ನಾನು,ಹಾವೇರಿಯ ಕೋರ್ಟಿನಲ್ಲಿ ಕೆಲಸ ಮಾಡುತ್ತಿರುವಾಗ ಸವಣೂರಿನಲ್ಲಿ ಒಂದು ಮನಕಲಕುವಂತಹ ಘಟನೆ ನಡೆಯಿತು.
ಊರ ಮಲವನ್ನು ತಲೆಮ್ಯಾಲೆ ಹೊತ್ತು ಸಾಗಿಸುವುದು ಅಪರಾಧವಾಗಿ ಅದೆಷ್ಟೋ ವರುಷಗಳಾಗಿ ಹೋಗಿವೆ.ಆದರೂ ಈ ಊರಿನ ಮನೆಗಳ ಹಿಂದೆ ಪುಟ್ಟ ರಸ್ತೆಯಂತದು ಇದೆ.ಅದಕ್ಕೆ “ಭಂಗಿ ರಸ್ತೆ”ಎಂದೇ ಕರೆಯುವರು.
ಐದೋ ಆರೋ ಅಡಿಗಳ ಅಗಲದ ಈ ರಸ್ತೆಗಳು ಸದಾ ಕಾಡುಹಾಸುಗಲ್ಲುಗಳಿಂದ ಮುಚ್ಚಲ್ಪಟ್ಟಿರುತ್ತವೆ.ಎರಡೂ ಬದಿಯ ಮನೆಗಳವರ ಮಲ ತುಂಬಿ ಹರಿಯುವ ಈ ಜಾಗೆಯನ್ನು ಭಂಗಿಗಳು ಸ್ವಚ್ಛಗೊಳಿಸಬೇಕು.
ಭಂಗಿಗಳಿಗದು ನಿತ್ಯ ಕಾಯಕ
ಇಂತದ್ದೇ ಭಂಗಿಗಳು ಸವಣೂರಿನಲ್ಲಿದ್ದರು.ಅದಕ್ಕಾಗಿ ಸವಣೂರು ನವಾಬರಿಂದ ಒಂದಷ್ಟುಜಾಗ,
ಗುಡಿಸಲಿನಂತ ಗೂಡುಗಳಲ್ಲಿ.
ಸಂಸಾರ,ಮಕ್ಳುಮರಿಗಳು,
ಕೋಳಿಕುರಿಗಳು ನಾಯಿ -ನಾಯಿಮರಿಗಳು..ಇತ್ಯಾದಿ ಸಾಕಿಕೊಂಡು ಹೇಗೋ ಬದುಕಿ ಕೊಂಡು ಇದ್ದರು.
ರಸ್ತೆಬದಿಯಲ್ಲಿರುವ ಗುಡಿಸಲುಗಳ ಮೇಲೆ ಊರ ಮುನಿಸಿಪಾಲಿಟಿಯ ಕಣ್ಣು ಬಿತ್ತು.ಅವರಿಗೆ ಅಲ್ಲಿ ಕಾಂಪ್ಲೆಕ್ಸ್ ಕಟ್ಟಿಸಬೇಕಿತ್ತು.ಅದಕ್ಕಾಗಿ ಭಂಗಿಗಳಿಗೆ ಜಾಗ ತೆರವುಗೊಳಿಸುವಂತೆ ನೋಟೀಸು ನೀಡಲಾಯಿತು.
ನೂರಾರು ವರುಷಗಳಿಂದಲೂ ಬದುಕಿದ್ದ ಭಂಗಿಗಳು ತಮ್ಮ ಅಜ್ಜ-ಮುತ್ತಜ್ಜರ ಪರಿಚಯ ಹೇಳಿದರು.ಮುನಿಸಿಪಾಲಿಟಿಯವರ ಹೃದಯ ಕರಗಲಿಲ್ಲ.ಅಲ್ಲೀವರೆಗೂ ತಮ್ಮದೇ ಹೊಲಸನ್ನು ತಲೆಮೇಲೆ ಹೊತ್ತು ಸಾಗುತ್ತಿದ್ದ ಅಲ್ಲಿದ್ದ ಭಂಗಿಗಳ ಬದುಕನ್ನು ಧ್ವಂಸ ಮಾಡಲಾಯಿತು.
