ದಾವಣಗೆರೆ.ಸೆ.12 (Davangere District) : ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ತಮಟೆ ಚಳವಳಿ ನಡೆಸಿದರು.
ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ಚಳುವಳಿ ನಡೆಸಿದರು. ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿಗೆ ತರುವಂತೆ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಒಳಮೀಸಲಾತಿ ಕಲ್ಪಿಸುವ ಅಧಿಕಾರ ಆಯಾ ರಾಜ್ಯಗಳಿಗೆ ನೀಡಿದೆ. ಅದ್ದರಿಂದ ರಾಜ್ಯ ಸರಕಾರ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
Read also : Davanagere news | ಉತ್ತಮ ಆರೋಗ್ಯ ಸೇವೆ ಒದಗಿಸುವುದು ಶಿಬಿರದ ಉದ್ದೇಶ : ಸುಬ್ರಹ್ಮಣ್ಯ ಶ್ರೇಷ್ಠಿ
ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ ಮಾತನಾಡಿ, ಒಳ ಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ತೆರೆ ನೀಡಿ ಒಂದು ತಿಂಗಳ ಕಳೆದರೂ ರಾಜ್ಯ ಸರ್ಕಾರ ಆದೇಶವನ್ನು ಅನುಷ್ಠಾನಗೊಳಿಸದೆ ನಿದ್ದೆ ನಿದ್ದೆ ಹೊಡೆಯುತ್ತಿದೆ. ಈ ನಿದ್ದೆ ಹೊಡೆಯುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಮಿತಿಯ ದಾವಣಗೆರೆ ತಾಲ್ಲೂಕುಸಂಚಾಲಕ ಹನುಮಂತಪ್ಪ ಅಣಜಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಬೇತೂರು, ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಬಿ.ಚಿತ್ತಾನಹಳ್ಳಿ, ಮಹಿಳಾ ಸಂಚಾಲಕರಾದ ಕೆ.ವಿಜಯಲಕ್ಷ್ಮಿ , ತಿಮ್ಮೇನಹಳ್ಳಿ ತಿಪ್ಪೇಶಿ , ಕರಿಬಸಪ್ಪ, ನೆರಳು -ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತರು ಭಾಗವಹಿಸಿದ್ದರು.