚಾರ ವಿರೋಧ ಕ್ರಮಗಳ ವಿಷಯವಲ್ಲ, ಅದು ಪ್ರತಿಯೊಬ್ಬ ಅಧಿಕಾರಿಯ ನೈತಿಕ ಬದ್ದತೆಯ ವಿಷಯವಾಗಿದೆ. ಗ್ರಾಮ ಪಂಚಾಯತಿ ಮಟ್ಟದಿಂದ ಆರಂಭವಾದ ಭ್ರಷ್ಟಾಚಾರ ತಹಶೀಲ್ದಾರ್ ಕಚೇರಿ, ಪೊಲೀಸ್ ಇಲಾಖೆ ಹೀಗೆ ವಿವಿಧ ಇಲಾಖೆಗಳ ಕಚೇರಿಗಳಿಂದ ಹಿಡಿದು ಉಪ ಆಯುಕ್ತರ ಕಚೇರಿವರೆಗೂ ತಲುಪಬಹುದು.
ಯಾವುದೇ ಒಬ್ಬ ಅಧಿಕಾರಿ ಒಂದು ಸಣ್ಣ ಪ್ರಮಾಣದ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದಲ್ಲಿ, ಅಂತಹ ಕೃತ್ಯವು ಜನರ ಮನಸಲ್ಲಿ ಬಹುದೊಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ನಾಗರಿಕನಿಗೂ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ವಿಳಂಬ ಮಾಡದೇ, ಅಕ್ರಮವಾದ ಬೇಡಿಕೆಗಳಿಲ್ಲದೇ ಸೇವೆ ಪಡೆಯುವ ಹಕ್ಕಿದೆ. ಆದ್ದರಿಂದ ಅಧಿಕಾರಿಗಳು ತಮ್ಮ ಹಕ್ಕುಗಳನ್ನು ಮಾರಿಕೊಂಡು ಅವರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕಾರಣಗಳಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯ, ಕೆಲಸಗಳು ಸಕಾಲದಲ್ಲಿ ದೊರೆಯದೇ ವಿಳಂಬವಾಗುತ್ತಿವೆ. ಅಧಿಕಾರಿಗಳು ಜನರ ವಿಶ್ವಾಸ, ಜನರನ್ನು ರಕ್ಷಿಸುವ ಕಾರ್ಯ ಮಾಡಬೇಕು. ಸಾರ್ವಜನಿಕರು ಕಚೇರಿಗಳಿಗೆ ಕಡತ, ದಾಖಲೆಗಳು ಇನ್ನಿತರೆ ಸೇವೆಗಾಗಿ ಅರಸಿ ಬಂದಾಗ ವಿಳಂಬ ಮಾಡದೇ ಜವಾಬ್ದಾರಿಯುತ ವ್ಯಕ್ತಿಗಳಾಗಿ ಸೇವೆ ನೀಡಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಡೋಣ ಎಂದರು.
Read also : ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ
ಜಿಲ್ಲಾಧಿಕಾರಿ ಜಿ.ಎಂ ಗಂಗಾಧರವಾಸ್ವಾಮಿ ಮಾತನಾಡಿ, ಯಾವುದೇ ಇಲಾಖೆ ಅಧಿಕಾರಿಗಳು ಅವತ್ತಿನ ಕೆಲಸ ಅವತ್ತೇ ಮುಗಿಸುವ ಪ್ರಯತ್ನ ಮಾಡಬೇಕು. ಇದಕ್ಕೆ ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಕಟಿ ಬದ್ಧರಾಗಿರಬೇಕು. ಇದರಿಂದ ಕೆಲಸಗಳು ತಂತಾನೆ ಪ್ರಗತಿಯಾಗುತ್ತವೆ. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಆರಿಕೆಯ ಉತ್ತರ ನೀಡುವ ಮೂಲಕ ಸರ್ವಾಧಿಕಾರಿಗಳಂತೆ ವರ್ತಿಸಬಾರದು.
ಅವರೊಂದಿಗೆ ಸೌಮ್ಯಯು ತ ಹಾಗೂ ಸೌಜನ್ಯದಿಂದ ವರ್ತಿಸಬೇಕು. ಇಲ್ಲಿ ಜನಪ್ರತಿನಿಧೀಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೀಗೆ ಎಲ್ಲರನ್ನೂ ಒಳಗೊಂಡ ಪ್ರಜಾಪ್ರಭುತ್ವವೇ ಆಡಳಿತ. ಎಲ್ಲರೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಯಾವುದೇ ತಪ್ಪುಗಳು ಆಗುವುದಿಲ್ಲ. ಈ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಸಿಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಪ್ರತಿಜ್ಞಾವಿಧಿ ಬೋಧಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ. ಸಿಇಓ ಗಿತ್ತೆ ಮಾಧವ ವಿಠಲ ರಾವ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಲಯ ಮಹಾವೀರ ಮ.ಕರೆಣ್ಣವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