“ಹೋಗುವುದಾದರೂ ಎಲ್ಲಿಗೆ?”ಎಂದು ಕೇಳಿದ ಭಂಗಿಗಳಿಗೆ
ಕುಡಿಯುವ ನೀರನ್ನು ನಿಲ್ಲಿಸಿದರು.ಅವರನ್ನು ಅಲ್ಲಿಂದ
ಓಡಿಸಲು ಪ್ರಯತ್ನಿಸಿದರು.
ಬದುಕು ಮೂರಾಬಟ್ಟೆಯಾಗಿ ಹೋಯಿತು.
ಅನ್ಯ ಮಾರ್ಗವೇ ಇರಲಿಲ್ಲ
ಮಲ ತುಂಬಿದ ಕೊಡಗಳನ್ನವರು ಮೈಮೇಲೆ ಸುರುವಿಕೊಂಡರು.
ಜನ ದೂರದರ್ಶನ,ಪತ್ರಿಕೆಗಳಲ್ಲಿ ಸುದ್ದಿ ನೋಡಿಯೇ ವಾಂತಿ ಮಾಡಿಕೊಂಡರು. ಇನ್ನು ಕೆಲವರು ಮೂಗು ಮುಚ್ಚಿಕೊಂಡರು.
” ಛೀ…ಥೂ….”ಅಂದರು.
ಭಂಗಿಗಳ ಮೈಮೇಲೆ ಯಾರದ್ದೋ ಮಲ ಹರಿಯುತ್ತಿತ್ತು.ಸರ್ಕಾರ..ಎದ್ದೆನೋ ಬಿದ್ದೆನೋ.. ಎಂದು ಓಡೋಡಿ ಬಂದಿತು.
ಸುದ್ದಿ ಯಾವಾಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯಿತೋ ಆಗ
ಕೆಲಸ ಕೊಡಿಸುವ, ಮನೆ ಕೊಡಿಸುವ ಸರ್ಕಾರದ ಭರವಸೆಗಳು ದೂರದರ್ಶನಗಳಲ್ಲಿ ಒಂದೊಂದಾಗಿ ಬಿತ್ತರವಾಗತೊಡಗಿದವು.
ಇದಾಗಿ,ಎಷ್ಟೋ ದಿನಗಳ ನಂತರ ಯಥಾರೀತಿಯಂತೆ,ಸಿನಿಮಾದ ಕೊನೆಯಲ್ಲಿ ಪೊಲೀಸರು ಬರುವಂತೆ ಸಾಹಿತಿಗಳೂ ಭಂಗಿಗಳ ಮನೆಗೆ ಬಂದರು.ಅಷ್ಟೇ ಅಲ್ಲದೆ,ಒಬ್ಬ ಖ್ಯಾತ ಸಾಹಿತಿ,ತಮ್ಮ ಕೃತಿಯನ್ನೂ ಭಂಗಿ ಮಂಜುನಾಥನ ಕೈಯಿಂದಲೇ ಬಿಡುಗಡೆ ಮಾಡಿಸಿದರು.ಆ ಹೊತ್ತು,ಪೇಪರನೋರು ಭಂಗಿ ಮಂಜುನಾಥನನ್ನು ಮಾತನಾಡಿಸುತ್ತಿದ್ದ.
ಮಾತು ೧
ಸಂದರ್ಶಕ:”ನಿಮ್ಮಹೆಸರೇನು?”
ಭಂಗಿ ಮೌನವಾಗಿಯೇ ಇದ್ದ.
ಆತ ತನ್ನ ಕೈ ತೋರಿಸಿದ.
ಆ ಕೈಯಲ್ಲಿ ಹಸಿರು ಹಚ್ಚೆ “ಗೊತ್ತಿಲ್ಲ” ಗುರುತಿತ್ತು.
ಮಾತು ೨
ಸಂದರ್ಶಕ ಹುಟ್ಟಿದ ದಿನಾಂಕ ಕೇಳಿದ.
