ದಾವಣಗೆರೆ (Davanagere): ರಾಜಕಾರಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಾರೂ ಅವಕಾಶ ಕೊಡುವುದಿಲ್ಲ. ಅವಕಾಶಗಳನ್ನು ನಾವೇ ಸೃಷ್ಠಿ ಮಾಡಿಕೊಳ್ಳಬೇಕು. ಅವಕಾಶ ಅನ್ನೋದು ನಮ್ಮ ಸುತ್ತಮುತ್ತ ಇರುತ್ತದೆ. ವ್ಯಕ್ತಿತ್ವ ಆಕರ್ಷಕವಾಗಿದ್ದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಕರೆ ನೀಡಿದರು.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಏರ್ಪಡಿಸಿದ್ದ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ ಬಳಿಕ ಎಲ್ಲಾ ಕಾರ್ಯಕ್ರಮಗಳಿಗೂ ರಾಜ್ಯಾದ್ಯಂತ ಆಹ್ವಾನ ನೀಡುತ್ತಿದ್ದಾರೆ. ಮೊದಲೆಲ್ಲಾ ಈ ಕಾರ್ಯಕ್ರಮಕ್ಕೆ ಕರೆಯುತ್ತಿರಲಿಲ್ಲ ಎಂದು ತಿಳಿಸಿದರು.
ಇಂದು ದೇಶದಲ್ಲಿ ಅಸಮಾನತೆ ಇದೆ. ನೀವೆಲ್ಲರೂ ಅಸಮಾನತೆ ಸಂತ್ರಸ್ತರು. ನಿಮ್ಮೊಳಗಿರುವ ಸಾಮರ್ಥ್ಯ ಹೊರ ಬರಬೇಕು. ನಮ್ಮೊಳಗೆ ವಿಶ್ವವಿದೆ, ಸಾಮರ್ಥ್ಯ ಇದೆ. ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ವಿವೇಕಾನಂದ ಅವರು ಹೇಳಿದ್ದರು. ಅದರಂತೆ ನಾವು ಸಾಮರ್ಥ್ಯ, ಜ್ಞಾನ, ಮಾನವೀಯ ಗುಣಗಳು, ಆಕರ್ಷಕ ವ್ಯಕ್ತಿತ್ವ ರೂಢಿಸಿಕೊಂಡರೆ ಸಾಧನೆ ಕಷ್ಟವಾಗದು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಇವತ್ತಿನ ಕಷ್ಟ ಜೀವನದ ದೊಡ್ಡ ಕಷ್ಟ ಎಂದು ನೀವೆಲ್ಲರೂ ನೋವು ಅನುಭವಿಸುತ್ತಿದ್ದೀರಾ. ಧೈರ್ಯದಿಂದ ಹೊರಬರಬೇಕು. ಆಗ ಅರ್ಧ ಯಶಸ್ಸು ಖಂಡಿತ ಸಿಗುತ್ತದೆ ಎಂದು ಸಲಹೆ ನೀಡಿದರು.
ಇನ್ ಸೈಟ್ಸ್ ಐಎಸ್ ಸಂಸ್ಥೆ ಹುಟ್ಟು ಹಾಕಿ 11 ವರ್ಷಗಳಾಗಿವೆ. 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಎಎಸ್ ಮಾಡಿದ್ದಾರೆ. ಜಮ್ಮು ಕಾಶ್ಮೀರ, ಹೈದರಾಬಾದ್, ಲಕ್ನೋ, ಬೆಂಗಳೂರಿನಲ್ಲಿಯೂ ನಮ್ಮ ಸಂಸ್ಥೆ ಇದೆ. ಬೆಂಗಳೂರಿನಲ್ಲಿ ಆರು ಸಾವಿರ ವಿದ್ಯಾರ್ಥಿಗಳು ಈಗ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕದಿಂದ 30 ವಿದ್ಯಾರ್ಥಿಗಳು ಐಎಎಸ್ ಆದರೆ ಅದರಲ್ಲಿ 25 ರಿಂದ 27 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯವರೇ ಇದ್ದಾರೆ. ಯಾವುದೋ ಒಂದು ತರಬೇತಿ ನಮ್ಮಲ್ಲಿಯೇ ಪಡೆದಿರುತ್ತಾರೆ. ಇದು ನಮ್ಮ ಸಂಸ್ಥೆಯ ಹೆಗ್ಗಳಿಕೆ ಎಂದು ತಿಳಿಸಿದರು.
ಹತ್ತನೇ ತರಗತಿ ಓದಿದವರು ಐಎಎಸ್ ಮಾಡಬೇಕೆಂಬ ಕನಸು ಹೊಂದಿದ್ದರೆ ಸೈನ್ಸ್ ಆಯ್ದುಕೊಳ್ಳಿ. ಪುಸ್ತಕ ಮತ್ತು ಪ್ರತಿನಿತ್ಯ ಎದ್ದ ತಕ್ಷಣ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ. ಪುಸ್ತಕ ಓದಬೇಕೆಂದರೆ ನಮ್ಮೂರಲ್ಲಿ ಪುಸ್ತಕ ಓದುವ ಸಂಸ್ಕೃತಿ ಇರಬೇಕು. ಶಿವಮೊಗ್ಗ ಸಾಹಿತ್ಯದ ತವರು. ಹೊನ್ನಾಳಿ ಹತ್ತಿರವಿದ್ದರೂ ಯಾಕೆ ಕಡಿಮೆಯಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಪುಸ್ತಕಗಳ ಜೊತೆಗೆ ಬಾಂಧವ್ಯ ಬೆಳೆದರೆ ಓದುವ ಹವ್ಯಾಸ ಬೆಳೆದೇ ಬೆಳೆಯುತ್ತದೆ. ಪುಸ್ತಕದ ಮೇಲೆ ಪ್ರೀತಿ ಓದು ಬೆಳೆದರೆ ವ್ಯಕ್ತಿತ್ವದಲ್ಲಿ ಅಗಾಧ ಜ್ಞಾನ ಬರುತ್ತದೆ. ಸಂಸ್ಕೃತಿ, ಮಾನವೀಯ ಗುಣ, ಜ್ಞಾನ ಸಂಪಾದನೆಯೂ ಆಗುತ್ತದೆ ಎಂದು ಹೇಳಿದರು.
