ಹರಿಹರ (Davanagere ): “ಮಹಾತ್ಮ ಗಾಂಧಿ ನರೇಗಾ ಯೋಜನೆ” ಯಡಿ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಲುವೆ ಹೂಳು ತೆಗೆಯುವ ಕಾಮಗಾರಿಗಳ ಅನುಷ್ಠಾನದಲ್ಲಿ ಅಳತೆ ಪುಸ್ತಕದಲ್ಲಿ ದಾಖಲಾಗಿರುವ ಅಳತೆ ಹಾಗೂ ವಾಸ್ತವ ಅಳತೆಯಲ್ಲಿ ಬಹಳ ವ್ಯತ್ಯಾಸಗಳು ಗ್ರಾಮ ಸಭೆಯ ವರದಿಯಲ್ಲಿ ಕಂಡುಬಂದಿದ್ದು ಈ ಸಂಬಂಧ ಹರಿಹರ ತಾಪಂ ಇಒ ಎಸ್.ಪಿ.ಸುಮಲತಾ, ನರೇಗಾ ಪ್ರಭಾರ ಸಹಾಯಕ ನಿರ್ದೇಶಕರು ಸುನಿಲ್ ಕುಮಾರ್, ತಾಂತ್ರಿಕ ಇಂಜಿನಿಯರ್ ವಿಶ್ವನಾಥ (ಸಿವಿಲ್), ತಾಂತ್ರಿಕ ಸಂಯೋಜಕ ರಂಗನಾಥ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಂಚಾಲಕ ಆರ್ ಶ್ರೀ ನಿವಾಸ್ ಮಾತನಾಡಿ, ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಅವರಿಂದ ರಚಿಸಿದ ತಂಡದ ವರದಿಯ ಪ್ರಕಾರ ಒಟ್ಟು ಎಂಟು ಕಾಲುವೆ ಹೂಳು ತೆಗೆಯುವ ಕಾಮಗಾರಿಗಳನ್ನು ಪರಿಶೀಲಿನೆ ಮಾಡಿದ್ದು, ಪ್ರತಿ ಕಾಮಗಾರಿಯ ಅನುಷ್ಠಾನದಲ್ಲಿ ಅಳತೆ ಪುಸ್ತಕದಲ್ಲಿ ದಾಖಲಾಗಿರುವ ಪರಿಮಾಣದ ಅಳತೆ ಹಾಗೂ ಭೌತಿಕವಾಗಿ ಕಾಮಗಾರಿ ಸ್ಥಳದಲ್ಲಿ ಲಭ್ಯವಿರುವ ಹೂಳು ಪ್ರಮಾಣದಲ್ಲಿ ವ್ಯತ್ಯಾಸವಿದೆ. ಎಲ್ಲಾ ಎಂಟು ಕಾಮಗಾರಿಗಳಲ್ಲಿ ಕಂಡು ಬಂದ ವ್ಯತ್ಯಾಸದ ಪರಿಮಾಣ 2716.48 ಕ್ಯೂ ಮೀಗಳಿಗೆ ಪ್ರತಿಯೊಂದು ಕ್ಯೂಬಿಕ್ ಮೀಟರ್ ಹೂಳು ತೆಗೆಯಲು ಅಳತೆ ಪುಸ್ತಕದಲ್ಲಿ ದಾಖಲಿಸಿರುವ ದರ ರೂ 339.56 ರಂತೆ ಒಟ್ಟು ರೂ 9,63,941-00 ರೂಗಳನ್ನು ಹೆಚ್ಚುವರಿಯಾಗಿ ಕೂಲಿ ಪಾವತಿ ಮಾಡಿರುವುದು ಕಂಡುಬಂದಿದೆ ಎಂದು ದೂರಿದರು.
ಈ ಹಿನ್ನಲೆಯಲ್ಲಿ ರೂ 9,63,941 ರೂಗಳನ್ನು ಸಂಬಂಧಪಟ್ಟವರಿಂದ ಇಂಜಿನಿಯರ್ ಶ್ರೀ ವಿಶ್ವನಾಥ್ (ಸಿವಿಲ್) ಶೇ.70 ರೂ (674759-00) ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಚೆಕ್ ಮೆಸರ್ ಮೆಂಟ್ ಮಾಡಿದವರು ಶೇ.30 ರೂ, 2,89,182-00) ಇವರಿಂದ ವಸೂಲಿ ಮಾಡಲು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ದಿನಾಂಕ : 9.05.2024ರಂದು ಸೂಚಿಸಿದ್ದಾರೆ ಎಂದು ಅಪಾದಿಸಿದರು.
ಈ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ 23-5-2024 ರಂದು ಜಿಪಂ ಸಿಇಒ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಾಗಿಲ್ಲ. ಹರಿಹರ ತಾಲೂಕಿನಲ್ಲಿ ಕೂಲಿ ಕಾರ್ಮಿಕರನ್ನು ಕೇವಲ ಫೋಟೋಕ್ಕಾಗಿ ಮಾತ್ರ ಸೀಮಿತ ಮಾಡಿ ಯಂತ್ರೋಪಕರಣಗಳನ್ನು (ಜೆಸಿಬಿ) ಉಪಯೋಗಿಸಿಕೊಂಡು ಕಾಮಗಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಧಿಕಾರಿಗಳು ಸಹ ಶ್ಯಾಮಿಲು ಅಗಿರುವುದು ಕಂಡುಬಂದಿದೆ ಎಂದು ಹರಿಹರ ತಾಲ್ಲೂಕು ಡಿಎಸ್‌ಎಸ್ ಸಂಘ ಹಾಗೂ ರೈತ ಸಂಘಟನೆಗಳ ಮುಖಂಡರು ಆರೋಪಿಸಿದರು.
Read also : Davanagere news | ಪ್ರಾರ್ಚಾಯ ವಿರೂಪಾಕ್ಷಪ್ಪ ಅವರಿಗೆ ಸನ್ಮಾನ
ಈ ಕೂಡಲೇ ಆಕ್ರಮ ಎಸಗಿ ಸರಕಾರಕ್ಕೆ ನಷ್ಟ ಉಂಟು ಮಾಡಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು, ನಷ್ಟವನ್ನು ಮರುಪಾವತಿ ಮಾಡಿಕೊಂಡು ಕ್ರಿಮಿನಲ್ ಮೊಕದ್ದಮೆ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ತಿಪ್ಪೇಶ್ ದೇವರೆಡ್ಡಿ, ಸಂತೋಷ್, ರಘು, ರೈತ ಮುಖಂಡ ಪರಮೇಶ್ವರಪ್ಪ, ಉಪಸ್ಥಿತರಿದ್ದರು.