“ನಾನು ಹುಟ್ಟಿದ್ದು ಈಗ್ಗೆ ಮೂರು ದಿನಗಳ ಹಿಂದೆ….ಅದೇ ಊರವರ ಮಲವನ್ನು ತಲೆ ಮ್ಯಾಲೆ…ಸುರಕೊಂಡೆವಲ್ಲ…ಅವತ್ತೇ ನಾವ್ ಹುಟ್ಟಿದ್ದು ..ಸಾ..!” ಎಂದು ತಣ್ಣಗೆ ನುಡಿದ.
“ನಾನಷ್ಟೇ ಅಲ್ಲ ,ನಾನು ನನ್ ಚಿಗಪ್ಪ,ಚಿಗವ್ವ,ಹೆಂಡ್ತಿ,ಮಕ್ಳು
ಎಲ್ಲರೂ ಹುಟ್ಟಿದ್ದೇ ಅವಾಗಲ್ಲವಾ ಸಾರು.. ಅಲ್ಲೀವರ್ಗೂ ನಾವಿದ್ದೀವಿ ಅನ್ನಾದು ನಿಮ್ಗೂ ಗೊತ್ತರ್ಲಿಲ್ಲ. ಸಾ….?ಪೇಪರ್ರು,ಟೀವಿ ನ್ಯಾಗ ಬಂದಮ್ಯಾಲೆ ನಾವ್ ಹುಟ್ಟಿದ್ದು!”ಎಂದ.
ಸಂದರ್ಶಕನ ಬಾಯಿ ಒಣಗುತ್ತಿತ್ತು.
ಮಾತು ೩
ಆತನ ಕೈಯಲ್ಲಿ ಗಡಿಯಾರವಿತ್ತು.ಗಮನಿಸಿದ ಸಂದರ್ಶಕ “ಮುಳ್ಳಿಲ್ಲದ ಗಡಿಯಾರ…!! ಯಾಕ್ಹೀಗೆ?” ಉದ್ಗಾರ ತೆಗೆದ.
ಅದಕ್ಕೆ “ಅಯ್ಯೋ ನಮ್ ಕಾಲ ಮುಗ್ದುಹೋಗಿದೆ…
ನಮಿಗೆ ಟೇಮೇ ಇಲ್ವಲ್ಲಾ ಸಾರ್..”ಭಂಗಿ ವಿಲಕ್ಷಣ ನಗೆ ನಕ್ಕ.
ಸಂದರ್ಶಕನಿಗೆ ಅನುಮಾನ
ಆತನೇನು ದಾರ್ಶನಿಕನಾ..?
ಇಲ್ಲ ಬರೀ ಭಂಗಿಯಾ..?ಈ ಹೊತ್ತಿಗೂ ನನಗೆ ಕಾಡುತ್ತಿದೆ.
ಇದಾಗಿ ಎಷ್ಟೋ ದಿನಗಳಾದ ನಂತರವೂ ಅವರು ಫುಟ್ ಪಾತಿನ ಮೇಲೆಯೇ ವಾಸಮಾಡಬೇಕಾಯಿತು.ಬಡವರಿಗೆ ಸಂತಾನ ಜಾಸ್ತಿ ಎಂಬಂತೆ ಮಕ್ಕಳು,ಮರಿಗಳು,ಕೋಳಿ,ಕೋಳಿ ಮರಿ,ಎಮ್ಮೆ,ದನಕರು ಕಟ್ಟಿಕೊಂಡು ಬದುಕು ದುಸ್ತರವೆನಿಸಿ ಮನೆಯ ಯಜಮಾನಿ ಎನಿಸಿಕೊಂಡಿದ್ದ ಭಂಗಿ ಅಕ್ಕಮ್ಮ ಈ ಬಾರಿ ಗಟ್ಟಿ ನಿರ್ಧಾರ ಕೈಗೊಂಡು ಇದೇ ತಿಂಗಳೊಳಗೆ (ಜುಲೈ)ಬೇಡಿಕೆ ಈಡೇರಿಸದಿದ್ದರೆ ಆಗಸ್ಟ್ ಹದಿನೈದರಂದು ವಿಧಾನಸೌಧದ ಮುಂದೆ ನಿಂತುಕೊಂಡು ಮೈಮೇಲೆ ಮಲ ಸುರುವಿಕೊಂಡು ಪ್ರತಿಭಟಿಸುವುದಾಗಿ ಹೇಳಿದಳು.