ನನ್ನ ಮೇಲೆ ಒಂದೂ ಎಫ್ ಐ ಆರ್ ಇಲ್ಲ. ನನ್ನ ವಿರುದ್ಧ ಯಾವುದೇ ಋಣಾತ್ಮಕ ಆರೋಪ ಇಲ್ಲ. ಕಪ್ಪು ಚುಕ್ಕೆಗಳಿಲ್ಲ. ನನ್ನ ತಂದೆ ಹೇಳಿದ್ದ ಮಾತು ಈಗಲೂ ನೆನಪಿದೆ, ಊರಿಗೆ ಕೆಟ್ಟ ಹೆಸರು ತರಬೇಡ, ಏನೇ ಕೆಲಸ ಮಾಡು, ಒಳ್ಳೆಯನಾಗಿರು ಎಂದಿದ್ದರು. ನಾನು ದೊಡ್ಡ ಮನುಷ್ಯನಾಗುವುದು ಇಷ್ಟವಿರಲಿಲ್ಲ. ಆದ್ರೆ, ಒಳ್ಳೆಯವನಾಗಿ ಬಾಳಬೇಕು ಎಂಬ ಆಸೆ ಅವರಲ್ಲಿ ಇತ್ತು. ಅವರ ಮಾತಿನಂತೆ ನಡೆದೆ. ಹಾಗಾಗಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಪಿಯುಸಿ, ಪದವಿ ಓದಲು ಒಳ್ಳೆಯ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಳ್ಳಿ. ಮೆಡಿಕಲ್, ಎಂಜಿನಿಯರಿಂಗ್ ಮಾಡಿ. ಇದೇ ಕ್ಷೇತ್ರದಲ್ಲಿ ಹೋಗುವ ಆಸೆ ಇರಲಿ. ಅವಕಾಶಗಳು ಸಿಕ್ಕಾಗ ಬಿಡಬೇಡಿ. ಈಗಿನ ಮಕ್ಕಳಿಗೆ ಹವ್ಯಾಸಗಳೇ ಇಲ್ಲ. ಎಸ್. ಎಸ್. ಎಲ್. ಸಿ, ಪಿಯುಸಿ ಆದ ಬಳಿಕ ಪೋಷಕರು ಹವ್ಯಾಸಗಳನ್ನು ಬಿಡಿಸಿಬಿಡುತ್ತಾರೆ. ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ನನಗೆ ಎಂಪಿ ಆಗಬೇಕೆಂಬ ಕನಸು ಇತ್ತು. ಜನಸೇವೆ ಮಾಡಬೇಕೆಂಬ ಹೆಬ್ಬಯಕೆ ಇತ್ತಾದರೂ ಸಾಧ್ಯವಾಗಲಿಲ್ಲ. ಹಾಗೆಂದು ನಾನು ಸುಮ್ಮನಾಗಿಲ್ಲ. ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಜನರಲ್ಲಿ ಸ್ವಾಭಿಮಾನದ ಕಿಚ್ಚು ಬಡಿದೆಬ್ಬಿಸುವ ಕೆಲಸ ಮಾಡುತ್ತಿರುವೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಸವಾಲುಗಳು ಎದುರಾಗುವುದು ಸಹಜ. ಧೈರ್ಯವಾಗಿ ಮುನ್ಡಡೆಯುತ್ತೇನೆ, ಸಾಧಿಸಿಯೇ ತೀರುತ್ತೇನೆ ಎಂಬ ಅಚಲವಾದ ವಿಶ್ವಾಸ, ದೃಢ ನಿಶ್ಚಯ ನಿಮ್ಮಲ್ಲಿದ್ದರೆ ಎಲ್ಲವನ್ನೂ ಸಾಧ್ಯವಾಗಿಸಬಹುದು ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ
ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಮುಖಂಡ ಪಿ. ವೀರೇಶ್, ಪಂಚಮಸಾಲಿ ಸಮಾಜದ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ, ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಎಂ. ಆರ್. ಮಹಾಂತೇಶ್, ಬಂಜಾರ ಸಮಾಜದ ಅಧ್ಯಕ್ಷ ಅಂಜುನಾಯ್ಕ, ಮುಸ್ಲಿಂ ಸಮಾಜದ ಮುಖಂಡ ಅಮಾನ್ ಸಾಬ್, ಪ್ರೊಫೆಸರ್ ಹೆಚ್. ಪಾಂಡುರಂಗ, ಡಿ. ಸಿ. ಪಾಟೀಲ್, ಉಬೇದ್ ಉಲ್ಲಾ ಸಾಬ್, ಹಾಲುಮತ ಸಮಾಜದ ವೀರಣ್ಣ ಮತ್ತಿತರರು ಹಾಜರಿದ್ದರು. ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಪೋಷಕರು ಈ ವೇಳೆ ಉಪಸ್ಥಿತರಿದ್ದರು.