ಯಾವಾಗ ಸುದ್ದಿ ಮುಖ್ಯಮಂತ್ರಿಯವರಿಗೆ ಮುಟ್ಟಿತೋ…ಚಿತ್ರದುರ್ಗದ ಖ್ಯಾತ ಸ್ವಾಮಿಯೊಬ್ಬರನ್ನ ಭಂಗಿಗಳ ಹತ್ತಿರ ಮಾತನಾಡಲು ಸೂಚಿಸಲಾಯಿತು.
ಪ್ರಗತಿಪರತೆಯ ಮುಖವಾಡ ಧರಿಸಿದ್ದ ಆ ಸ್ವಾಮಿ,ನಯವಾಗಿ ಭಂಗಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ಟೀವಿ,ಸುದ್ದಿ ಮಾಧ್ಯಮಗಳ ಎದುರಿನಲ್ಲಿಯೇ ಭಂಗಿ ಅಕ್ಕಮ್ಮನ ಅಂಗೈ ಮೇಲೆ ಕೈಯಿಟ್ಟು,”ಇದರ ಸಂಪೂರ್ಣ ಜವಾಬ್ದಾರಿ ನನ್ನದು,ನಿಮಗೆ ನ್ಯಾಯ ಕೊಟ್ಟೇ ಕೊಡಿಸುವೆ.ನಂಬಿಕೆಯಿಡಿ”ಎಂದರು.ಮುಂದುವರೆದು ಯಾವುದೇ ಕಾರಣಕ್ಕೂ ಮತ್ತೆ ಮೈ ಮೇಲೆ ಮೇಲೆ ಸುರುವಿಕೊಳ್ಳಬಾರದೆಂದು ಸಹ ಭಾಷೆ ತೆಗೆದುಕೊಂಡರು.
ಇದಾಗಿ ಎಷ್ಟೋ ದಿನಗಳಾದರೂ ಸಹ ಸರ್ಕಾರವಾಗಲಿ,ಜಗದ್ಗುರುಗಳ ಮಠಾಧೀಶರಾಗಲಿ ಕ್ಯಾರೆ ಎನ್ನಲಿಲ್ಲ.
ಬೇಸತ್ತ ಭಂಗಿ ಅಕ್ಕಮ್ಮ,ಭಂಗಿ ಮಂಜುನಾಥ ಮತ್ತು ಇತರ ಮೂವರು ಚಿತ್ರದುರ್ಗದ ಮಠಕ್ಕೆ ಹೋದರು.ಎಷ್ಟೋ ಹೊತ್ತಾದ ನಂತರ ಕರೆದ ಸ್ವಾಮಿ,
“ಏನು ?ಬಂದಿದ್ದೂ?”ಎಂದು ಕೇಳಿದ್ದಕ್ಕೆ,
“ಅದೇ ಬುದ್ದಿ ಭಂಗಿಗಳಿಗೆ ಜಾಗ ಕೊಡಿಸ್ತೀನಿ ಅಂದಿದ್ರೀ…ಮೂರ್ನಾಲ್ಕು ತಿಂಗಳಾತು ಯಾರು ಕೂಡ ಸನೇಕ್ಕ ಹಾದಿಲ್ಲ ಬುದ್ದಿ,ನೀವ್ ಬ್ಯಾರೆ ಭಾಷೆ ತಕಬಂದ್ರಲ್ಲ…”ಎಂದಳು.
ಅರೆಕ್ಷಣ ಹೊತ್ತು ಕಣ್ಣುಮುಚ್ಚಿ,ಮತ್ತೆ ತೆರೆದಂತೆ ಮಾಡಿ,
“ಅಲ್ಲಾ…ನಾವು ಹಂಗ ಹೇಳಿದ್ದೆವಾ?”ಎಂದರು.
ಅವರನ್ನು ನಡೆದಾಡುವ ದೇವರೆಂದೇ ಭಾವಿಸಿದ್ದ ಅಕ್ಕಮ್ಮ,”ಹೂ ಬುದ್ದಿ….”ಎಂದಳು.
“ಇಲ್ಲ…ಇಲ್ಲ ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿರೋದು,ನಾವ್ ಯಾವ್ ಭಾಷೆನೂ ಕೊಟ್ಟಿಲ್ಲ,ಆಣಎನಊ ಮಾಡಿಲ್ಲ ಹೋಗ್ರೀ”ಎಂದು ಸಿಟ್ಟಿನಿಂದ ಹೇಳಿದರು.
ಅದೆಲ್ಲಿತ್ತೋ ಸಿಟ್ಟು,ಭಂಗಿ ಅಕ್ಕಮ್ಮ ಒಮ್ಮೆಲೇ,
“ಏ…ಸಾಮೀ,ನಿಂದೇನ್ ನಾಲಿಗಿಯಾ….ಇಲ್ಲಾ ಕೆರನಾ?”ಎಂದು ಕೆರಳಿ ಬಿಟ್ಟಳು.
ಇದಾಗಿ ಎಷ್ಟೋ ದಿನಗಳ ನಂತರ ಅವರದೇ ಸ್ವಂತ ಹೋರಾಟದಿಂದ ಪುಟ್ಟ ಪುಟ್ಟ ಮನೆಗಾಗುವಷ್ಟು ಜಾಗಗಳನ್ನು ಓದಗಿಸಲಾಯಿತು.
ಈಗ,ಆ ಸೋ ಕಾಲ್ಡ್ ಸ್ವಾಮೀಜಿ,ಅಂದಿನ ಮುಖ್ಯಮಂತ್ರಿಗಳು ಪ್ರತಿನಿಧಿಯಂತೆ ಬಂದಿದ್ದ ಸ್ವಾಮಿ,ಇಂದು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಹಾಕಿಕೊಂಡು ಜೈಲು ಕಂಬಿ ಎಣಿಸುತ್ತಿದ್ದರೆ….ಊರಿನ ಭಂಗಿ ರಸ್ತೆಗಳು ಕತ್ತಲಾಗುವುದನ್ನೇ ಎದುರು ನೋಡುತ್ತವೆ.
ಯಾಕೆಂದರೆ,ಮಲ ಹೊರುವ ಪದ್ದತಿಯನ್ನು ನಿಷೇಧಿಹಸಲಾಗಿದೆ.
ಮಲ ಹೊರುವುದು ಅಪರಾಧ
ಬೋರ್ಡಿನ ಜತೆಯಲ್ಲಿಯೆ ಇದೆ
“ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗಿಗಾಗಿ ಸಂಪರ್ಕಿಸಿ”ಬೋರ್ಡು!
ಯಾರೋ ನಡೆದಾಡಿದ ಸದ್ದು ಎದೆಯೊಳಗೆ, ಹೀಗಿರಲಿಲ್ಲವಂತೆ
ಅಪ್ಪನ ಕಾಲದಲಿ!
ಎದೆಯ ಮೇಲೆಯೇ ಇದ್ದವಂತೆ ಅವರ ಕಾಲು!
ಶೌಚಗುಂಡಿಯಿಂದ ಮೇಲೇಳದೆ,ಮತ್ತೂ ಕೆಲವರು ಬೊಗಸೆ ನೀರಿಗಾಗಿ ಮೈಮೇಲೆ ಮಲ ಸುರುವಿಕೊಂಡ ದಿನ,
ಮತ್ತೆ ಹುಟ್ಟುತ್ತಲೇ ಇರುತ್ತಾರೆ
ಕೆಲವರಂತೂ ಸತ್ತ ಮೇಲೂ ಮತ್ತೆ ಮತ್ತೆ ಸಾಯುತ್ತಾರೆ.ಹೆಣ ಸಾಗಿಸಲು,ಹೂಳಲು ಜಾಗವಿಲ್ಲದೆ.
ಹೀಗೆ ಮತ್ತೆ ಹುಟ್ಟಿ, ಮತ್ತೆ ಸಾಯುವಾಗ ಹೆಣಗಾಡುತ್ತದೆ ನನ್ನೂರು,ಉಸಿರಾಡಲು ಕೊಸರಾಡುತ್ತದೆ ಸಂವಿಧಾನ!
ಬಿ.ಶ್ರೀನಿವಾಸ